ಪೌರತ್ವ ಪಡೆಯುವ ಮೊದಲೇ ಸೋನಿಯಾ ಗಾಂಧಿ ಹೆಸರು ಮತದಾರರ ಪಟ್ಟಿಯಲ್ಲಿತ್ತು: ದೆಹಲಿ ಕೋರ್ಟ್‌ಗೆ ಪೊಲೀಸರ ವರದಿ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ, ಅಂದರೆ 1980ರಲ್ಲಿ ನವದೆಹಲಿಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿತ್ತು ಎಂದು ದೆಹಲಿ ಪೊಲೀಸರು, ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 1983ರ ಏಪ್ರಿಲ್ 30ರಂದು ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ, ಅಂದರೆ 1980ರಲ್ಲಿ ನವದೆಹಲಿಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿತ್ತು ಎಂದು ದೆಹಲಿ ಪೊಲೀಸರು, ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಕ್ರಮ ಕೈಗೊಂಡ ವರದಿ (ATR) ಸಲ್ಲಿಸಿದ್ದಾರೆ. ವಕೀಲ ವಿಕಾಸ್ ತ್ರಿಪಾಠಿ ಅವರು 2025ರ ಆಗಸ್ಟ್‌ನಲ್ಲಿ ಸಲ್ಲಿಸಿದ್ದ ದೂರಿನ ವಿಚಾರಣೆಯ ಸಂದರ್ಭದಲ್ಲಿ ತುಘಲಕ್ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿನೋದ್ ಜೋಶಿ ಅವರ ಮುಂದೆ ಈ ವರದಿಯನ್ನು ಸಲ್ಲಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ವಿವಾದ?
1980ರ ಜನವರಿಯಲ್ಲಿ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಹೆಸರು ಸೇರ್ಪಡೆಯಾಗಿತ್ತು. ಬಳಿಕ ವಿವಾದ ಉಂಟಾದಾಗ 1982ರಲ್ಲಿ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಮತ್ತೆ 1983ರ ಏಪ್ರಿಲ್ 30ರಂದು ಭಾರತೀಯ ಪೌರತ್ವ ಪಡೆದ ನಂತರ ಪಟ್ಟಿಗೆ ಸೇರ್ಪಡೆಗೊಂಡಿತ್ತು. ಪೌರತ್ವ ಪಡೆಯುವ ಮೊದಲೇ ಮತದಾರರ ಪಟ್ಟಿಗೆ ಹೆಸರು ಸೇರಿಸಿರುವುದು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಯ ಅಪರಾಧವಾಗಿದೆ ಎಂದು ಆರೋಪಿಸಿ ದೂರುದಾರರು ಎಫ್‌ಐಆರ್ ದಾಖಲಿಸಲು ಕೋರಿದ್ದಾರೆ.
ಮುಂದುವರೆದು, ವಕೀಲ ವಿಕಾಸ್ ತ್ರಿಪಾಠಿ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿನೋದ್ ಜೋಶಿ ಅವರಿಗೆ ತುಘಲಕ್ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಮತ್ತು ನವದೆಹಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಡೆದ ಮಾಹಿತಿಯಂತೆ, 1980ರವೇಳೆ ಸೋನಿಯಾ ಗಾಂಧಿ ಇಟಲಿ ಪ್ರಜೆಯಾಗಿದ್ದರೂ ಅವರ ಹೆಸರು 1980, 1981, 1982 ಮತ್ತು 1983ರ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ನಕಲಿ ದಾಖಲೆಗಳನ್ನು ನೀಡಿ ಹೆಸರು ಸೇರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತದಾರರ ನೋಂದಣಿಗೆ ಸಲ್ಲಿಸಲಾಗಿದ್ದ ಮೂಲ ಅರ್ಜಿ ಹಾಗೂ ಪೂರಕ ದಾಖಲೆಗಳು ಅತ್ಯಗತ್ಯವಾಗಿವೆ. ಸದ್ಯ ಈ ದಾಖಲೆಗಳು ಲಭ್ಯವಿಲ್ಲದ ಕಾರಣ, ಅವುಗಳನ್ನು ಪತ್ತೆಹಚ್ಚಲು ದೆಹಲಿ ಮುಖ್ಯ ಚುನಾವಣಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದ್ದು, ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಂದೇನಾಗಲಿದೆ?
ಪೊಲೀಸರ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯ, ತನಿಖೆ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ನೀಡಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ 14, 2026ಕ್ಕೆ ನಿಗದಿಪಡಿಸಿದೆ. ಜೊತೆಗೆ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಪರಾಧ ಕಂಡುಬಂದಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸ್ಪಷ್ಟನೆ ನೀಡುವಂತೆ ತುಘಲಕ್ ರೋಡ್ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.