ನವದೆಹಲಿ: ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಒತ್ತಾಯಿಸಿ, 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಅಕ್ಟೋಬರ್ 7 ರಂದು ದೆಹಲಿ ಚುನಾವಣಾ ಆಯೋಗದ ಕಚೇರಿಯ ಹೊರಗೆ ಜಂಟಿ ಪ್ರತಿಭಟನೆಯನ್ನು ನಡೆಸಲಿವೆ.
ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಆರ್‌ಜೆಡಿ, ಎನ್‌ಸಿಪಿ ಮತ್ತು ಆರ್‌ಎಸ್‌ಪಿ ಸೇರಿದಂತೆ ವಿವಿಧ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ಪಕ್ಷಗಳು 'SIR' ಪ್ರಕ್ರಿಯೆಯನ್ನು "ದೋಷಪೂರಿತ" ಎಂದು ಹೇಳಿದ್ದು, ತಕ್ಷಣವೇ ಅದನ್ನು ರದ್ದುಗೊಳಿಸುವಂತೆ ಕರೆ ನೀಡಿವೆ. ಜೊತೆಗೆ ಮತದಾರರ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆಯು ಪಾರದರ್ಶಕವಾಗಿ ಹಾಗೂ ಸಾಂವಿಧಾನಿಕ ನಿಬಂಧನೆಗಳು ಮತ್ತು ಮತದಾರರ ಹಕ್ಕುಗಳಿಗೆ ಅನುಗುಣವಾಗಿ ನಡೆಯಬೇಕು ಎಂದು ಒತ್ತಾಯಿಸಿವೆ.
ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಅಥವಾ ಅವರ ಮತದಾನದ ಹಕ್ಕುಗಳ ಮೇಲೆ ಪರಿಣಾಮ ಬೀರುವ ಯಾವುದೇ ಪ್ರಕ್ರಿಯೆಯನ್ನು 'ಇಂಡಿಯಾ' ಮೈತ್ರಿಕೂಟ ಒಪ್ಪಿಕೊಳ್ಳುವುದಿಲ್ಲ ಎಂದು ದೆಹಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲ್ ಭಾರದ್ವಾಜ್ ಹೇಳಿದ್ದಾರೆ.
ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಮತದಾರರ ಹೆಸರುಗಳನ್ನು ತೆಗೆದುಹಾಕುವ ಅಥವಾ ಅವರ ಹಕ್ಕುಗಳ ಮೇಲೆ ಪರಿಣಾಮ ಬೀರುವಂತಹ ಯಾವುದೇ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ ಇಂಡಿಯಾ' ಮೈತ್ರಿಕೂಟವು ಅದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಭಾರದ್ವಾಜ್ ತಿಳಿಸಿದ್ದಾರೆ.
ಅಕ್ಟೋಬರ್ 7 ರ ಪ್ರತಿಭಟನೆಯು ದೆಹಲಿ ಮತದಾರರ ಹಕ್ಕುಗಳನ್ನು ರಕ್ಷಿಸುವ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತ್ರಿಪಡಿಸುವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.