ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

Delimitation Bills: INDIA ಮೈತ್ರಿಕೂಟದಲ್ಲಿ ಭಿನ್ನಮತ ಸ್ಫೋಟ; ಸ್ಟಾಲಿನ್-ಪವಾರ್ ಮನವೊಲಿಕೆಗೆ ಖರ್ಗೆ-ಸೋನಿಯಾ ಕೊನೇ ಕ್ಷಣದ ಕಸರತ್ತು, ಉಳಿಯುತ್ತಾ ಒಗ್ಗಟ್ಟು..!

ಹಲವು ವಿರೋಧ ಪಕ್ಷಗಳು ಮಸೂದೆಗಳನ್ನು ವಿರೋಧಿಸುತ್ತಿರುವ ಸಂದರ್ಭದಲ್ಲಿ ಈ 2 ಪಕ್ಷಗಳು ವಿಭಿನ್ನ ನಿಲುವು ತಳೆದಿವೆ. ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ, ಸಂಘಟಿತ ವಿರೋಧ ಪಕ್ಷದ ಕಾರ್ಯತಂತ್ರ ರೂಪಿಸುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ.

ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಜೊತೆ ಮಲ್ಲಿಕಾರ್ಜುನ ಖರ್ಗೆ.
Manjula VN
Updated On : 29 Nov 2026, 10:23 am

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೇತ್ರ ಪುನರ್ವಿಂಗಡಣೆ (Delimitation) ಮತ್ತು ಮಹಿಳಾ ಮೀಸಲಾತಿ ಮಸೂದೆಗಳಿಗೆ ಬೆಂಬಲ ಸೂಚಿಸಿರುವ ಮಿತ್ರಪಕ್ಷಗಳ ಮನವೊಲಿಸಲು ಕಾಂಗ್ರೆಸ್ ಹೈಕಮಾಂಡ್ ಕೊನೆಯ ಕ್ಷಣದ ಕಸರತ್ತು ಆರಂಭಿಸಿದೆ.

ನವೆಂಬರ್ 30ರಂದು ವಿಶೇಷ ಸಂಸತ್ ಅಧಿವೇಶನ ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ಇಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಹಾಗೂ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಪ್ರಸ್ತಾವಿತ ಮಸೂದೆಗಳಿಗೆ ಡಿಎಂಕೆ ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಬೆಂಬಲ ಸೂಚಿಸಿರುವುದು ಈ ಬೆಳವಣಿಗೆಗೆ ಮಹತ್ವ ನೀಡಿದೆ.

Advertisement

Advertisement

ಹಲವು ವಿರೋಧ ಪಕ್ಷಗಳು ಮಸೂದೆಗಳನ್ನು ವಿರೋಧಿಸುತ್ತಿರುವ ಸಂದರ್ಭದಲ್ಲಿ ಈ ಎರಡು ಪಕ್ಷಗಳು ವಿಭಿನ್ನ ನಿಲುವು ತಳೆದಿವೆ. ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ, ಸಂಘಟಿತ ವಿರೋಧ ಪಕ್ಷದ ಕಾರ್ಯತಂತ್ರ ರೂಪಿಸುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ.

ಇದೇ ವಿಚಾರವಾಗಿ ಇಂಡಿಯಾ ಮೈತ್ರಿಕೂಟದ ಸಂಸದೀಯ ಪಕ್ಷಗಳ ನಾಯಕರು ಶನಿವಾರ ನವದೆಹಲಿಯಲ್ಲಿ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಖರ್ಗೆ, ಪ್ರಸ್ತಾವಿತ ಮಸೂದೆಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿರುವುದರಿಂದ ವಿರೋಧ ಪಕ್ಷಗಳ ಮೈತ್ರಿಕೂಟ ಅವುಗಳನ್ನು ವಿರೋಧಿಸಲಿದೆ ಎಂದು ಘೋಷಿಸಿದರು.

ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಲೋಕಸಭೆಯ ಒಟ್ಟು ಸ್ಥಾನಗಳನ್ನು ಹೆಚ್ಚಿಸುವುದಕ್ಕೆ ಜೋಡಿಸದೆ, ಈಗಿರುವ ಲೋಕಸಭಾ ಸದಸ್ಯರ ಸಂಖ್ಯೆಯಲ್ಲೇ ಜಾರಿಗೆ ತರಬೇಕು ಎಂದು ಮೈತ್ರಿಕೂಟ ಆಗ್ರಹಿಸಿದೆ.

