ಇದೇ ಮೊದಲು: ಗುಜರಾತ್ ನಲ್ಲಿ 'ಹೆದ್ದಾರಿಯನ್ನೇ ರನ್ ವೇ' ಆಗಿ ಬಳಸಿದ ಭಾರತೀಯ ಸೇನಾ ವಿಮಾನಗಳು! ಅದ್ಭುತ ಪ್ರದರ್ಶನ, Video
'ವಿಂಗ್ಸ್ ಆಫ್ ವ್ಯಾಲರ್ ಅಂಡ್ ಯೂನಿಟಿ ಎಕ್ಸ್‌ಪೆಡಿಷನ್' (Wings of Valour and Unity Expedition)ಎಂಬ ಅಭಿಯಾನದ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ 754Aರ 946ನೇ ಕಿ.ಮೀ ಮತ್ತು 949ನೇ ಕಿ.ಮೀ ನಡುವಿನ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಜಾಮ್ ನಗರ: ರಾಷ್ಟ್ರೀಯ ಹೆದ್ದಾರಿಗಳನ್ನು ತುರ್ತು ಲ್ಯಾಂಡಿಂಗ್ ತಾಣಗಳಾಗಿ (emergency landing grounds) ಬಳಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯ 'ಟೀಮ್ ಮೌಂಟೇನ್ ಈಗಲ್ಸ್' (Team Mountain Eagles) ತಂಡಕ್ಕೆ ಸೇರಿದ ನಾಲ್ಕು ವಿಮಾನಗಳು ಗುಜರಾತ್‌ನ ಅಮೃತಸರ-ಜಾಮ್‌ನಗರ ಆರ್ಥಿಕ ಕಾರಿಡಾರ್‌ನಲ್ಲಿ ಲ್ಯಾಂಡಿಂಗ್ ಆಗಿದ್ದು, ತದನಂತರ ಅಲ್ಲಿಂದಲೇ ಹಾರಾಟ ನಡೆಸಿವೆ.
'ವಿಂಗ್ಸ್ ಆಫ್ ವ್ಯಾಲರ್ ಅಂಡ್ ಯೂನಿಟಿ ಎಕ್ಸ್‌ಪೆಡಿಷನ್' (Wings of Valour and Unity Expedition)ಎಂಬ ಅಭಿಯಾನದ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ 754Aರ 946ನೇ ಕಿ.ಮೀ ಮತ್ತು 949ನೇ ಕಿ.ಮೀ ನಡುವಿನ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಈ ತಂಡದಲ್ಲಿ ಎರಡು 'ಫಿಕ್ಸೆಡ್-ವಿಂಗ್' (ಸ್ಥಿರ ರೆಕ್ಕೆಗಳಿರುವ) ಲಘು ವಿಮಾನಗಳು ಮತ್ತು ಎರಡು 'ಫ್ಲೆಕ್ಸಿಬಲ್-ವಿಂಗ್' (ಬಾಗಬಲ್ಲ ರೆಕ್ಕೆಗಳಿರುವ) ಪವರ್ಡ್ ಹ್ಯಾಂಗ್ ಗ್ಲೈಡರ್‌ಗಳು ಇದ್ದವು. ಈ ವಿಮಾನಗಳು ಕಂಡ್ಲಾ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿ, ಗುಜರಾತ್‌ನ ಪಾಟನ್ ಜಿಲ್ಲೆಯ ಸಂತಲ್‌ಪುರ ತಾಲೂಕಿನಲ್ಲಿರುವ ಬಕುತ್ರಾ ಟೋಲ್ ಪ್ಲಾಜಾ ಬಳಿ ಲ್ಯಾಂಡಿಂಗ್ ಆದವು.
ಭಾರತೀಯ ಸೇನೆ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಡುವಿನ ಸಹಯೋಗಯೊಂದಿಗೆ ಈ ಐತಿಹಾಸಿಕ ಪ್ರದರ್ಶನ ನಡೆದಿದೆ. ಭಾರತೀಯ ಸೇನೆಯ 'ಟೀಮ್ ಮೌಂಟೇನ್ ಈಗಲ್ಸ್' ತಂಡದ ಲಘು ವಿಮಾನಗಳು ಈ ಯಶಸ್ವಿ ಕಾರ್ಯಾಚರಣೆ ನಡೆಸಿವೆ.
ಈ ತಂಡವು ಮಧ್ಯಪ್ರದೇಶದ ಮಹುವಿನಲ್ಲಿರುವ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ನಲ್ಲಿರುವ 'ಆರ್ಮಿ ಅಡ್ವೆಂಚರ್ ನೋಡಲ್ ಸೆಂಟರ್'ಗೆ ಸೇರಿದ್ದಾಗಿದೆ. ವಿಮಾನಗಳು ಹೆದ್ದಾರಿಯಲ್ಲಿ ಲ್ಯಾಂಡಿಂಗ್ ಆದ ನಂತರ ಅಲ್ಲಿಯೇ ಇಂಧನ ತುಂಬಿಸಿಕೊಳ್ಳುವ ಪ್ರಕ್ರಿಯೆ (refuelling) ನಡೆಯಿತು. ಬಳಿಕ ತಮ್ಮ ಅಭಿಯಾನವನ್ನು ಮುಂದುವರಿಸಲು ವಿಮಾನಗಳು ಅಲ್ಲಿಂದ ಹಾರಾಟ ನಡೆಸಿದವು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ನಾಲ್ಕು ವಿಮಾನಗಳ ಈ ತಂಡವು ಯಶಸ್ವಿಯಾಗಿ ಇಳಿದು, ಇಂಧನ ತುಂಬಿಸಿಕೊಂಡು ಹಾರಾಟ ನಡೆಸಿದ್ದು ಇದೇ ಮೊದಲ ಬಾರಿಯಾಗಿದೆ. ತುರ್ತು ಸಂದರ್ಭಗಳಲ್ಲಿ ಅಥವಾ ಇತರ ಕಾರ್ಯಾಚರಣೆಯ ಅಗತ್ಯತೆಗಳಿದ್ದಾಗ, ಲಘು ವಿಮಾನಗಳಿಗೆ ಪರ್ಯಾಯ ಲ್ಯಾಂಡಿಂಗ್ ತಾಣಗಳಾಗಿ ರಾಷ್ಟ್ರೀಯ ಹೆದ್ದಾರಿಗಳ ಸೂಕ್ತ ಭಾಗಗಳನ್ನು ಬಳಸಬಹುದು ಎಂಬುದನ್ನು ಈ ಪ್ರದರ್ಶನ ತೋರಿಸಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಸಂಪರ್ಕ ವ್ಯವಸ್ಥೆ ಸುಧಾರಣೆ ಮತ್ತು ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವುದರ ಜೊತೆಗೆ, ಹೆದ್ದಾರಿ ಮೂಲಸೌಕರ್ಯವು ಸಶಸ್ತ್ರ ಪಡೆಗಳ ಕಾರ್ಯತಂತ್ರದ ಹಾಗೂ ಕಾರ್ಯಾಚರಣೆಯ ಅಗತ್ಯಗಳನ್ನು ಹೇಗೆ ಪೂರೈಸಬಲ್ಲದು ಎಂಬುದನ್ನು ಈ ಪ್ರದರ್ಶನ ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ.