ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

Delimitation Bill: INDIA ಮೈತ್ರಿಕೂಟಕ್ಕೆ ಶಾಕ್ ನೀಡುತ್ತಾ ಶರದ್ ಪವಾರ್ ಬಣ?: ಸ್ವಪಕ್ಷೀಯ ಸಂಸದರಿಗೇ ತಿಳಿಯದ 'ಬೆಂಬಲ'ದ ಗುಟ್ಟೇನು..?

ಪಕ್ಷದ ಹಿರಿಯ ನಾಯಕರು ಮಸೂದೆಗೆ ಬೆಂಬಲ ಸೂಚಿಸುವ ಸುಳಿವು ನೀಡಿದ್ದರೆ, ಪಕ್ಷದ ಲೋಕಸಭಾ ಸಂಸದರಿಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಸುಪ್ರಿಯಾ ಸುಳೆ
Manjula VN
Updated On : 28 Nov 2026, 4:17 pm

ನವದೆಹಲಿ: ಕೇಂದ್ರ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಸಜ್ಜಾಗಿರುವ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಯನ್ನು ಬೆಂಬಲಿಸುವ ವಿಚಾರದಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಒಳಗೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಪಕ್ಷದ ಹಿರಿಯ ನಾಯಕರು ಮಸೂದೆಗೆ ಬೆಂಬಲ ಸೂಚಿಸುವ ಸುಳಿವು ನೀಡಿದ್ದರೆ, ಪಕ್ಷದ ಲೋಕಸಭಾ ಸಂಸದರಿಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು, ಮಹಿಳಾ ಮೀಸಲಾತಿ ಜಾರಿಗೆ ಕ್ಷೇತ್ರ ಮರುವಿಂಗಡಣೆಯನ್ನು (Delimitation) ಜೋಡಿಸಿರುವ ಸಂವಿಧಾನ ತಿದ್ದುಪಡಿ ಮಸೂದೆಗೆ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್‌ಚಂದ್ರ ಪವಾರ್) ಬೆಂಬಲ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದು, ಜಿಲ್ಲಾ ಮಟ್ಟದ ನಾಯಕರಿಗೆ ಈ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

Advertisement

ಆದರೆ, ಪಕ್ಷದ ಎಂಟು ಸಂಸದರಿಗೆ ಈ ಬಗ್ಗೆ ಅಧಿಕೃತ ನಿಲುವನ್ನು ತಿಳಿಸಿಲ್ಲ ಎಂದು ಪಕ್ಷದ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ನವೆಂಬರ್ 30ರಿಂದ ಆರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸಂಸದರಿಗೆ ಪಕ್ಷದ ವಿಪ್ ಜಾರಿಗೊಳಿಸಿದ್ದರೂ, ಮಸೂದೆ ಕುರಿತ ನಿಲುವಿನ ಬಗ್ಗೆ ಅವರಿಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ಈ ಗೊಂದಲದ ನಡುವೆ, ಮಹಾರಾಷ್ಟ್ರದ ವರ್ಧಾ ಲೋಕಸಭಾ ಕ್ಷೇತ್ರದ ಎನ್‌ಸಿಪಿ (ಎಸ್‌ಪಿ) ಸಂಸದ ಅಮರ್ ಕಾಳೆ, ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಲೋಕಸಭೆಯಲ್ಲಿ ಮತ ಚಲಾಯಿಸುತ್ತೇನೆ ಎಂದು ಹೇಳಿದ್ದಾರೆ.

ಸುಪ್ರಿಯಾ ಸುಳೆ ಅವರು ಪಕ್ಷದ ನಿಲುವನ್ನು ಈವರೆಗೆ ಬಹಿರಂಗವಾಗಿ ಖಚಿತಪಡಿಸಿಲ್ಲ. ಶುಕ್ರವಾರ ಮಾತನಾಡಿದ್ದ ಅವರು, ಮಸೂದೆಯ ಕರಡನ್ನು ಪರಿಶೀಲಿಸಿದ ಬಳಿಕ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ ಎಂದು ಹೇಳಿದ್ದರು.

ನವೆಂಬರ್ 26ರಂದು ನಡೆದ ಸಭೆಯಲ್ಲಿ ಸುಪ್ರಿಯಾ ಸುಳೆ ಅವರು ಜಿಲ್ಲಾ ಅಧ್ಯಕ್ಷರು ಮತ್ತು ಇತರ ನಾಯಕರ ಅಭಿಪ್ರಾಯಗಳನ್ನು ಕೇಳಿದ್ದರು.