ಆದರೆ, ಡಿಎಂಕೆ ಶನಿವಾರ ಚೆನ್ನೈನ ಪಕ್ಷದ ಪ್ರಧಾನ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸಂಸದರ ಸಭೆಯ ಬಳಿಕ ಮಸೂದೆಗಳಿಗೆ ಬೆಂಬಲ ಸೂಚಿಸುವ ನಿರ್ಧಾರ ಪ್ರಕಟಿಸಿದೆ.

ಡಿಎಂಕೆಯ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಎ. ರಾಜಾ ಮಾತನಾಡಿ, ತಮಿಳುನಾಡಿನ ಸಂಸದೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಪಕ್ಷದ ಎರಡು ಪ್ರಮುಖ ಬೇಡಿಕೆಗಳನ್ನು ಪರಿಷ್ಕೃತ ಮಸೂದೆಗಳಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

Also Read

'ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಿರುವುದು ಯಾರು ಎಂಬುದು ಸ್ಪಷ್ಟವಾಗಲಿದೆ': ಕ್ಷೇತ್ರ ಮರುವಿಂಗಡಣೆ ಮಸೂದೆಯ ಮುನ್ನ ರಾಹುಲ್ ಸಂದೇಶ

ಕಳೆದ ಮೂರು ವರ್ಷಗಳಿಂದ ಪಕ್ಷ ನಡೆಸಿದ ನಿರಂತರ ಹೋರಾಟಕ್ಕೆ ದೊರೆತ ಜಯವಿದು ಎಂದು ಸ್ಟಾಲಿನ್ ಬಣ್ಣಿಸಿದ್ದಾರೆ.

ಕ್ಷೇತ್ರ ಮರುವಿಂಗಡಣೆಗೆ ತಮ್ಮ ಪಕ್ಷ ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಯಾವುದೇ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ರೀತಿಯ ಮರುವಿಂಗಡಣೆಯನ್ನು ಮಾತ್ರ ವಿರೋಧಿಸುತ್ತಾ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ತಮಿಳುನಾಡಿನ ಲೋಕಸಭಾ ಸ್ಥಾನಗಳಲ್ಲಿನ ಪ್ರಸ್ತುತ ಶೇ.7.18ರ ಪಾಲು ಕಡಿಮೆಯಾಗಬಾರದು ಮತ್ತು 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಅನುಪಾತವನ್ನು ಮುಂದಿನ 25 ವರ್ಷಗಳ ಕಾಲ ಮುಂದುವರಿಸಬೇಕು ಎಂಬುದು ಡಿಎಂಕೆಯ ಎರಡು ಪ್ರಮುಖ ಬೇಡಿಕೆಗಳಾಗಿದ್ದವು.

ಪರಿಷ್ಕೃತ ಪ್ರಸ್ತಾವನೆಯ ಪ್ರಕಾರ, ತಮಿಳುನಾಡಿನ ಲೋಕಸಭಾ ಸ್ಥಾನಗಳ ಸಂಖ್ಯೆ 39ರಿಂದ 51ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಒಟ್ಟು ಲೋಕಸಭಾ ಸ್ಥಾನಗಳಲ್ಲಿ ರಾಜ್ಯದ ಪಾಲು ಶೇ.7.18ರಿಂದ ಶೇ.7.21ಕ್ಕೆ ಸ್ವಲ್ಪ ಹೆಚ್ಚಳವಾಗಲಿದೆ. ಇದರಿಂದ ಮುಂದಿನ 25 ವರ್ಷಗಳವರೆಗೆ ರಾಜ್ಯದ ಸಂಸದೀಯ ಪ್ರಾತಿನಿಧ್ಯಕ್ಕೆ ರಕ್ಷಣೆ ದೊರೆಯಲಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಡಿಎಂಕೆಯ ನಿಲುವು ಅಧಿಕಾರದಲ್ಲಿದ್ದಾಗಲೂ, ವಿರೋಧ ಪಕ್ಷದಲ್ಲಿದ್ದಾಗಲೂ ಒಂದೇ ಆಗಿತ್ತು ಎಂದು ಎ. ರಾಜಾ ಹೇಳಿದ್ದಾರೆ. ತಮಿಳುನಾಡಿನ ಸ್ಥಾನಗಳ ಪಾಲು ಕಡಿಮೆಯಾಗಬಾರದು ಎಂಬ ಬೇಡಿಕೆಗೆ ಸ್ಪಂದನೆ ದೊರೆತಿರುವುದರಿಂದ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಬೆಂಬಲ ನೀಡುತ್ತಿದ್ದೇವೆ ಎಂದಿದ್ದಾರೆ.

