'ಡಿಲಿಮಿಟೇಶನ್ ಮಸೂದೆ'ಗೆ ಎಲ್ಲಾ ಪಕ್ಷಗಳ ಬೆಂಬಲ ಕೋರಿದ ಕೇಂದ್ರ ಗೃಹ ಸಚಿವ ಅಮಿತ್ ಶಾ!
ಚುನಾಯಿತ ಪ್ರತಿನಿಧಿಗಳಲ್ಲಿ ಮಹಿಳೆಯರಿಗೆ ಬಲವಾದ ಪಾತ್ರವನ್ನು ನೀಡುವುದು ಬಿಜೆಪಿ ಸರ್ಕಾರದ ಬದ್ಧತೆಯಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ನವದೆಹಲಿ: ಲೋಕಸಭಾ ಸ್ಥಾನಗಳನ್ನು ಎಲ್ಲಾ ರಾಜ್ಯಗಳಲ್ಲಿಯೂ ಏಕರೂಪವಾಗಿ ಶೇ. 50ರಷ್ಟು ಹೆಚ್ಚಿಸುವ ಗುರಿ ಹೊಂದಿರುವ 'ಸಂವಿಧಾನ (132ನೇ) ತಿದ್ದುಪಡಿ ಮಸೂದೆ'ಗೆ ಎಲ್ಲಾ ಪಕ್ಷಗಳು ಬೆಂಬಲ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಆಡಳಿತದಲ್ಲಿ ಮಹಿಳೆಯರನ್ನು ಪ್ರಬಲ ಪಾಲುದಾರರನ್ನಾಗಿ ಮಾಡುವ ನಿಟ್ಟಿನಲ್ಲಿ ಇದೊಂದು "ಐತಿಹಾಸಿಕ ಕ್ರಮ ಎಂದಿದ್ದಾರೆ.
ಮುಂದಿನ ವಾರ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಸಂದೇಶವೊಂದನ್ನು ಹಂಚಿಕೊಂಡಿರುವ ಶಾ, ಚುನಾಯಿತ ಪ್ರತಿನಿಧಿಗಳಲ್ಲಿ ಮಹಿಳೆಯರಿಗೆ ಬಲವಾದ ಪಾತ್ರವನ್ನು ನೀಡುವುದು ಬಿಜೆಪಿ ಸರ್ಕಾರದ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.
ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟವು ನಿನ್ನೆ 132ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿರುವುದರಿಂದ, ದೇಶದ ಮಹಿಳೆಯರ ದಶಕಗಳ ಕಾಯುವಿಕೆ ಈಗ ಕೊನೆಗೊಳ್ಳಲಿದೆ" ಎಂದು ತಿಳಿಸಿದ್ದಾರೆ.
ನಾರಿ ಶಕ್ತಿ ವಂದನ ಕಾಯ್ದೆ ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಯು ಈಗ ನನಸಾಗಲಿದೆ. ಆಡಳಿತದಲ್ಲಿ ಮಹಿಳೆಯರನ್ನು ಪ್ರಬಲ ಪಾಲುದಾರರನ್ನಾಗಿ ಮಾಡುವ ಈ ಐತಿಹಾಸಿಕ ಕ್ರಮಕ್ಕೆ ಎಲ್ಲಾ ಪಕ್ಷಗಳು ಬೆಂಬಲ ನೀಡಬೇಕು ಎಂದು ಅವರು ಹೇಳಿದ್ದಾರೆ.
ಸರ್ಕಾರವು ನವೆಂಬರ್ 30ರಿಂದ ಸಂಸತ್ತಿನ ನಾಲ್ಕು ದಿನಗಳ ವಿಶೇಷ ಅಧಿವೇಶನವನ್ನು ಕರೆದಿದೆ. ಈ ಅಧಿವೇಶನದಲ್ಲಿ 2029ರ ಸಂಸದೀಯ ಚುನಾವಣೆಗೂ ಮುನ್ನ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸಲು, 'ಸಂವಿಧಾನ (132ನೇ) ತಿದ್ದುಪಡಿ ಮಸೂದೆ' ಸೇರಿದಂತೆ ಒಟ್ಟು ಮೂರು ಮಸೂದೆಗಳನ್ನು ಮಂಡಿಸಲಾಗುವುದು.
ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಮೂರನೇ ಒಂದು ಭಾಗದಷ್ಟು ಪ್ರಾತಿನಿಧ್ಯ ಸಿಗುವುದರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನೀತಿಗಳು ಹೆಚ್ಚಾಗಿ ಎಲ್ಲರನ್ನೂ ಒಳಗೊಳ್ಳುವಂತಾಗುತ್ತವೆ (inclusive). ಹಾಗೆಯೇ, ಲೋಕಸಭೆಯಲ್ಲಿ ಮಹಿಳೆಯರ ಉಪಸ್ಥಿತಿಯು ನೀತಿ ನಿರೂಪಣೆ, ಕಾನೂನು ರಚನೆ ಮತ್ತು ರಾಷ್ಟ್ರೀಯ ಆದ್ಯತೆಗಳನ್ನು ನಿರ್ಧರಿಸುವ ಪ್ರಕ್ರಿಯೆಗೆ ಹೊಸ ಆಯಾಮವನ್ನು ನೀಡುತ್ತದೆ. "ಆಡಳಿತದಲ್ಲಿ ಮಹಿಳೆಯರನ್ನು ಪ್ರಬಲ ಪಾಲುದಾರರನ್ನಾಗಿ ಮಾಡುವ ಈ ಐತಿಹಾಸಿಕ ಉಪಕ್ರಮಕ್ಕೆ ಎಲ್ಲಾ ಪಕ್ಷಗಳು ಬೆಂಬಲ ನೀಡಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ.