ವರದಕ್ಷಿಣೆಯಾಗಿ ಥಾರ್ ಕಾರು ಕೊಡಿ ಎಂದು ಬೇಡಿಕೆಯಿಟ್ಟ ವರನ ಕುಟುಂಬ: ಆಟಿಕೆ Car ನೀಡಿ ಮದುವೆ ಕ್ಯಾನ್ಸಲ್ ಮಾಡಿದ ವಧುವಿನ ತಂದೆ; Video
ಮೀರತ್‌ನ ಭವನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಞಾನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಧುವಿನ ತಂದೆ ವರನ ತಂದೆಗೆ ಆಟಿಕೆ ಎಸ್‌ಯುವಿ ಕಾರನ್ನು ಹಸ್ತಾಂತರಿಸಿ ಮದುವೆ ರದ್ದುಗೊಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮೀರತ್: ವರನ ಕುಟುಂಬದವರು ವರದಕ್ಷಿಣೆಯಾಗಿ ಎಸ್‌ಯುವಿ ಥಾರ್ ಕಾರು ನೀಡುವಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೀರತ್‌ನಲ್ಲಿ ಕುಟುಂಬವೊಂದು ಮದುವೆಯನ್ನು ರದ್ದುಗೊಳಿಸಿದೆ. ಮಾನವ ಸಂಬಂಧಗಳಿಗೆ ಬೆಲೆ ನೀಡುವ ಬದಲು ಕಾರಿಗೆ ಬೇಡಿಕೆ ಇಟ್ಟಿದ್ದ ವರನ ಕುಟುಂಬಕ್ಕೆ ವಧುವಿನ ತಂದೆ ಆಟಿಕೆ ಥಾರ್ ಕಾರನ್ನು ನೀಡುವ ಮೂಲಕ ವಿಭಿನ್ನ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.
ಮೀರತ್‌ನ ಭವನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಞಾನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಧುವಿನ ತಂದೆ ವರನ ತಂದೆಗೆ ಆಟಿಕೆ ಎಸ್‌ಯುವಿ ಕಾರನ್ನು ಹಸ್ತಾಂತರಿಸಿ ಮದುವೆ ರದ್ದುಗೊಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸುಮಾರು 90 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ವಧುವಿನ ತಂದೆ, “ಇದನ್ನು ತೆಗೆದುಕೊಳ್ಳಿ. ನಿಮ್ಮ ಕೈಯಲ್ಲಿ ಹಿಡಿದುಕೊಳ್ಳಿ. ನಿಮಗೆ ಮನುಷ್ಯ ಬೇಕಿರಲಿಲ್ಲ, ಕಾರು ಬೇಕಿತ್ತು. ನಾವು ನಿಮಗೆ ಥಾರ್ ನೀಡಿದ್ದೇವೆ. ಅದನ್ನು ಚಲಾಯಿಸಿಕೊಂಡು ಹೋಗಿ. ನೀವು ನಿಮ್ಮ ಮನೆಯಲ್ಲಿ ಸಂತೋಷವಾಗಿರಿ, ನಾವು ನಮ್ಮ ಮನೆಯಲ್ಲಿರುತ್ತೇವೆ” ಎಂದು ಹೇಳುವುದು ಕೇಳಿಬರುತ್ತದೆ.
ವರನ ಕುಟುಂಬದವರು ಮೀರತ್‌ನ ಜ್ಞಾನಪುರ ಗ್ರಾಮದ ನಿವಾಸಿಗಳು ಎಂದು ಪರಿಚಯಿಸುವ ಅವರು, ಬೆಳಗ್ಗೆಯಿಂದಲೂ ಕಾರಿಗಾಗಿ ಕಾಯುತ್ತಿದ್ದರು ಎಂದು ಹೇಳುತ್ತಾರೆ. ಈಗಾಗಲೇ ರಾತ್ರಿ 10 ಗಂಟೆಯಾಗಿದ್ದು, ವರದಕ್ಷಿಣೆಯಾಗಿ ಬೇಡಿಕೆಯಿಟ್ಟಿದ್ದ ಥಾರ್ ಕಾರನ್ನು ಅವರಿಗೆ ನೀಡಲಾಗಿದೆ ಎಂದು ವ್ಯಂಗ್ಯವಾಡುತ್ತಾರೆ. ಇದೇ ವೇಳೆ ಮದುವೆಯನ್ನು ರದ್ದುಗೊಳಿಸಿರುವುದಾಗಿ ಹೇಳಿದ್ದಾರೆ.
ಜ್ಞಾನಪುರ ಗ್ರಾಮದ ಶಂಶೇರ್ ಅವರ ಮಗನಿಗೂ, ಮೀರತ್‌ನ ಪಾರ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೌಲಾನಾ ಗ್ರಾಮದ ಬಬ್ಬರ್ ಅವರ ಮಗಳಿಗೂ ಐದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ನಿಶ್ಚಿತಾರ್ಥದ ಸಂದರ್ಭದಲ್ಲಿ ವಧುವಿನ ಕುಟುಂಬದವರು ವರನ ಕುಟುಂಬಕ್ಕೆ 1 ಲಕ್ಷ ರೂಪಾಯಿ ನಗದು ಸೇರಿದಂತೆ ಸಂಪ್ರದಾಯದಂತೆ ಇತರ ಉಡುಗೊರೆಗಳನ್ನು ನೀಡಿದ್ದರು.
ಸುಮಾರು ಒಂದು ತಿಂಗಳ ಹಿಂದೆ ಬಬ್ಬರ್ ಅವರು ತಮ್ಮ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಿದ್ದರು. ಈ ವಿಷಯ ತಿಳಿದ ವರನ ಕುಟುಂಬದವರು ವಧುವಿನ ತಂದೆಗೆ ಮಹೀಂದ್ರಾ ಥಾರ್ ಕಾರು ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಬೇಡಿಕೆಯನ್ನು ಕೈಬಿಡುವಂತೆ ಬಬ್ಬರ್ ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ವರನ ಕುಟುಂಬದವರು ಪಟ್ಟು ಸಡಿಲಿಸಿರಲಿಲ್ಲ.
ವರನ ಕುಟುಂಬದವರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ, ಲಗ್ನದ ದಿನಾಂಕ ನಿಗದಿಪಡಿಸುವ ಸಂಪ್ರದಾಯದ ಭಾಗವಾದ 'ಲಾಲ್‌ಖತ್' ಸಮಾರಂಭಕ್ಕಾಗಿ ಬಬ್ಬರ್ ತಮ್ಮ ಮನೆಗೆ ಆಹ್ವಾನಿಸಿದ್ದರು. ಬೆಳಗ್ಗೆಯಿಂದ ರಾತ್ರಿ ಸುಮಾರು 10 ಗಂಟೆಯವರೆಗೆ ಕಾಯಿಸಿದ ಬಳಿಕ ಪ್ಲಾಸ್ಟಿಕ್‌ನ ಆಟಿಕೆ ಥಾರ್ ಕಾರನ್ನು ಅವರಿಗೆ ಹಸ್ತಾಂತರಿಸಿ ಮದುವೆಯನ್ನು ರದ್ದುಗೊಳಿಸಿದ್ದಾರೆ.