ಲೋಕಸಭೆಯಲ್ಲಿ ನಮಗೆ ಇರುವ ಶೇ.7.18ರ ಪಾಲಿನಲ್ಲಿ ಯಾವುದೇ ಬದಲಾವಣೆಯಾಗಬಾರದು ಎಂಬುದು ನಮ್ಮ ನಿರಂತರ ಬೇಡಿಕೆಯಾಗಿತ್ತು. ಈಗ ಅದನ್ನು ಉಳಿಸಿಕೊಳ್ಳಲಾಗಿದೆ. ಕೆಲವು ಪ್ರಕ್ರಿಯಾತ್ಮಕ ವಿಚಾರಗಳಿದ್ದು, ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ರಾಜಾ ಹೇಳಿದ್ದಾರೆ.

ಆದರೆ, ಕ್ಷೇತ್ರ ಮರುವಿಂಗಡಣೆ ಆಯೋಗದ ಕಾರ್ಯವೈಖರಿ, ವಿಶೇಷವಾಗಿ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸುವ ಪ್ರಕ್ರಿಯೆ ಕುರಿತು ಡಿಎಂಕೆ ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿದೆ. ಅಗತ್ಯಬಿದ್ದರೆ ಆಯೋಗದ ರಚನೆ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳನ್ನು ಕೋರುವುದಾಗಿಯೂ ಪಕ್ಷದ ನಾಯಕರು ತಿಳಿಸಿದ್ದಾರೆ.

Also Read

'ಬೆನ್ನಿಗೆ ಚೂರಿ ಹಾಕಿದಂತೆ,' 'ಐತಿಹಾಸಿಕ ತಪ್ಪು ಮಾಡಬೇಡಿ': ಬಿಜೆಪಿಗೆ DMK ಬೆಂಬಲ, ಮಾಜಿ ಸಿಎಂ ಸ್ಟಾಲಿನ್ ವಿರುದ್ಧ ನಟ ಪ್ರಕಾಶ್ ರಾಜ್ ಅಸಮಾಧಾನ!

ಕಾಂಗ್ರೆಸ್ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಡಿಎಂಕೆ ತನ್ನ ನಿಲುವು ಬದಲಿಸಿದೆ ಎಂಬ ಆರೋಪವನ್ನು ಎ. ರಾಜಾ ತಳ್ಳಿಹಾಕಿದ್ದಾರೆ. ನ್ಯಾಯಯುತ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಪಕ್ಷದ ಬೇಡಿಕೆಯನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಈ ಹಿಂದೆಯೇ ಬೆಂಬಲಿಸಿದ್ದವು. ಹೀಗಾಗಿ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಕೂಡ ಪ್ರಸ್ತಾವಿತ ಮಸೂದೆಗಳಿಗೆ ಬೆಂಬಲ ಸೂಚಿಸಿದೆ. ಪಕ್ಷದ ಶಾಸಕ ಜಿತೇಂದ್ರ ಅವ್ಹಾದ್ ಅವರು ಶುಕ್ರವಾರ ಪವಾರ್ ಅವರನ್ನು ಭೇಟಿಯಾದ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಲೋಕಸಭಾ ಸ್ಥಾನಗಳನ್ನು ಸಮಾನವಾಗಿ ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಪಕ್ಷ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.