ಈ ವೇಳೆ ಶರದ್ ಪವಾರ್ ಮತ್ತು ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ನಾಯಕರು ತಿಳಿಸಿದ್ದರು ಎಂದು ಮೂಲಗಳು ಹೇಳಿವೆ.

ಈ ಸಭೆಯಲ್ಲಿ ಪಕ್ಷದ ಸಂಸದರು ಭಾಗವಹಿಸಿರಲಿಲ್ಲ. ಮಹಾರಾಷ್ಟ್ರ ಘಟಕದ ಅಧ್ಯಕ್ಷ ಶಶಿಕಾಂತ್ ಶಿಂಧೆ ಕರೆದಿದ್ದ ಸಭೆಯಲ್ಲಿ ಬರ ಪರಿಸ್ಥಿತಿ ಮತ್ತು ಅದನ್ನು ಎದುರಿಸುವ ಕ್ರಮಗಳ ಕುರಿತು ಚರ್ಚಿಸಲಾಗಿತ್ತು ಎನ್ನಲಾಗಿದೆ.

Also Read

Delimitation: ಕಾಂಗ್ರೆಸ್`ಗೆ ಕೈಕೊಟ್ಟ NCPಗೆ ಬಂಪರ್; ಕೇಂದ್ರದಲ್ಲಿ ಸುಪ್ರಿಯಾ ಸುಳೆಗೆ ಮಂತ್ರಿ ಸ್ಥಾನ! ವರದಿ

ಪಕ್ಷದ ನಾಯಕತ್ವವು ಸಂಸದರ ಅಭಿಪ್ರಾಯವನ್ನೂ ಕೇಳಿಲ್ಲ, ತನ್ನ ನಿಲುವನ್ನು ಅವರಿಗೂ ತಿಳಿಸಿಲ್ಲ ಎಂದು ಪಿಟಿಐ ಜೊತೆ ಮಾತನಾಡಿದ ನಾಯಕರು ತಿಳಿಸಿದ್ದಾರೆ.

ಕಳೆದ ತಿಂಗಳು ಶರದ್ ಪವಾರ್ ಕರೆದಿದ್ದ ಸಭೆಯಲ್ಲಿ ಕೆಲವು ಸಂಸದರು ಕ್ಷೇತ್ರ ಮರುವಿಂಗಡಣೆ ವಿಚಾರವನ್ನು ಪ್ರಸ್ತಾಪಿಸಿದ್ದರು ಎಂದು ಅವರು ಸ್ಮರಿಸಿದ್ದಾರೆ.

ಆಗ ಮಸೂದೆಯ ಕರಡು ಸಾರ್ವಜನಿಕವಾಗಿ ಬಿಡುಗಡೆಯಾದ ಬಳಿಕ ಈ ವಿಚಾರ ಚರ್ಚಿಸುವುದಾಗಿ ಸುಪ್ರಿಯಾ ಸುಳೆ ಹೇಳಿದ್ದರು. ಶುಕ್ರವಾರ ಕರಡು ಬಿಡುಗಡೆಯಾಗಿದೆ. ಆದರೂ ಪಕ್ಷದ ನಾಯಕತ್ವದಿಂದ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದರ ನಡುವೆ, ಬರದಿಂದ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ‍್ಯಾಲಿ ವಿಚಾರವಾಗಿ ಗುರುವಾರ ನಡೆದ ಸಭೆಯಲ್ಲಿ ಸುಪ್ರಿಯಾ ಸುಳೆ ಮತ್ತು ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ನಡುವೆ ವಾಗ್ವಾದ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹಿರಿಯ ನಾಯಕ ಜಯಂತ್ ಪಾಟೀಲ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎನ್ನಲಾಗಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಮೂಲಗಳ ಪ್ರಕಾರ, ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಎನ್‌ಸಿಪಿ ನಾಯಕರನ್ನು ಏಕೆ ತಡೆಯಲಾಗುತ್ತಿದೆ ಎಂದು ರೋಹಿತ್ ಪ್ರಶ್ನಿಸಿದ್ದಾರೆ. ಪ್ರತಿಭಟನೆಗೆ ಬರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ? ಎಂದು ಅವರು ಕೇಳಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆಗೆ ಪಕ್ಷದ ಚಿಹ್ನೆ ಮತ್ತು ಧ್ವಜ ಬಳಸಬಾರದು ಎಂದು ಸುಪ್ರಿಯಾ ಸುಳೆ ರೋಹಿತ್‌ಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದು ಯಾವುದೇ ಒಂದು ಪಕ್ಷದ ಕಾರ್ಯಕ್ರಮವಲ್ಲ ಎಂದು ರೋಹಿತ್ ಸ್ಪಷ್ಟಪಡಿಸಿದಾಗ, ಎನ್‌ಸಿಪಿ (ಎಸ್‌ಪಿ) ನಾಯಕರು ಮತ್ತು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಏಕೆ ಬಯಸುತ್ತಿದ್ದಾರೆ ಎಂದು ಸುಪ್ರಿಯಾ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಮಹಿಳಾ ಘಟಕದ ಅಧ್ಯಕ್ಷೆ ರೋಹಿಣಿ ಖಡ್ಸೆ ಅವರು ಪ್ರತಿಭಟನೆಗೆ ಬೆಂಬಲ ಘೋಷಿಸಿದ ಬಳಿಕ ಈ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

