'ಬೆನ್ನಿಗೆ ಚೂರಿ ಹಾಕಿದಂತೆ,' 'ಐತಿಹಾಸಿಕ ತಪ್ಪು ಮಾಡಬೇಡಿ': ಬಿಜೆಪಿಗೆ DMK ಬೆಂಬಲ, ಮಾಜಿ ಸಿಎಂ ಸ್ಟಾಲಿನ್ ವಿರುದ್ಧ ನಟ ಪ್ರಕಾಶ್ ರಾಜ್ ಅಸಮಾಧಾನ!
ಪಕ್ಷದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಮನವಿ ಮಾಡಿದ್ದು, ಈ ಮಸೂದೆ ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.
ಚೆನ್ನೈ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಿರುವ ಡಿಎಂಕೆ ಪಕ್ಷದ ನಿಲುವಿಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಮನವಿ ಮಾಡಿದ್ದು, ಈ ಮಸೂದೆ ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿರುವ ಅವರು, ಡಿಎಂಕೆಯ ಬೆಂಬಲವು ಜನರಿಗೆ ಮಾಡಿದ ದ್ರೋಹ ಮತ್ತು ಐತಿಹಾಸಿಕ ಪ್ರಮಾದವಾಗಬಹುದು ಎಂದು ಹೇಳಿದ್ದಾರೆ.
ಶನಿವಾರ (ನವೆಂಬರ್ 28) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಸಂದೇಶ ಪೋಸ್ಟ್ ಮಾಡಿರುವ ಪ್ರಕಾಶ್ ರಾಜ್, ಸ್ಟಾಲಿನ್ ಅವರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ್ದಾರೆ.
"ಸ್ಟಾಲಿನ್ ಅವರೇ, ಕೇಂದ್ರದ ಬಿಜೆಪಿ ಸರ್ಕಾರ ತರಲು ಮುಂದಾಗಿರುವ ಕ್ಷೇತ್ರ ಮರುವಿಂಗಡಣೆ ಮಸೂದೆ ಅತ್ಯಂತ ಅಪಾಯಕಾರಿಯಾಗಿದೆ. ದೇಶದ ಹಿತದೃಷ್ಟಿಯಿಂದ ದಯವಿಟ್ಟು ಈ ಮಸೂದೆಗೆ ನೀಡಿರುವ ನಿಮ್ಮ ಬೆಂಬಲವನ್ನು ಮರುಪರಿಶೀಲಿಸಿ" ಎಂದು ಅವರು ಮನವಿ ಮಾಡಿದ್ದಾರೆ.
'ಇದು ಬೆನ್ನಿಗೆ ಚೂರಿ ಹಾಕಿದಂತೆ ಅಲ್ಲವೇ?'
ಧರ್ಮ, ಭಾಷೆ, ಜನಾಂಗ ಮತ್ತು ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ಹಾಗೂ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಅಂಶಗಳು ಈ ಮಸೂದೆಯಲ್ಲಿವೆ ಎಂದು ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
"ಈ ಅಪಾಯಗಳ ಬಗ್ಗೆ ಈ ಹಿಂದೆ ಜನರಿಗೆ ಅರಿವು ಮೂಡಿಸಿದ್ದ ಡಿಎಂಕೆ ಈಗ ಕೋಮುವಾದಿ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವುದು ಬೆನ್ನಿಗೆ ಚೂರಿ ಹಾಕಿದಂತೆ ಅಲ್ಲವೇ? ಇದು ಸ್ವಾರ್ಥದ ನಿರ್ಧಾರ. ಜನರಿಗೆ ದ್ರೋಹ ಬಗೆಯುವ ಇಂತಹ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ರಾಜ್ಯಗಳ ಹಕ್ಕುಗಳಿಗಾಗಿ ಹೋರಾಡಿ ದೇಶಕ್ಕೆ ಮಾದರಿಯಾಗಿದ್ದ ಡಿಎಂಕೆ ಈಗ ಐತಿಹಾಸಿಕ ತಪ್ಪು ಮಾಡಬಾರದು. ಪಕ್ಷ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
"ನೀವು ಈಗ ತೆಗೆದುಕೊಳ್ಳುವ ನಿರ್ಧಾರ ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸಲಿದೆ. ಈ ನಿರ್ಧಾರದ ಆಧಾರದಲ್ಲಿ ಮುಂದಿನ ಪೀಳಿಗೆ ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಿ" ಎಂದು ಸ್ಟಾಲಿನ್‌ಗೆ ಹೇಳಿದ್ದಾರೆ.
ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ
ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡುವುದಾಗಿ ಡಿಎಂಕೆ ಶನಿವಾರ ಘೋಷಿಸಿತ್ತು. ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ನಡೆದ ಸಂಸದರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಪಾಲು ಪ್ರಸ್ತುತ ಇರುವ ಶೇ.7.18ರಷ್ಟೇ ಮುಂದುವರಿಯಬೇಕು ಹಾಗೂ 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಅನುಪಾತವನ್ನು ಮುಂದಿನ 25 ವರ್ಷಗಳವರೆಗೆ ಬದಲಾಯಿಸಬಾರದು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಡಿಎಂಕೆ ತಿಳಿಸಿದೆ.
ಪರಿಷ್ಕೃತ ಪ್ರಸ್ತಾವನೆಯ ಪ್ರಕಾರ, ಲೋಕಸಭೆ ಮತ್ತು ವಿಧಾನಸಭೆಗಳ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಉದ್ದೇಶವಿದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸುವುದೂ ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ.
ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆಗಳ ಕುರಿತು ಚರ್ಚೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಡಿಎಂಕೆಯ ನಿರ್ಧಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.