ಆದರೆ, ಪಕ್ಷದ ಕಾರ್ಯಾಧ್ಯಕ್ಷೆ ಹಾಗೂ ಸಂಸದೆ ಸುಪ್ರಿಯಾ ಸುಳೆ ಈ ಹಿಂದೆ ಮಸೂದೆಯ ಅಂಶಗಳನ್ನು ಪರಿಶೀಲಿಸಿದ ಬಳಿಕವೇ ಅಂತಿಮ ನಿಲುವು ಪ್ರಕಟಿಸುವುದಾಗಿ ಹೇಳಿದ್ದರು. ಮಹಿಳಾ ಮೀಸಲಾತಿ ಜಾರಿ, ಎಲ್ಲ ರಾಜ್ಯಗಳಲ್ಲೂ ಸಮಾನ ಪ್ರಮಾಣದಲ್ಲಿ ಸ್ಥಾನಗಳ ಹೆಚ್ಚಳ ಮತ್ತು ಕ್ಷೇತ್ರ ಮರುವಿಂಗಡಣೆ ಆಯೋಗದಲ್ಲಿ ವಿರೋಧ ಪಕ್ಷಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂಬ ಷರತ್ತುಗಳ ಆಧಾರದ ಮೇಲೆ ಎನ್‌ಸಿಪಿ (ಎಸ್‌ಪಿ) ಬೆಂಬಲ ವ್ಯಕ್ತಪಡಿಸಿದೆ.

ಲೋಕಸಭೆಯಲ್ಲಿ ಎಂಟು ಸಂಸದರನ್ನು ಹೊಂದಿರುವ ಎನ್‌ಸಿಪಿ (ಎಸ್‌ಪಿ), ಶನಿವಾರ ನಡೆದ ಇಂಡಿಯಾ ಮೈತ್ರಿಕೂಟದ ಕಾರ್ಯತಂತ್ರದ ಸಭೆಗೆ ಗೈರಾಗಿತ್ತು. ಇದು ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೇಂದ್ರ ಸಚಿವ ಸಂಪುಟ ಶುಕ್ರವಾರ ಈ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಸೋಮವಾರ ಲೋಕಸಭೆಯಲ್ಲಿ ಸಂವಿಧಾನದ 132ನೇ ತಿದ್ದುಪಡಿ ಮಸೂದೆ-2026 ಮತ್ತು ಕ್ಷೇತ್ರ ಮರುವಿಂಗಡಣೆ (ಎರಡನೇ) ಮಸೂದೆ-2026 ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಮಸೂದೆಗಳನ್ನು ಮಂಡಿಸುವ ನಿರೀಕ್ಷೆಯಿದೆ.

ಈ ಪ್ರಸ್ತಾವನೆಗಳ ಪ್ರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಪರಿಷ್ಕೃತ ಹಂಚಿಕೆಯ ಪ್ರಕಾರ ರಾಜ್ಯಗಳ ನಡುವಿನ ಲೋಕಸಭಾ ಸ್ಥಾನಗಳ ಅನುಪಾತವನ್ನು 2051ರವರೆಗೆ ರಕ್ಷಿಸುವ ಪ್ರಸ್ತಾವನೆಯೂ ಇದೆ. ಕ್ಷೇತ್ರ ಮರುವಿಂಗಡಣೆಯ ನಂತರ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವುದು ಹಾಗೂ ಕ್ಷೇತ್ರ ಮರುವಿಂಗಡಣೆ ಆಯೋಗಗಳನ್ನು ರಚಿಸುವುದಕ್ಕೂ ಮಸೂದೆಗಳು ಅವಕಾಶ ಕಲ್ಪಿಸಲಿವೆ.

ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ. ಸೋಮವಾರ ಲೋಕಸಭೆ ಸಭೆ ಸೇರಲಿದ್ದು, ಡಿಸೆಂಬರ್ 2ರ ಬುಧವಾರ ರಾಜ್ಯಸಭೆಯ ಕಲಾಪ ಪುನರಾರಂಭವಾಗಲಿದೆ.

ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಸಂಸತ್ತಿನ ಉಭಯ ಸದನಗಳಲ್ಲೂ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಇದರ ಜೊತೆಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ವಿಧಾನಸಭೆಗಳ ಅನುಮೋದನೆಯೂ ಕಡ್ಡಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement