ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಗೂ ಮುನ್ನ ಶನಿವಾರ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿ ಪೊಲೀಸರು ತಮ್ಮನ್ನು ಹಾಗೂ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ವಶಕ್ಕೆ ಪಡೆದ ನಂತರ, 'ಕಾಕ್ರೋಚ್ ಜನತಾ ಪಾರ್ಟಿ' (CJP) ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ, 'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ' ಎಂದು ಅಭಿಜಿತ್ ದೀಪ್ಕೆ ಹೇಳಿದ್ದಾರೆ.
'ಎಕ್ಸ್'ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಪೊಲೀಸ್ ಸಿಬ್ಬಂದಿ ವಿಮಾನದೊಳಗೆ ಪ್ರವೇಶಿಸಿ ತಮ್ಮನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೀಪ್ಕೆ ಹೇಳುತ್ತಿರುವುದು ಕೇಳಿಸುತ್ತದೆ.
'ನೋಡಿ, ನಮ್ಮನ್ನು ಬಂಧಿಸಲು ದೆಹಲಿ ಪೊಲೀಸರು ವಿಮಾನದೊಳಗೆ ಬರುತ್ತಿದ್ದಾರೆ. ಅವರೆಲ್ಲರೂ ವಿಮಾನದೊಳಗೆ ಪ್ರವೇಶಿಸುತ್ತಿದ್ದಾರೆ. ನಾವು ಈಗಷ್ಟೇ ಬಂದಿಳಿದಿದ್ದೇವೆ. ದೆಹಲಿ ಪೊಲೀಸ್ ಅಧಿಕಾರಿಗಳೆಲ್ಲರೂ ವಿಮಾನದ ಹಾದಿಯಲ್ಲಿ (aisle) ನಿಂತಿದ್ದಾರೆ. ಅವರು ವಿಮಾನದ ಒಳಗಿನಿಂದಲೇ ನಮ್ಮನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಇಡೀ ದೆಹಲಿ ಪೊಲೀಸ್ ಪಡೆಯೇ ವಿಮಾನದೊಳಗೆ ಬರುತ್ತಿದೆ. ಇದು ನರೇಂದ್ರ ಮೋದಿಯವರ ಭಯ' ಎಂದಿದ್ದಾರೆ.
'ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೀಗೆ ಮಾಡಿರಲಿಲ್ಲ. ನಾವು ಕೇವಲ ಶಾಂತಿಯುತ ಪ್ರತಿಭಟನೆ ನಡೆಸಲು ಬಯಸಿದ್ದೆವು, ಆದರೆ ನಮ್ಮನ್ನು ಅಪರಾಧಿಗಳಂತೆ ವಿಮಾನದಿಂದಲೇ ವಶಕ್ಕೆ ಪಡೆಯುತ್ತಿದ್ದಾರೆ' ಎಂದು ದೀಪ್ಕೆ ಹೇಳಿದರು.
ಮತ್ತೊಂದು ವಿಡಿಯೋದಲ್ಲಿ, 'ದೇಶವು ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ನೀವು ನೋಡಬಹುದು. ನಮ್ಮನ್ನು ನೇರವಾಗಿ ವಿಮಾನದಿಂದಲೇ ಬಂಧಿಸಲು ಅವರು ಬಂದಿದ್ದಾರೆ. ಇಂದಿರಾ ಗಾಂಧಿ ಕೂಡ ಇಂತಹ ಕೆಲಸವನ್ನು ಮಾಡಿರಲಿಲ್ಲ' ಎಂದು ಹೇಳುತ್ತಿರುವುದು ಕೇಳಿಸಿದೆ.
'ಇದು ಸರ್ವಾಧಿಕಾರ; ದೆಹಲಿ ಪೊಲೀಸರು ವಿಮಾನದೊಳಗೆ ಬಂದು ನಮ್ಮನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಬನ್ನಿ, ನಮ್ಮನ್ನು ಬಂಧಿಸಿ. ಬಂಧನಕ್ಕೊಳಗಾಗಲೆಂದೇ ನಾವು ಇಲ್ಲಿದ್ದೇವೆ. ಬನ್ನಿ, ನಮ್ಮನ್ನು ಬಂಧಿಸಿ. ನೀವು ಬಂಧಿಸಲೆಂದೇ ನಾವು ಇಲ್ಲಿದ್ದೇವೆ. ನಮಗೆ ನಿಮ್ಮ ಬಗ್ಗೆ ಭಯವಿಲ್ಲ' ಎಂದು ಅವರು ಹೇಳಿದರು.
