ವಿಕಸಿತ ಭಾರತಕ್ಕೆ ಸಂವಿಧಾನವೇ ದಾರಿದೀಪ: ಸಂವಿಧಾನ ದಿನದಂದು ಅಂಬೇಡ್ಕರ್ ಸ್ಮರಿಸಿದ ಪ್ರಧಾನಿ ಮೋದಿ
77ನೇ ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಶುಭಾಶಯ ಕೋರಿದ್ದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ಸಭೆಯ ಮಹಾನ್ ನಾಯಕರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ನವದೆಹಲಿ: ಸಂವಿಧಾನ ದಿನದ ಅಂಗವಾಗಿ ಗುರುವಾರ ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಂವಿಧಾನವನ್ನು 'ಭಾರತೀಯ ಪ್ರಜಾಪ್ರಭುತ್ವದ ಅಮೂಲ್ಯ ಪರಂಪರೆ' ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಅವರು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಭೆಯ ಇತರ ಸದಸ್ಯರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, 'ನಮ್ಮ ಆಲೋಚನೆ ಮೊದಲು ಭಾರತ ಎಂಬಂತಿರಬೇಕು, ನಾಗರಿಕರು ತಮ್ಮ ಹಕ್ಕುಗಳ ಜೊತೆಗೆ ಸಾಂವಿಧಾನಿಕ ಕರ್ತವ್ಯಗಳಿಗೂ ಆದ್ಯತೆ ನೀಡುವ ಮೂಲಕ 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸಲು ಕೈಜೋಡಿಸಬೇಕು' ಎಂದು ಕರೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
22 ಭಾಷೆಗಳಲ್ಲಿ ಲಭ್ಯ
1949ರ ನವೆಂಬರ್ 26ರಂದು ಸಂವಿಧಾನ ಅಂಗೀಕರಿಸಿದ ಐತಿಹಾಸಿಕ ಕ್ಷಣವನ್ನು ಸ್ಮರಿಸಿದ ಮೋದಿ, ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್, ಕರಡು ಸಮಿತಿ ಅಧ್ಯಕ್ಷ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಮಹಿಳಾ ಸದಸ್ಯರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಜೊತೆಗೆ, 1950ರ ನಂತರ ಇದೇ ಮೊದಲ ಬಾರಿಗೆ ಸಂವಿಧಾನದ ಪರಿಷ್ಕೃತ ಆವೃತ್ತಿಯು ಎಂಟನೇ ಅನುಸೂಚಿಯ ಎಲ್ಲಾ 22 ಅಧಿಕೃತ ಭಾಷೆಗಳಲ್ಲಿ ಲಭ್ಯವಿದ್ದು, ಇದು ಸಂವಿಧಾನವನ್ನು ಸಾಮಾನ್ಯ ಜನರಿಗೆ ಮತ್ತಷ್ಟು ಹತ್ತಿರವಾಗಿಸಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾನ್ಯ ಹಿನ್ನೆಲೆಯಿಂದ ಪ್ರಧಾನಿ ಹುದ್ದೆವರೆಗೆ..
ಮುಂದುವರೆದು, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ, ಸಾಮಾನ್ಯ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದ ತಮಗೆ 24 ವರ್ಷಗಳಿಗೂ ಹೆಚ್ಚು ಕಾಲ ಜನಸೇವೆ ಮಾಡುವ ಮತ್ತು ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದೇ ಭಾರತದ ಸಂವಿಧಾನದ ಶಕ್ತಿಯಿಂದ ಎಂದ ಮೋದಿ, 2014ರಲ್ಲಿ ಮೊದಲ ಬಾರಿ ಸಂಸತ್ತು ಪ್ರವೇಶಿಸಿದಾಗ ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸಿದ್ದನ್ನು ಹಾಗೂ 2019ರಲ್ಲಿ ಸಂವಿಧಾನದ ಪ್ರತಿಯನ್ನು ಹಣೆಗೆ ಒತ್ತಿಕೊಂಡು ಗೌರವ ಸಲ್ಲಿಸಿದ್ದನ್ನು ಸ್ಮರಿಸಿದ್ದಾರೆ. ಇದೆ ವೇಳೆ, ತಮ್ಮ ವೀಡಿಯೊ ಸಂದೇಶದಲ್ಲಿ "ಬಹುಧಾ ಬಹುಭಿಃ ಸಾರ್ಧಂ ಚಿಂತಿತಾಃ ಸುನಿರೂಪಿತಾಃ | ಕಥಂಚಿನ್ನ ವಿಲೀಯಂತೇ ವಿದ್ವದ್ಭಿಶ್ಚಿಂತಿತಾ ನಯಾಃ ||" ಎಂಬ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿರುವ ಪ್ರಧಾನಿ, ವಿದ್ವಾಂಸರು ಸುದೀರ್ಘವಾಗಿ ಚರ್ಚಿಸಿ ರೂಪಿಸಿದ ತತ್ವಗಳು ಮತ್ತು ನೀತಿಗಳು ಎಂದಿಗೂ ನಾಶವಾಗುವುದಿಲ್ಲ ಎಂದು ಸಂವಿಧಾನದ ಗಟ್ಟಿತನವನ್ನು ಶ್ಲಾಘಿಸಿದ್ದಾರೆ.
ಇದೆ ವೇಳೆ, ಪಿಎಂ ಆವಾಸ್, ಉಜ್ವಲ, ಆಯುಷ್ಮಾನ್ ಭಾರತ್, ಮುದ್ರಾ ಹಾಗೂ ಯುಪಿಐ ನಂತಹ ಡಿಜಿಟಲ್ ತಂತ್ರಜ್ಞಾನಗಳು ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ತಳಮಟ್ಟಕ್ಕೆ ತಲುಪಿಸಿದ್ದು, ವಿಶ್ವಬ್ಯಾಂಕ್ ವರದಿಯ ಪ್ರಕಾರ ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ಉಲ್ಲೇಖಿಸಿದ ಮೋದಿ, 370 ಮತ್ತು 35(A) ವಿಧಿಗಳನ್ನು ರದ್ದುಗೊಳಿಸಿದ ಪರಿಣಾಮ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಿದೆ. ಅಲ್ಲದೆ, ನಕ್ಸಲಿಸಂ ಅನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿರುವುದರಿಂದ ದೇಶದ ಕಟ್ಟಕಡೆಯ ಬಡವರೂ ಭಯವಿಲ್ಲದೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುವಂತಾಗಿದೆ ಎಂದು ಹೇಳಿದ್ದಾರೆ.