ಜೂಜು ಅಡ್ಡೆ ಮೇಲೆ ದಾಳಿ: ತಮಿಳುನಾಡು ಪೊಲೀಸರ ಮೇಲೆ ಕರ್ನಾಟಕ ಜನರ ಗುಂಪಿನಿಂದ ಸತತ ಮೂರು ಗಂಟೆಗಳ ಕಾಲ ಹಲ್ಲೆ!
ಕಾರ್ತಿಕೈ ದೀಪಂ ಹಬ್ಬದ ಅಂಗವಾಗಿ ನಡೆಯುವ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಮೈಸೂರಿನಿಂದ ಸುಮಾರು 500ಕ್ಕೂ ಹೆಚ್ಚು ಜನರು ದೇವಾಲಯದಲ್ಲಿ ಸೇರಿದ್ದರು.
ಚೆನ್ನೈ: ಈರೋಡ್ ಜಿಲ್ಲೆಯ ತಲವಾಡಿ ಪೊಲೀಸ್ ಠಾಣೆಗೆ ಸೇರಿದ ಸಬ್-ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್ಸ್‌ಟೇಬಲ್‌ಗಳ ಮೇಲೆ, ಸೋಮವಾರ ಮುಂಜಾನೆ ಕರ್ನಾಟಕದ ನೂರಾರು ಜನರ ಗುಂಪೊಂದು ಹಲ್ಲೆ ನಡೆಸಿದೆ.
ಕೊಂಗಹಳ್ಳಿ ಗ್ರಾಮದಲ್ಲಿರುವ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಶಂಕೆಯ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ರಾತ್ರಿ 1 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ, ಸುಮಾರು ಮೂರು ಗಂಟೆಗಳ ಕಾಲ ಹಲ್ಲೆ ನಡೆದಿದ್ದು ಗಾಯಗೊಂಡ ಪೊಲೀಸರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿ, ತಲವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ಕಾರ್ತಿಕೈ ದೀಪಂ ಹಬ್ಬದ ಅಂಗವಾಗಿ ನಡೆಯುವ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಮೈಸೂರಿನಿಂದ ಸುಮಾರು 500ಕ್ಕೂ ಹೆಚ್ಚು ಜನರು ದೇವಾಲಯದಲ್ಲಿ ಸೇರಿದ್ದರು. ಕಾರ್ತಿಕೈ ದೀಪಂ ಸಂದರ್ಭದಲ್ಲಿ ಜನವರಿ 7ರವರೆಗೆ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಕರ್ನಾಟಕದ ಮೈಸೂರು, ಮಂಡ್ಯ ಮತ್ತು ಗುಂಡ್ಲುಪೇಟೆ ಪ್ರದೇಶಗಳ ವಿವಿಧ ಸಮುದಾಯಗಳಿಗೆ ಸೇರಿದ ಜನರು ಈ ವಿಧಿವಿಧಾನಗಳಲ್ಲಿ ಭಾಗವಹಿಸಲು ನಿಯಮಿತವಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಸಂಜೆ 500ಕ್ಕೂ ಹೆಚ್ಚು ಜನರು ದೇವಾಲಯಕ್ಕೆ ಆಗಮಿಸಿದ್ದರು. ಆ ರಾತ್ರಿ, ದೇವಾಲಯದ ಆವರಣದ ಬಳಿ ಕೆಲವರು ಜೂಜಾಟವಾಡುತ್ತಿದ್ದು, ಅವರ ನಡುವೆ ಜಗಳ ನಡೆಯುತ್ತಿದೆ ಎಂಬ ಮಾಹಿತಿ ತಲವಾಡಿ ಪೊಲೀಸರಿಗೆ ಸಿಕ್ಕಿತು. ಕೂಡಲೇ, ಸಮವಸ್ತ್ರದಲ್ಲಿದ್ದ ಸಬ್-ಇನ್ಸ್‌ಪೆಕ್ಟರ್ ಪ್ರಭು ಹಾಗೂ ಸಾಮಾನ್ಯ ಉಡುಪಿನಲ್ಲಿದ್ದ ಕಾನ್ಸ್‌ಟೇಬಲ್‌ಗಳಾದ ರಮೇಶ್, ಅಳಗೇಶನ್ ಮತ್ತು ಮಾರ್ಟಿನ್ ಸ್ಥಳಕ್ಕೆ ಧಾವಿಸಿದರು. ಜಗಳದಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದರು, ಇದರ ಬೆನ್ನಲ್ಲೇ ಅಲ್ಲಿ ನೆರೆದಿದ್ದ ಗುಂಪು ಚದುರಿಹೋಯಿತು.