Also Read

'ಡಿಲಿಮಿಟೇಶನ್ ಮಸೂದೆ'ಗೆ ಎಲ್ಲಾ ಪಕ್ಷಗಳ ಬೆಂಬಲ ಕೋರಿದ ಕೇಂದ್ರ ಗೃಹ ಸಚಿವ ಅಮಿತ್ ಶಾ!

ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಸುಪ್ರಿಯಾ ಸುಳೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಬಳಿಕ ರೋಹಿಣಿ ಖಡ್ಸೆ ಅವರನ್ನು ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ.

ಸಂಸತ್ತಿನ ವಿಶೇಷ ಅಧಿವೇಶನ ನವೆಂಬರ್ 30ರಂದು ಆರಂಭವಾಗಲಿದ್ದು, ಅಂದಿನಿಂದ ಲೋಕಸಭೆಯ ಕಲಾಪ ನಡೆಯಲಿದೆ. ಡಿಸೆಂಬರ್ 2ರಿಂದ ರಾಜ್ಯಸಭೆಯ ಕಲಾಪ ಆರಂಭವಾಗಲಿದೆ. ಸರ್ಕಾರದ ಕಾರ್ಯಸೂಚಿಗೆ ಅನುಗುಣವಾಗಿ ಡಿಸೆಂಬರ್ 3ರಂದು ಅಧಿವೇಶನ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.

ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಹೊಸ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಿದೆ.

ಇದರಡಿ ಸಂಸತ್ತು ಮತ್ತು ಆಯಾ ರಾಜ್ಯ ವಿಧಾನಸಭೆಗಳಲ್ಲಿ ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಯಿದೆ. ಕ್ಷೇತ್ರಗಳ ಮರುವಿಂಗಡಣೆಯ ಬಳಿಕ ನಿಗದಿಯಾಗುವ ಸ್ಥಾನಗಳ ಸಂಖ್ಯೆ ಮತ್ತು ಗಡಿಗಳನ್ನು 2051ರವರೆಗೆ ಬದಲಾಯಿಸದಿರಲು ಉದ್ದೇಶಿಸಲಾಗಿದೆ.

2026ರ ಸಂವಿಧಾನದ 132ನೇ ತಿದ್ದುಪಡಿ ಮಸೂದೆಯು ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ. ಇದರಲ್ಲಿ ರಾಜ್ಯಗಳಿಂದ ಗರಿಷ್ಠ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರು ಇರಲಿದ್ದಾರೆ. ಇದೇ ವೇಳೆ, ರಾಜ್ಯ ವಿಧಾನಸಭೆಗಳ ಗರಿಷ್ಠ ಸದಸ್ಯರ ಮಿತಿಯನ್ನು 500ರಿಂದ 650ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನೂ ಮಸೂದೆ ಒಳಗೊಂಡಿದೆ.

ಮಸೂದೆಯ ಉದ್ದೇಶ ಮತ್ತು ಕಾರಣಗಳ ಹೇಳಿಕೆಯ ಪ್ರಕಾರ, ಕ್ಷೇತ್ರ ಮರುವಿಂಗಡಣೆಯ ಮೂಲಕ ಲೋಕಸಭೆ ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರು ಸೇರಿದಂತೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ತಕ್ಷಣದಿಂದಲೇ ಜಾರಿಗೆ ತರುವುದು ಈ ಪ್ರಸ್ತಾವಿತ ಕ್ರಮದ ಉದ್ದೇಶವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement