ನವದೆಹಲಿ: ದೆಹಲಿ ಸಮೀಪದ ನೋಯ್ಡಾದಲ್ಲಿರುವ 'ಸೂಪರ್ನೋವಾ' ಅತಿ ಎತ್ತರದ ಬಹುಮಹಡಿ ಕಟ್ಟಡದ 43ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸೂಪರ್ನೋವಾ ಕಟ್ಟಡ ಒಟ್ಟು 68 ಮಹಡಿಗಳನ್ನು ಹೊಂದಿದ್ದು, ಎನ್‌ಸಿಆರ್ (NCR) ಪ್ರದೇಶದಲ್ಲಿನ ಅತಿ ಎತ್ತರದ ವಸತಿ ಕಟ್ಟಡವಾಗಿದೆ.
ಆ ವ್ಯಕ್ತಿ 43ನೇ ಮಹಡಿಯಿಂದ ಕೆಳಗೆ ಹಾರುವ ದೃಶ್ಯ ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಆ ವ್ಯಕ್ತಿ ಕಟ್ಟಡದಲ್ಲಿದ್ದ 'ಏರ್‌ಬಿಎನ್‌ಬಿ' (Airbnb) ವಸತಿಯಲ್ಲಿ ಉಳಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನೋಯ್ಡಾದ ಸೆಕ್ಟರ್ 94ರಲ್ಲಿರುವ ಸೂಪರ್ನೋವಾ ಸಂಕೀರ್ಣದ 'ಸ್ಪೈರಾ ಟವರ್'ನಿಂದ ವ್ಯಕ್ತಿ ಕೆಳಗೆ ಹಾರಿದ್ದಾರೆ. ಈ ವೇಳೆ ಮತ್ತೊಬ್ಬ ವ್ಯಕ್ತಿ ಆತನನ್ನು ತಡೆಯಲು ಮತ್ತು ರೇಲಿಂಗ್‌ನಿಂದ ಎಳೆಯಲು ಎಳೆಯಲು ಯತ್ನಿಸಿದ್ದಾರೆ. ಆದರೆ ಅವರ ಮಾತನ್ನು ಕೇಳದ ವ್ಯಕ್ತಿ ಕೆಳಗೆ ಜಿಗಿದಿದ್ದಾರೆ.
ನೆಲಮಹಡಿಗೆ ಬಿದ್ದ ತಕ್ಷಣ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಕ್ಕೆ ಬಿದ್ದಾಗ ಆತನ ದೇಹವು ಛಿದ್ರ ಛಿದ್ರಗೊಂಡಿತ್ತು. ಮೃತರನ್ನು ಹರಿಯಾಣದ ಮಾನೇಸರ್ ನಿವಾಸಿ ಸಂಭವ ಜೈನ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಅವರು ಶುಕ್ರವಾರವಷ್ಟೇ ಏರ್‌ಬಿಎನ್‌ಬಿಯಲ್ಲಿ ವಾಸ್ತವ್ಯ ಹೂಡಿದ್ದರು ಮತ್ತು ಶನಿವಾರ ಮಧ್ಯಾಹ್ನದ ವೇಳೆಗೆ ಅಲ್ಲಿಂದ ನಿರ್ಗಮಿಸಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಬಾಲ್ಕನಿಯಿಂದ ಜಿಗಿದಿದ್ದಾರೆ.
ಆತ್ಮಹತ್ಯೆ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಜೈನ್ ತಮ್ಮ ತಂದೆಗೆ ಹಲವು ಬಾರಿ ಕರೆ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಜೈನ್ ಅವರ ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸ್ಥಳವನ್ನು ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಪರಿಶೀಲಿಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಘಟನೆಯ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.