ಆದರೆ, ನಂತರ ಅವರಲ್ಲಿ ಕೆಲವರು ಪೊಲೀಸರನ್ನು ಸುತ್ತುವರೆದರು ಎಂದು ಮೂಲಗಳು ತಿಳಿಸಿವೆ. ಮದ್ಯದ ಅಮಲಿನಲ್ಲಿದ್ದ ಗುಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿತು. ಪೊಲೀಸರು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿ ಸ್ಥಳೀಯರ ಸಹಾಯ ಕೋರಿದರೂ, ಯಾರೊಬ್ಬರೂ ಅವರನ್ನು ರಕ್ಷಿಸಲು ಮುಂದೆ ಬರಲಿಲ್ಲ ಎಂದು ಹೇಳಲಾಗಿದೆ.
ಕಾನ್ಸ್‌ಟೇಬಲ್ ಅಳಗೇಶನ್ ಅಲ್ಲಿಂದ ತಪ್ಪಿಸಿಕೊಂಡು, ಕಾಡಿನ ಮೂಲಕ ನಡೆದುಕೊಂಡು ಪಾಲಯಂ ಎಂಬ ಪ್ರದೇಶವನ್ನು ತಲುಪಿದ್ದಾರೆ. ಅಲ್ಲಿಂದ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆಗ ಎರಣಹಳ್ಳಿ ಪ್ರದೇಶದಲ್ಲಿ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದರು.
ಅರಣ್ಯ ಇಲಾಖೆಯ ಸಿಬ್ಬಂದಿ ಮಧ್ಯಪ್ರವೇಶಿಸಿದರೂ, ಆ ಗುಂಪು ಪೊಲೀಸರನ್ನು ನಕಲಿ ಅಧಿಕಾರಿಗಳೆಂದು ಆರೋಪಿಸಿ ಹಲ್ಲೆಯನ್ನು ಮುಂದುವರಿಸಿತು ಎಂದು ತಿಳಿದುಬಂದಿದೆ. ಅಂತಿಮವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ, ಆ ಮೂವರು ಪೊಲೀಸರನ್ನು ತಮ್ಮ ವಾಹನದಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆತಂದು, ಚಿಕಿತ್ಸೆಗಾಗಿ ತಲವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ, ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಈ ಘಟನೆಯ ಬಗ್ಗೆ ತಮಗೆ ತಿಳಿದಿಲ್ಲವೆಂದೂ, ಈ ಕುರಿತು ಪರಿಶೀಲಿಸುವುದಾಗಿಯೂ ಈರೋಡ್ ಜಿಲ್ಲಾಧಿಕಾರಿ ಎಸ್. ಕಂದಸಾಮಿ ತಿಳಿಸಿದ್ದಾರೆ.
3 ಗಂಟೆಗಳ ಕಾಲ ಹಲ್ಲೆ
ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ, ದೇವಸ್ಥಾನದ ಧಾರ್ಮಿಕ ವಿಧಿಗಾಗಿ ಕರ್ನಾಟಕದ ನೂರಾರು ಗ್ರಾಮಸ್ಥರು ಕೊಂಗಹಳ್ಳಿಗೆ ಭೇಟಿ ನೀಡುತ್ತಾರೆ. ಸೋಮವಾರ, ಅಲ್ಲಿ ನಡೆಯುತ್ತಿದ್ದ ಜೂಜಾಟವನ್ನು ತಡೆಯಲು ತೆರಳಿದ್ದ ತಮಿಳುನಾಡು ಪೊಲೀಸ್ ತಂಡದ ಮೇಲೆ ಗುಂಪೊಂದು ದಾಳಿ ನಡೆಸಿತು. ಪೊಲೀಸರ ಮೇಲೆ 3 ಗಂಟೆಗಳ ಕಾಲ ಹಲ್ಲೆ ನಡೆಸಲಾಯಿತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.