ನವದೆಹಲಿ: ಮುಂದಿನ 24 ಗಂಟೆಯೊಳಗೆ ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ತಾವೂ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಖ್ಯಾತ ಸಾಮಾಜಿಕ ಹಾಗೂ ಹವಾಮಾನ ಹೋರಾಟಗಾರ ಹಾಗೂ ಬಗ್ಗೆ ಚಿಂತಿಸುವುದಾಗಿ ಸೋನಮ್ ವಾಂಗ್‌ಚುಕ್ ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ವಿರೋಧ ಪಕ್ಷದ ನಾಯಕರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು, ವಕೀಲರು ಮತ್ತು ಪತ್ರಕರ್ತರನ್ನು ಬಂಧಿಸಿರುವುದನ್ನು ಖಂಡಿಸಿರುವ ಹವಾಮಾನ ಹೋರಾಟಗಾರ ಸೋನಮ್ ವಾಂಗ್‌ಚುಕ್, ಮುಂದಿನ 24 ಗಂಟೆಯೊಳಗೆ ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ತಾವೂ ಶಾಂತಿಯುತ ಪ್ರತಿಭಟನೆ ನಡೆಸುವ ಬಗ್ಗೆ ಚಿಂತಿಸುವುದಾಗಿ ಎಚ್ಚರಿಸಿದ್ದಾರೆ.
ಉಪವಾಸ ಸತ್ಯಾಗ್ರಹ ಅಥವಾ ಮೆರವಣಿಗೆಯ ಮೂಲಕ ಲೇಹ್ ಅಥವಾ ದೆಹಲಿಯಲ್ಲಿ ಹೋರಾಟ ನಡೆಸುವ ಸಾಧ್ಯತೆಯನ್ನೂ ಅವರು ಪ್ರಸ್ತಾಪಿಸಿದ್ದಾರೆ.
ದೆಹಲಿಯಲ್ಲಿ ಚುನಾವಣಾ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಸಂದರ್ಭದಲ್ಲಿ ಹಲವು ನಾಯಕರನ್ನು ವಶಕ್ಕೆ ಪಡೆಯಲಾಗಿದೆ. ಈ ಬೆಳವಣಿಗೆಯನ್ನು ವಾಂಗ್‌ಚುಕ್ ತೀವ್ರವಾಗಿ ಖಂಡಿಸಿದ್ದು, ದೇಶದಲ್ಲಿ ‘ಅಘೋಷಿತ ತುರ್ತು ಪರಿಸ್ಥಿತಿ’ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ.
ಆಘಾತಕಾರಿ ಬೆಳವಣಿಗೆ
ಶನಿವಾರ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊ ಸಂದೇಶದಲ್ಲಿ ಮಾತನಾಡಿದ ವಾಂಗ್‌ಚುಕ್, ವಿದ್ಯಾರ್ಥಿ ನಾಯಕರು, ಯುವ ಮುಖಂಡರು, ವಕೀಲರು, ಪತ್ರಕರ್ತರು ಮತ್ತು ಸಂಸದರು ಕೂಡ ದೆಹಲಿಯಲ್ಲಿ ಬಂಧನಕ್ಕೊಳಗಾಗಿರುವ ವಿಷಯ ತಿಳಿದು ಆಘಾತವಾಗಿದೆ ಎಂದು ಹೇಳಿದ್ದಾರೆ.
“ಇಂದು ನಡೆಯಲಿರುವ ಪ್ರತಿಭಟನೆಗಳಲ್ಲಿ ಶಾಂತಿ ಮತ್ತು ಒಗ್ಗಟ್ಟನ್ನು ಕಾಪಾಡುವಂತೆ ನಿನ್ನೆ ನಾನು ಮನವಿ ಮಾಡಿದ್ದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆ ಎಂದು ನಂಬಿದ್ದೆ. ಆದರೆ, ಈಗ ದೇಶಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿ ಇರುವಂತೆ ಕಾಣುತ್ತಿದೆ” ಎಂದು ಅವರು ಹೇಳಿದ್ದಾರೆ.
SIR ವಿರುದ್ಧ ಪ್ರತಿಭಟನೆ; ನಾಯಕರ ಬಂಧನ
ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯನ್ನು ತಿರುಚುವಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಆರೋಪವನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ಮಾಡಿದೆ. ಮತದಾರರ ನೋಂದಣಿಗೆ ಬಳಸುವ ಫಾರ್ಮ್ 6 ಸೇರಿದಂತೆ ಇತರ ವಿಚಾರಗಳಲ್ಲಿಯೂ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಪಕ್ಷ, ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಿತ್ತು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭಾರಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಹಲವು ನಿರ್ಬಂಧಗಳನ್ನೂ ವಿಧಿಸಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್ ಮತ್ತು ಮಾಣಿಕ್ ಸರ್ಕಾರ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರಕ್ಕೆ ವಾಂಗ್ಚುಕ್ ಮನವಿ
ಬಂಧನಗಳನ್ನು ತಕ್ಷಣ ಅಂತ್ಯಗೊಳಿಸಿ, ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸುವಂತೆ ವಾಂಗ್‌ಚುಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಈ ಬಂಧನಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಬಂಧನಗಳನ್ನು ಅಂತ್ಯಗೊಳಿಸುವಂತೆ ಸರ್ಕಾರವನ್ನು ವಿನಂತಿಸುತ್ತೇನೆ. ಸಮಸ್ಯೆಗಳನ್ನು ಇಂದೇ ಸಂಜೆಯೊಳಗೆ ಬಗೆಹರಿಸಬೇಕು” ಎಂದು ಅವರು ಹೇಳಿದ್ದಾರೆ.
“ಮುಂದಿನ 24 ಗಂಟೆಗಳೊಳಗೆ ಬಂಧನಗಳನ್ನು ಹಿಂಪಡೆಯದಿದ್ದರೆ, ನಾನೂ ಶಾಂತಿಯುತ ಪ್ರತಿಭಟನೆ ನಡೆಸುವ ಬಗ್ಗೆ ಯೋಚಿಸಬೇಕಾಗುತ್ತದೆ. ಅದು ಪ್ರತಿಭಟನೆಯಾಗಿರಬಹುದು, ಉಪವಾಸ ಸತ್ಯಾಗ್ರಹವಾಗಿರಬಹುದು ಅಥವಾ ಲೇಹ್ ಅಥವಾ ದೆಹಲಿಯಲ್ಲಿ ಮೆರವಣಿಗೆಯಾಗಿರಬಹುದು” ಎಂದು ವಾಂಗ್‌ಚುಕ್ ಎಚ್ಚರಿಸಿದ್ದಾರೆ.
ಸರ್ಕಾರ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲಿದೆ ಮತ್ತು ಮತ್ತೊಂದು ಪ್ರತಿಭಟನೆಯ ಅಗತ್ಯ ಎದುರಾಗುವುದಿಲ್ಲ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.