ತೂತುಕುಡಿ: ಸಾತಂಕುಳಂ ಮೂಲಕ ಸಾಗುವ ಆಳ್ವಾರ್‌ತಿರುನಗರಿ-ವಳ್ಳಿಯೂರು ರಾಜ್ಯ ಹೆದ್ದಾರಿ 93 ರಸ್ತೆಯಲ್ಲಿನ ಫಲಕದಲ್ಲಿ ಹಿಂದಿ ಭಾಷೆ ಬಳಕೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಇಂದು ಬೆಳಗಿನ ಜಾವ ಹಿಂದಿ ಹೆಸರುಗಳನ್ನು ಫಲಕದಿಂದ ಅಳಿಸಲಾಗಿದೆ. ಈ ಸಂಬಂಧ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮಿಳುನಾಡಿನ ವಿಶಿಷ್ಟ ದ್ವಿಭಾಷಾ ನೀತಿಯೊಂದಿಗೆ ಚೆಲ್ಲಾಟವಾಡದಂತೆ ಟಿವಿಕೆ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಹೆದ್ದಾರಿ ಇಲಾಖೆಯ ಅಧೀನದಲ್ಲಿರುವ ರಾಷ್ಟ್ರೀಯ ಹೆದ್ದಾರಿ ವಿಭಾಗವು ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ ಸಾತಂಕುಳಂ ಮೂಲಕ ಸಾಗುವ ಆಳ್ವಾರ್‌ತಿರುನಗರಿ-ವಳ್ಳಿಯೂರು SH93 ರಸ್ತೆಯನ್ನು ಅಭಿವೃದ್ಧಿಪಡಿಸಿತ್ತು.
ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ, ಸಾತಂಕುಳಂ ಹೊರವಲಯದ ವಳ್ಳಿಯಮ್ಮಾಳಪುರಂನಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗವು ಫಲಕವೊಂದನ್ನು ಅಳವಡಿಸಿತ್ತು. ಅದರಲ್ಲಿ ಸ್ಥಳಗಳ ಹೆಸರುಗಳನ್ನು ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಮೂದಿಸಲಾಗಿತ್ತು. ಫಲಕದಲ್ಲಿ ಹಿಂದಿ ಹೆಸರುಗಳನ್ನು ಬಳಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು.
ಹಿಂದಿ ಬಳಕೆಯನ್ನು ತೀವ್ರವಾಗಿ ಖಂಡಿಸಿದ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರವೇ ಇದೀಗ ಅದೇ ಕೆಲಸ ಮಾಡುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆರೋಪಿಸಿದರು.
ವಿರೋಧ ವ್ಯಕ್ತವಾದಾಗ ಜನರ ನಾಡಿಮಿಡಿತವನ್ನು ಪರೀಕ್ಷಿಸಿ, ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುವುದೇ ಟಿವಿಕೆ ನೇತೃತ್ವದ ತಮಿಳುನಾಡು ಸರ್ಕಾರದ ನಡೆ ಎಂದು ಹೇಳಿದರು. ತಮಿಳುನಾಡಿನ ದ್ವಿಭಾಷಾ ನೀತಿಯೇ ರಾಜ್ಯದ ಶಾಶ್ವತ ನೀತಿಯಾಗಿದೆ ಎಂದು ಹೇಳಿದ ಸ್ಟಾಲಿನ್, ಭಾಷಾ ನೀತಿಯೊಂದಿಗೆ ಚೆಲ್ಲಾಟವಾಡದಂತೆ ಟಿವಿಕೆ ಸರ್ಕಾರವನ್ನು ಎಚ್ಚರಿಸಿದರು.
ಇದರ ಬೆನ್ನಲ್ಲೇ ರಾಜ್ಯ ಹೆದ್ದಾರಿ ಇಲಾಖೆಯು ನಿನ್ನೆ ಮತ್ತು ಇಂದು ಫಲಕದಲ್ಲಿದ್ದ ಹಿಂದಿ ಪದಗಳನ್ನು ಅಳಿಸಿತು. ಯೋಜನೆಯ ಸಹಾಯಕ ನಿರ್ದೇಶಕ ಭೂಮಿನಾಥನ್ ಮತ್ತು ಸಹಾಯಕ ಎಂಜಿನಿಯರ್ ಮುತ್ತುಲಕ್ಷ್ಮಿ, ಫಲಕದಲ್ಲಿ ಹಿಂದಿ ಪದಗಳನ್ನು ಬಳಸಿರುವ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲು ವಿಫಲರಾಗಿದ್ದರು. ಹೀಗಾಗಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆಗೆ ತಿಳಿಸಿದ್ದಾರೆ.