ರಾಜಸ್ತಾನದಲ್ಲಿ ಮಾಜಿ ಶಾಸಕನನ್ನೇ ಹೊಡೆದು ಕೊಂದ ಗ್ರಾಮಸ್ಥರು 
ದೇಶ

ರಾಜಸ್ಥಾನದಲ್ಲಿ ಭೀಕರ ಘರ್ಷಣೆ: ಮಾಜಿ BJP ಶಾಸಕನನ್ನೇ ಹೊಡೆದು ಕೊಂದ ಗ್ರಾಮಸ್ಥರು! Video

ಭೋಂಡಾ ಗ್ರಾಮದ ಸಮೀಪದ ತಮ್ಮ ಗಣಿಗಾರಿಕೆ ಗುತ್ತಿಗೆ ಪ್ರದೇಶಕ್ಕೆ ಭದಾನಾ ಅವರು ತೆರಳಿದ್ದಾಗ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ, ಅವರ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಜೈಪುರ: ಗಣಿಗಾರಿಕೆ ಗುತ್ತಿಗೆ ಮತ್ತು ಕ್ರಷರ್ ಘಟಕದ ವಿಚಾರವಾಗಿ ಗ್ರಾಮಸ್ಥರೊಂದಿಗೆ ನಡೆದ ಘರ್ಷಣೆಯಲ್ಲಿ ರಾಜಸ್ಥಾನದ ಮಾಜಿ ಬಿಜೆಪಿ ಶಾಸಕ ಅಟರ್ ಸಿಂಗ್ ಭದಾನಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಜಸ್ತಾನದ ಭರತ್‌ಪುರ ಜಿಲ್ಲೆಯ ಭೋಂಡಾ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಹಲ್ಲೆಯಲ್ಲಿ ಅವರ ಅಂಗರಕ್ಷಕ ಗಗನ್ ಶರ್ಮಾ ಕೂಡ ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ ಭೋಂಡಾ ಗ್ರಾಮದ ಸಮೀಪದ ತಮ್ಮ ಗಣಿಗಾರಿಕೆ ಗುತ್ತಿಗೆ ಪ್ರದೇಶಕ್ಕೆ ಭದಾನಾ ಅವರು ತೆರಳಿದ್ದಾಗ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ, ಅವರ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ವೀರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ಕಳುಹಿಸಿದರು. ಆದರೆ, ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಗಾಯಗೊಂಡಿದ್ದ ಅಂಗರಕ್ಷಕ ಗಗನ್ ಶರ್ಮಾ ಅವರನ್ನು ಭರತ್‌ಪುರದ ರಾಜ್ ಬಹದ್ದೂರ್ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಣಿಗಾರಿಕೆ ಗುತ್ತಿಗೆ ವಿಚಾರವಾಗಿ 2 ವರ್ಷಗಳಿಂದ ಸಂಘರ್ಷ

ಹರಿಯಾಣ ಮೂಲದ ಅಟರ್ ಸಿಂಗ್ ಭದಾನಾ ಅವರು ಭೋಂಡಾ ಗ್ರಾಮದ ಬೆಟ್ಟಗಳ ಸಮೀಪ ಗಣಿಗಾರಿಕೆ ಗುತ್ತಿಗೆ ಮತ್ತು ಕ್ರಷರ್ ಘಟಕ ಹೊಂದಿದ್ದರು. ಗಣಿಗಾರಿಕೆ ಗುತ್ತಿಗೆಯು ಅವರ ಪತ್ನಿ ಕಮಲೇಶ್ ಭದಾನಾ ಅವರ ಹೆಸರಿನಲ್ಲಿತ್ತು ಎಂದು ವರದಿಯಾಗಿದೆ.

