ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

Delimitation bill: ಮಸೂದೆ ವಿರೋಧಿಸಿ ಮತ ಚಲಾಯಿಸುವಂತೆ ಸಂಸದರಿಗೆ ಸಮಾಜವಾದಿ ಪಕ್ಷದಿಂದ 'ವಿಪ್' ಜಾರಿ, ಲೋಕಸಭೆಯಲ್ಲಿ ಹಾಜರಿರುವಂತೆ ಅಖಿಲೇಶ್ ಸೂಚನೆ..!

ವಿಶೇಷ ಅಧಿವೇಶನದ ಸಂಪೂರ್ಣ ಅವಧಿಯಲ್ಲಿ ಸಮಾಜವಾದಿ ಪಕ್ಷದ ಎಲ್ಲ ಲೋಕಸಭಾ ಸದಸ್ಯರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಮಸೂದೆಗಳು ಮತದಾನಕ್ಕೆ ಬಂದಾಗ ಅವುಗಳ ವಿರುದ್ಧ ಮತ ಚಲಾಯಿಸಬೇಕು.

ಅಖಿಲೇಶ್ ಯಾದವ್
Manjula VN
Updated On : 29 Nov 2026, 1:01 pm

ನವದೆಹಲಿ: ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಗಳ ವಿರುದ್ಧ ಮತ ಚಲಾಯಿಸುವಂತೆ ಸಮಾಜವಾದಿ ಪಕ್ಷ (SP) ತನ್ನ ಎಲ್ಲಾ ಲೋಕಸಭಾ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿಗೊಳಿಸಿದೆ.

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಎಲ್ಲ ಸಂಸದರು ಕಡ್ಡಾಯವಾಗಿ ಹಾಜರಿದ್ದು, ಮಸೂದೆಗಳ ವಿರುದ್ಧ ಮತ ಚಲಾಯಿಸಬೇಕು ಎಂದು ಪಕ್ಷ ಸೂಚಿಸಿದೆ ಎಂದು ತಿಳಿದುಬಂದಿದೆ.

ಪಕ್ಷದ ಸಂಸದ ಹಾಗೂ ಮುಖ್ಯ ಸಚೇತಕ ಧರ್ಮೇಂದ್ರ ಯಾದವ್ ಅವರು ನವೆಂಬರ್ 28ರಂದು ಈ ನಿರ್ದೇಶನ ಹೊರಡಿಸಿದ್ದಾರೆ.

Advertisement

Advertisement

2026ರ ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಎಲ್ಲ ಕಲಾಪಗಳಲ್ಲಿ ಪಕ್ಷದ ಸಂಸದರು ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.

ಸೋಮವಾರದಿಂದ ಆರಂಭವಾಗಲಿರುವ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 132ನೇ ತಿದ್ದುಪಡಿ ಮಸೂದೆ-2026, ಕ್ಷೇತ್ರ ಮರುವಿಂಗಡಣೆ (ಎರಡನೇ) ಮಸೂದೆ-2026 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಎರಡನೇ ಮಸೂದೆ-2026 ಅನ್ನು ಮಂಡಿಸಲಿದೆ ಎಂದು ಧರ್ಮೇಂದ್ರ ಯಾದವ್ ವಿಪ್‌ನಲ್ಲಿ ತಿಳಿಸಿದ್ದಾರೆ.

ವಿಶೇಷ ಅಧಿವೇಶನದ ಸಂಪೂರ್ಣ ಅವಧಿಯಲ್ಲಿ ಸಮಾಜವಾದಿ ಪಕ್ಷದ ಎಲ್ಲ ಲೋಕಸಭಾ ಸದಸ್ಯರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಮಸೂದೆಗಳು ಮತದಾನಕ್ಕೆ ಬಂದಾಗ ಅವುಗಳ ವಿರುದ್ಧ ಮತ ಚಲಾಯಿಸಬೇಕು ಎಂದು ವಿಪ್‌ನಲ್ಲಿ ಸೂಚಿಸಲಾಗಿದೆ.

ಇದೇ ವೇಳೆ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್‌ಚಂದ್ರ ಪವಾರ್ (ಎನ್‌ಸಿಪಿ-ಎಸ್‌ಪಿ) ಕೂಡ ತಮ್ಮ ಲೋಕಸಭಾ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿವೆ.

ನವೆಂಬರ್ 30ರಿಂದ ಡಿಸೆಂಬರ್ 4ರವರೆಗೆ ಸದನದಲ್ಲಿ ಹಾಜರಿದ್ದು, ಪ್ರಮುಖ ಕಲಾಪಗಳ ಸಂದರ್ಭದಲ್ಲಿ ಪಕ್ಷದ ನಿಲುವಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ತೃಣಮೂಲ ಕಾಂಗ್ರೆಸ್ ಸೂಚಿಸಿದೆ.

ಎನ್‌ಸಿಪಿ-ಎಸ್‌ಪಿಯ ಮುಖ್ಯ ಸಚೇತಕ ಅಮೋಲ್ ಕೋಲ್ಹೆ ಕೂಡ ಇದೇ ಅವಧಿಯಲ್ಲಿ ಪಕ್ಷದ ಸಂಸದರು ಸದನದಲ್ಲಿ ಹಾಜರಿರಬೇಕು ಮತ್ತು ಪಕ್ಷದ ನಿಲುವನ್ನು ಬೆಂಬಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

Also Read

'ನಮ್ಮ ನಿಲುವಿನಲ್ಲಿ ರಾಜಿ ಇಲ್ಲ, ನಿರ್ಧಾರಕ್ಕೆ ಬದ್ಧ, ಸೋದರ ರಾಹುಲ್ ಗಾಂಧಿಗೆ ತುಂಬಾ ಥ್ಯಾಂಕ್ಸ್': ಕಡ್ಡಿಮುರಿದಂತೆ ಹೇಳಿದ ಸ್ಟಾಲಿನ್ !

ಕೇಂದ್ರ ಸರ್ಕಾರದ ಪ್ರಸ್ತಾವನೆಯ ಪ್ರಕಾರ, ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ರಾಜ್ಯಗಳಿಂದ 815 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರು ಇರಲಿದ್ದಾರೆ.

ಇನ್ನೊಂದೆಡೆ, ಡಿಎಂಕೆ, ವೈಎಸ್‌ಆರ್‌ಸಿಪಿ ಮತ್ತು ಎನ್‌ಸಿಪಿ-ಎಸ್‌ಪಿ ಸೇರಿದಂತೆ ಕೆಲವು ವಿರೋಧ ಪಕ್ಷಗಳು ಪರಿಷ್ಕೃತ ಮಸೂದೆಗಳಿಗೆ ಬೆಂಬಲ ಸೂಚಿಸಿರುವುದರಿಂದ ಅವು ಅಂಗೀಕಾರವಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.

ಈ ಪಕ್ಷಗಳ ಬೆಂಬಲದೊಂದಿಗೆ ಪರವಾಗಿ ಮತ ಚಲಾಯಿಸುವವರ ಸಂಖ್ಯೆ 354ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಎಲ್ಲ 540 ಹಾಲಿ ಸದಸ್ಯರು ಮತದಾನದಲ್ಲಿ ಭಾಗವಹಿಸಿದರೆ ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಪಡೆಯಲು 360 ಮತಗಳ ಅಗತ್ಯವಿದೆ. ಹೀಗಾಗಿ ಎನ್‌ಡಿಎಗೆ ಇನ್ನೂ ಆರು ಮತಗಳ ಕೊರತೆ ಎದುರಾಗಲಿದೆ.

ಡಿಎಂಕೆ ರಾಜ್ಯಗಳಾದ್ಯಂತ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಬೆಂಬಲ ನೀಡಿದೆ. ಆದರೆ, ತಮಿಳುನಾಡಿನ ಪ್ರಸ್ತುತ ಶೇ.7.18ರಷ್ಟು ಸಂಸದೀಯ ಪ್ರಾತಿನಿಧ್ಯದ ಪಾಲು ಯಾವುದೇ ಕಾರಣಕ್ಕೂ ಕಡಿಮೆಯಾಗಬಾರದು ಎಂದು ಷರತ್ತು ವಿಧಿಸಿದೆ.

ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವುದನ್ನು ವಿರೋಧ ಪಕ್ಷಗಳು ಬೆಂಬಲಿಸಿವೆ. ಆದರೆ, ಅದರ ಜಾರಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಇತ್ತೀಚಿನ ಜನಗಣತಿಯ ಆಧಾರದ ಮೇಲೆ ನಡೆಸಬೇಕು ಎಂದು ಆಗ್ರಹಿಸಿವೆ.

ಆದರೆ, ಕೇಂದ್ರ ಸರ್ಕಾರವು ಲೋಕಸಭಾ ಕ್ಷೇತ್ರಗಳ ಗಡಿ ಮರುವಿನ್ಯಾಸ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಕ್ಷೇತ್ರಗಳನ್ನು ನಿರ್ಧರಿಸಲು 2011ರ ಜನಗಣತಿಯನ್ನು ಬಳಸಲು ಪ್ರಸ್ತಾಪಿಸಿದೆ. ಅದೇ ಸಮಯದಲ್ಲಿ, ರಾಜ್ಯವಾರು ಲೋಕಸಭಾ ಸ್ಥಾನಗಳ ಹಂಚಿಕೆಗೆ 1971ರ ಜನಸಂಖ್ಯೆಯ ಆಧಾರವನ್ನು 2051ರವರೆಗೆ ಮುಂದುವರಿಸುವ ಉದ್ದೇಶ ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement