ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ 
ದೇಶ

'ಒಂದೇ ಕೋಟೆ, ಇಬ್ಬರು ಆಡಳಿತಗಾರರು': Purana Qilaದಲ್ಲಿ ಸಹಬಾಳ್ವೆಯ ಸಂದೇಶ ಸಾರಿದ ಪಾಕ್ ಸಚಿವ ಮುಸಾದಿಕ್ ಮಲಿಕ್..!

ಇಬ್ಬರೂ ದೊರೆಗಳಿಗೆ ಸಂಬಂಧಿಸಿದ ಈ ಕೋಟೆ ವಿಭಿನ್ನ ಐತಿಹಾಸಿಕ ಅಸ್ಮಿತೆಗಳ ಸಂಗಮವನ್ನು ಪ್ರತಿನಿಧಿಸುತ್ತದೆ. ನಾವೀಗ ಕುಳಿತಿರುವ ಈ ಕೋಟೆಯೇ ಒಂದು ಕಥೆಯನ್ನು ಹೇಳುತ್ತದೆ. ತೈಮೂರಿ ರಾಜವಂಶದ ಹಿನ್ನೆಲೆ ಹೊಂದಿದ್ದ, ಮಧ್ಯ ಏಷ್ಯಾದಿಂದ ಬಂದ ಹುಮಾಯೂನ್ ಈ ಕೋಟೆಯ ಅಡಿಪಾಯ ಹಾಕಿದರು.

ನವದೆಹಲಿ: ದೆಹಲಿಯ ಐತಿಹಾಸಿಕ ಪುರಾಣ ಕಿಲ್ಲಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (SCO) ಮೊದಲ ನಾಗರಿಕ ಸಂವಾದ ವೇದಿಕೆಯಲ್ಲಿ (Civilisational Dialogue Forum) ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಅವರು ಭಾರತ ಮತ್ತು ಪಾಕಿಸ್ತಾನದ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿದ್ದಾರೆ.

ನವೆಂಬರ್ 20 ರಿಂದ 22 ರವರೆಗೆ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಈ ಮೂರು ದಿನಗಳ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.

ಶನಿವಾರ ನಡೆದ 'ನಾಗರಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳು' ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮುಸಾದಿಕ್ ಮಲಿಕ್, ಪುರಾಣ ಕಿಲ್ಲಾದ ಇತಿಹಾಸವನ್ನು ಶ್ಲಾಘಿಸಿದರು.

ಇಬ್ಬರೂ ದೊರೆಗಳಿಗೆ ಸಂಬಂಧಿಸಿದ ಈ ಕೋಟೆ ವಿಭಿನ್ನ ಐತಿಹಾಸಿಕ ಅಸ್ಮಿತೆಗಳ ಸಂಗಮವನ್ನು ಪ್ರತಿನಿಧಿಸುತ್ತದೆ. ನಾವೀಗ ಕುಳಿತಿರುವ ಈ ಕೋಟೆಯೇ ಒಂದು ಕಥೆಯನ್ನು ಹೇಳುತ್ತದೆ. ತೈಮೂರಿ ರಾಜವಂಶದ ಹಿನ್ನೆಲೆ ಹೊಂದಿದ್ದ, ಮಧ್ಯ ಏಷ್ಯಾದಿಂದ ಬಂದ ಹುಮಾಯೂನ್ ಈ ಕೋಟೆಯ ಅಡಿಪಾಯ ಹಾಕಿದರು. ಬಳಿಕ ಅಫ್ಘಾನ್ ಮೂಲದ ಶೇರ್ ಷಾ ಸೂರಿ ಇದರ ನಿರ್ಮಾಣವನ್ನು ಮುಂದುವರಿಸಿದರು. ಒಂದೇ ಗೋಡೆ, ಇಬ್ಬರು ಎದುರಾಳಿಗಳು, ಅಂದರೆ ಇಬ್ಬರು ದೊರೆಗಳು ಮತ್ತು ಒಂದೇ ಕೋಟೆ. ಇದು ಇತಿಹಾಸದ ಎರಡು ಪದರಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.

ಮಲಿಕ್ ಅವರ ಕಚೇರಿ ಈ ಹೇಳಿಕೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಪುರಾಣ ಕಿಲಾವನ್ನು ಒಂದು ಕಥೆ ಎಂದು ಬಣ್ಣಿಸಿದೆ.

ಭಾರತವು ನವೆಂಬರ್ 20ರಿಂದ 22ರವರೆಗೆ ಐತಿಹಾಸಿಕ ಪುರಾಣ ಕಿಲಾದಲ್ಲಿ ಮೂರು ದಿನಗಳ ಕಾಲ ಸಮ್ಮೇಳನವನ್ನು ಆಯೋಜಿಸಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.

ಪಾಕಿಸ್ತಾನ ಸೇರಿದಂತೆ ಶಾಂಘೈ ಸಹಕಾರ ಸಂಘಟನೆಯ ವಿವಿಧ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದಾರೆ.

2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಮಲಿಕ್, ವಿಭಿನ್ನ ಅಸ್ಮಿತೆಗಳು ಮತ್ತು ವೈವಿಧ್ಯಮಯ ನಾಗರಿಕತೆಗಳ ನಡುವೆ ಮಾತ್ರ ಸಂವಾದ ಸಾಧ್ಯ ಎಂದು ಹೇಳಿದರು.

ಸಂವಾದ ನಡೆಯುವುದು ವಿಭಿನ್ನ ಅಸ್ಮಿತೆಗಳ ನಡುವೆ, ವೈವಿಧ್ಯತೆಯ ನಡುವೆ. ಅಂತಹ ಸಂವಾದಕ್ಕಾಗಿ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಅವರು ತಿಳಿಸಿದರು. ಇದೇ ವೇಳೆ ವಿಚಾರಗಳು ಮತ್ತು ಸಾಂಸ್ಕೃತಿಕ ಅಸ್ಮಿತೆಗಳ ಮುಕ್ತ ವಿನಿಮಯದ ಮಹತ್ವವನ್ನೂ ಒತ್ತಿಹೇಳಿದರು.

ಬಳಿಕ ಗ್ರೀಕ್ ಭಾಷೆಯಲ್ಲಿ 'ಸಂವಾದ' ಎಂಬ ಪದದ ಅರ್ಥವನ್ನು ವಿವರಿಸಿದ ಮಲಿಕ್, 'ಡಿಯಾ' ಎಂದರೆ ಮೂಲಕ ಮತ್ತು 'ಲಾಗೋಸ್' ಎಂದರೆ ವಿಚಾರಗಳು ಎಂದು ಹೇಳಿದರು.

ನಾಗರಿಕತೆಗಳ ನಡುವೆ ವಿಚಾರಗಳ ಮುಕ್ತ ಹರಿವೇ ಸಂವಾದದ ಮೂಲ ಆಶಯವಾಗಿದೆ. ವೈವಿಧ್ಯತೆಯನ್ನು ಸ್ವೀಕರಿಸಲು ವಿವೇಕ ಮತ್ತು ಧೈರ್ಯ ಎರಡೂ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಹಂಚಿಕೊಂಡಿರುವ ಸಾಂಸ್ಕೃತಿಕ ಪರಂಪರೆ ಎಸ್‌ಸಿಒ ರಾಷ್ಟ್ರಗಳನ್ನು ಬೆಸೆಯುವ ಬಲವಾದ ಸೇತುವೆಯಾಗಿದೆ ಎಂದು ಹೇಳಿದರು.

ಐತಿಹಾಸಿಕ ಸಂಬಂಧಗಳು ದೇಶಗಳನ್ನು ಹತ್ತಿರ ತಂದಿದ್ದು, ಸಾಂಸ್ಕೃತಿಕ ಸಹಕಾರ, ಪರಸ್ಪರ ತಿಳುವಳಿಕೆ ಮತ್ತು ಸ್ನೇಹ ವೃದ್ಧಿಗೆ ಸಾಕಷ್ಟು ಅವಕಾಶಗಳಿವೆ ಎಂದರು.

ನಮ್ಮ ನಾಗರಿಕತೆಗಳು ಕೇವಲ ಗತಕಾಲದ ಪರಂಪರೆಗಳಲ್ಲ. ಅವು ಜೀವಂತ ಸಂಪ್ರದಾಯಗಳಾಗಿದ್ದು, ಅವುಗಳ ಜ್ಞಾನ ವರ್ತಮಾನಕ್ಕೆ ಬೆಳಕು ನೀಡುವುದರ ಜೊತೆಗೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.

ಈ ವೇದಿಕೆಯು ಎಸ್‌ಸಿಒ ಸದಸ್ಯ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುವ ಮತ್ತು ನಾಗರಿಕತೆಗಳ ನಡುವಿನ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವ ವೇದಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಭಾರತವು ಈ ಐತಿಹಾಸಿಕ ತಾಣವನ್ನು ಬಳಸಿಕೊಂಡು ಸಾವಿರಾರು ವರ್ಷಗಳ ಇತಿಹಾಸದ ವಿವಿಧ ಪದರಗಳನ್ನು ಒಳಗೊಂಡ ತನ್ನ ನಾಗರಿಕತೆಯ ಪರಂಪರೆಯನ್ನು ಪ್ರದರ್ಶಿಸುತ್ತಿದೆ.

'ಅಸ್ತಿತ್ವ-ದಿ ಎಸೆನ್ಸ್ ಆಫ್ ಅವರ್ ಎಕ್ಸಿಸ್ಟೆನ್ಸ್' ಎಂಬ ವಿಶೇಷ ಪ್ರದರ್ಶನವು ಕ್ರಿ.ಪೂ. 1200ರಿಂದ ಕ್ರಿ.ಶ. 1200ರವರೆಗಿನ ದೆಹಲಿಯ ಇತಿಹಾಸವನ್ನು ಪುರಾತತ್ವ ಸಾಕ್ಷ್ಯಗಳ ಮೂಲಕ ಪರಿಚಯಿಸುತ್ತದೆ. ಉತ್ಖನನದಲ್ಲಿ ದೊರೆತ ಅವಶೇಷಗಳು, ಪ್ರಾಚೀನ ವಸ್ತುಗಳು ಮತ್ತು ವಾಸ್ತುಶಿಲ್ಪದ ತುಣುಕುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಶನಿವಾರ ದಕ್ಷಿಣ ದೆಹಲಿಯ ಕಿಲಾ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಆಯೋಜಿಸಲಾಗಿದ್ದ 'ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್' ಎಂಬ ಪ್ರದರ್ಶನಕ್ಕೂ ಪ್ರತಿನಿಧಿಗಳು ಭೇಟಿ ನೀಡಿದರು.

ಶುಕ್ರವಾರದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಪುರಾಣ ಕಿಲಾವನ್ನು ಅಸಾಧಾರಣ ಪರಂಪರೆಯ ತಾಣ ಎಂದು ಬಣ್ಣಿಸಿದ್ದರು. ಇದರ ಇತಿಹಾಸ ಮಹಾಭಾರತದ ಕಾಲಘಟ್ಟದವರೆಗೂ ವಿಸ್ತರಿಸಿದೆ ಎಂದು ವಿದ್ವಾಂಸರು ಗುರುತಿಸಿದ್ದಾರೆ ಎಂದು ತಿಳಿಸಿದ್ದರು.

ಸಾಂಪ್ರದಾಯಿಕವಾಗಿ ಇಂದ್ರಪ್ರಸ್ಥವೆಂದು ಗುರುತಿಸಲ್ಪಡುವ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಈ ಕೋಟೆಯನ್ನು ಹುಮಾಯೂನ್ ತನ್ನ ಹೊಸ ರಾಜಧಾನಿ ದೀನ್‌ಪನಾಹ್‌ನ ಭಾಗವಾಗಿ ಅಭಿವೃದ್ಧಿಪಡಿಸಿದ್ದರು. ಹುಮಾಯೂನ್ ಅವರನ್ನು ಸೋಲಿಸಿ ಅಧಿಕಾರಕ್ಕೇರಿದ ಶೇರ್ ಷಾ ಸೂರಿ ಬಳಿಕ ಕೋಟೆಯ ನಿರ್ಮಾಣ ಕಾರ್ಯವನ್ನು ಮುಂದುವರಿಸಿದ್ದರು.

ಶುಕ್ರವಾರ ಭಾರತ ಭೇಟಿಯ ಉದ್ದೇಶ ಬಹುಪಕ್ಷೀಯ ವೇದಿಕೆಯಲ್ಲಿ ಚರ್ಚೆ ನಡೆಸುವುದಾಗಿದೆ ಎಂದು ಮಲಿಕ್ ಹೇಳಿದ್ದರು.

ಈ ವೇದಿಕೆಯು ಭಾರತ-ಪಾಕಿಸ್ತಾನ ಸಂಬಂಧ ಸುಧಾರಣೆಗೆ ನೆರವಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚರ್ಚೆಗಳು ಬಹುಪಕ್ಷೀಯ ಚೌಕಟ್ಟಿನಲ್ಲಿ ನಡೆಯುತ್ತಿವೆ ಎಂದು ತಿಳಿಸಿದ್ದರು. ಉಭಯ ದೇಶಗಳ ನಡುವೆ ಸಂವಾದಕ್ಕೆ ಸಾಂಸ್ಕೃತಿಕ ವಿನಿಮಯ ಸಹಕಾರಿಯಾಗಬಲ್ಲದು ಎಂಬುದನ್ನೂ ಅವರು ಒತ್ತಿಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ಒಂದೇ ಕುಟುಂಬದ 9 ಮಂದಿ ದುರ್ಮರಣ..!

ರಣ್ ಆಫ್ ಕಚ್ ಪ್ರವಾಸ ಮುಗಿಸಿ ಮರಳುತ್ತಿದ್ದಾಗ ಘೋರ ದುರಂತ: 3 ತಿಂಗಳ ಕಂದಮ್ಮ ಸೇರಿ ಒಂದೇ ಸೇನಾ ಯೋಧನ ಕುಟುಂಬದ 7 ಮಂದಿ ದುರ್ಮರಣ

ಹಿರಿಯೂರು ಉಪಚುನಾವಣೆಗೆ ರಣಕಹಳೆ: ದಿನಾಂಕ ಘೋಷಣೆಗೂ ಮುನ್ನವೇ ರಂಗೇರಿದ ಅಖಾಡ; ಅನುಕಂಪದ ಅಲೆ v/s ಮೈತ್ರಿ ಬಲ, ಯಾರ ಪಾಲಾಗಲಿದೆ ಕ್ಷೇತ್ರ..?

ಕ್ರಿಕೆಟ್ ಮೈದಾನದಿಂದ ರಾಜಕೀಯ ಅಖಾಡಕ್ಕೆ ಚತುರ್ ಚಾಹಲ್: ಬಿಜೆಪಿ ಒಬಿಸಿ ಮೋರ್ಚಾದಲ್ಲಿ ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಾಹಲ್‌ಗೆ ಹೊಸ ಜವಾಬ್ದಾರಿ

ಹಿರಿಯೂರು ಬೈಎಲೆಕ್ಷನ್: ಮೈತ್ರಿ ಪಕ್ಷಗಳಿಗೆ ಮೊದಲ ಪರೀಕ್ಷೆ; ಅಭ್ಯರ್ಥಿ ಆಯ್ಕೆ ಅಮಿತ್ ಶಾ ಕೈಯಲ್ಲಿ, ಯಾರಿಗೆ ಒಲಿಯಲಿದೆ ಟಿಕೆಟ್?