ಭೋಂಡಾ ಮತ್ತು ರಾಯ್‌ಪುರ ಗ್ರಾಮಗಳ ನಿವಾಸಿಗಳು ಈ ಗಣಿಗಾರಿಕೆ ಚಟುವಟಿಕೆಗಳು ಹಾಗೂ ಕ್ರಷರ್ ಘಟಕದ ವಿರುದ್ಧ ಕಳೆದ ಎರಡು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಹಲವು ಬಾರಿ ಧರಣಿ ನಡೆಸಿದ್ದಲ್ಲದೆ, ಗಣಿಗಾರಿಕೆ ಪ್ರದೇಶಕ್ಕೆ ತೆರಳುವ ರಸ್ತೆಯನ್ನೂ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಗಣಿಗಾರಿಕೆ ವಾಹನಗಳ ಸಂಚಾರಕ್ಕಾಗಿ ಗ್ರಾಮ ಪಂಚಾಯಿತಿಗೆ ಸೇರಿದ ಗೋಮಾಳ ಭೂಮಿಯನ್ನು ಭದಾನಾ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಪ್ರತಿಭಟನಾನಿರತ ಗ್ರಾಮಸ್ಥರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಗಣಿಗಾರಿಕೆ ಚಟುವಟಿಕೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರು ಎಂದು ವರದಿಯಾಗಿದೆ.

ನ್ಯಾಯಾಲಯದ ಅನುಮತಿ ಬಳಿಕ ಕ್ರಷರ್ ಘಟಕ ಪುನರಾರಂಭ

ಎರಡು ವರ್ಷಗಳಿಂದ ಗ್ರಾಮಸ್ಥರ ವಿರೋಧದಿಂದಾಗಿ ಕ್ರಷರ್ ಘಟಕದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು ಎನ್ನಲಾಗಿದೆ. ಈ ನಡುವೆ, ನ್ಯಾಯಾಲಯದಿಂದ ಕಾರ್ಯಾಚರಣೆ ನಡೆಸಲು ಅನುಮತಿ ಪಡೆದ ಬಳಿಕ ಭದಾನಾ ಅವರು ಭಾನುವಾರ ಘಟಕವನ್ನು ಪುನರಾರಂಭಿಸಿದ್ದರು.

ಆಡಳಿತದ ಬೆಂಬಲದೊಂದಿಗೆ ಘಟಕವನ್ನು ಮತ್ತೆ ಆರಂಭಿಸಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಘರ್ಷಣೆಯೇ ಮಾಜಿ ಶಾಸಕನ ಸಾವಿಗೆ ಕಾರಣವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

2003ರಿಂದ 2008ರವರೆಗೆ ಬಿಜೆಪಿ ಶಾಸಕರಾಗಿದ್ದ ಭದಾನಾ

ಹರಿಯಾಣ ಮೂಲದ ಅಟರ್ ಸಿಂಗ್ ಭದಾನಾ ಅವರು 2003ರಲ್ಲಿ ರಾಜಸ್ಥಾನದ ಬಯಾನಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. 2008ರವರೆಗೆ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಆರೋಪಿಗಳ ಬಂಧನಕ್ಕೆ ಪೊಲೀಸರ ಕಾರ್ಯಾಚರಣೆ

ಘಟನೆ ಕುರಿತು ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು ಎಂದು ವೀರ್ ಪೊಲೀಸ್ ಠಾಣೆಯ ಉಸ್ತುವಾರಿ ಧೀರೇಂದ್ರ ಸಿಂಗ್ ತಿಳಿಸಿದ್ದಾರೆ. ಗ್ರಾಮಸ್ಥರು ಮತ್ತು ಕ್ರಷರ್ ಘಟಕದ ಮಾಲೀಕರ ನಡುವೆ ಘರ್ಷಣೆ ನಡೆದಿರುವ ಬಗ್ಗೆ ಮಾಹಿತಿ ಬಂದಿತ್ತು ಎಂದು ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸ್ ತಂಡಗಳು ವಿವಿಧೆಡೆ ದಾಳಿ ನಡೆಸುತ್ತಿವೆ. ಘಟನೆಗೆ ಸಂಬಂಧಿಸಿದ ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video