ಅದಕ್ಕೆ ಪೊಲೀಸ್ ಸಿಬ್ಬಂದಿಯೊಬ್ಬರು, 'ಇಲ್ಲ, ಇದು ಬಂಧನವಲ್ಲ. ದಯವಿಟ್ಟು ಸಹಕರಿಸಿ' ಎಂದು ಪ್ರತಿಕ್ರಿಯಿಸುತ್ತಾರೆ.
ಮತದಾರರ ಪಟ್ಟಿಯಲ್ಲಿನ ಅಕ್ರಮಗಳು ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಷಯಕ್ಕೆ ಸಂಬಂಧಿಸಿದಂತೆ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ (CJP) ಪ್ರತಿಭಟನೆಗೆ ಕರೆ ನೀಡಿತ್ತು. ಜಂತರ್ ಮಂತರ್‌ನಲ್ಲಿ ಸಿಜೆಪಿ (CJP) ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯ ಮುನ್ನಾದಿನವೇ ದೆಹಲಿ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದರು.
ತಮ್ಮ ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಅವರು ಕಾರಿನಲ್ಲಿ ಮನೆಯಿಂದ ಹೊರಹೋಗಲು ಪ್ರಯತ್ನಿಸುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಯಿತು ಎಂದೂ ಸಿಜೆಪಿ ಆರೋಪಿಸಿದೆ. ಪೊಲೀಸ್ ಸಿಬ್ಬಂದಿ ತಮ್ಮ ನಿವಾಸಕ್ಕೆ ಆಗಮಿಸಿ, ತಮ್ಮನ್ನು ವಶಕ್ಕೆ ಪಡೆಯುವ ಆದೇಶವಿದೆ ಎಂದು ತಿಳಿಸಿದ್ದಾಗಿ ಸಿಂಗ್ ಅವರು ವಿಡಿಯೋವೊಂದರಲ್ಲಿ ಆರೋಪಿಸಿದ್ದಾರೆ.
'ಅವರು ಬೆಳಗ್ಗೆ ನನ್ನ ಮನೆಗೆ ಬಂದಿದ್ದರು ಮತ್ತು ನಾನು ಅಲ್ಲಿಲ್ಲ ಎಂದು ಅವರಿಗೆ ತಿಳಿಸಲಾಯಿತು. ನಾವು ಅಧಿಕೃತ ಸೂಚನೆಯನ್ನು ಕೇಳಿದೆವು; ಅವರ ಬಳಿ ಅಂತಹದ್ದು ಏನಾದರೂ ಇದೆಯೇ? ಅವರ ಬಳಿ ಏನೂ ಇರಲಿಲ್ಲ. 'ನಾವು ನಿಮ್ಮನ್ನು ವಶಕ್ಕೆ ಪಡೆಯಬೇಕಿದೆ, ಮೇಲಿನಿಂದ ನಮಗೆ ಆದೇಶಗಳಿವೆ' ಎಂದು ಅವರು ಹೇಳಿದರು. ಆ ಆದೇಶಗಳು ಯಾವ 'ಮೇಲಿನ' ಹಂತದಿಂದ ಬಂದಿದ್ದವು ಎಂಬುದು ನನಗೆ ತಿಳಿದಿಲ್ಲ' ಎಂದು ಅವರು ಹೇಳಿದರು.
ಸಿಂಗ್, ಸಿಬ್ಬಂದಿ ತಮ್ಮನ್ನು ಕಾರಿನಿಂದ ಹೊರಬರಬೇಕು ಮತ್ತು ಬಂದು ಮನೆಯಲ್ಲೇ ಇರುವಂತೆ ಸೂಚಿಸುತ್ತಿದ್ದರು. ಈ ಪರಿಸ್ಥಿತಿಯು 'ಅಕ್ರಮ ಬಂಧನ' ಎಂದು ಬಣ್ಣಿಸಿದರು.
ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ಕೂಡ ಗುರ್‌ಗಾಂವ್‌ನ ಸೆಕ್ಟರ್ 56ರಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆಯಲಾಯಿತು.
ದೆಹಲಿ ಪೊಲೀಸರ ಪ್ರಕಾರ, ಇಲ್ಲಿಯವರೆಗೆ 1,100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ; ಇದರಲ್ಲಿ ಸುಮಾರು 600 ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ 500ಕ್ಕೂ ಹೆಚ್ಚು ಮಂದಿಯನ್ನು ನಗರದ ವಿವಿಧ ಭಾಗಗಳಿಂದ ವಶಕ್ಕೆ ಪಡೆಯಲಾಗಿದೆ.