ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಹಾಗೂ ವಿರೋಧ ಪಕ್ಷಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯ ಕಾವು ಮತ್ತಷ್ಟು ಬಿಸಿಯಾಗಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮದೇ ದೇಶವಾಸಿಗಳ ವಿರುದ್ಧ “ಯುದ್ಧ ಸಾರಿದ್ದಾರೆ” ಎಂದು ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆರೋಪಿಸಿದ್ದಾರೆ. ಜೊತೆಗೆ, ಆಯೋಗದ ಮುಖ್ಯಸ್ಥರ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು ಮತ್ತು ವಿರೋಧ ಪಕ್ಷದ ನಾಯಕರನ್ನು ಬಂಧಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ವಿದ್ಯಾರ್ಥಿನಾಯಕಿಯಾರದ ನೇಹಾ ಬೋರಾ, ಆಯಿಷೆ ಘೋಷ್ ಮತ್ತು ನಟ ಪ್ರಕಾಶ್ ರಾಜ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಿಪ್ಕೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಕ್ಕಾಗಿ ವಿದ್ಯಾರ್ಥಿಗಳು, ಯುವ ಪ್ರತಿಭಟನಾಕಾರರು, ವಿರೋಧ ಪಕ್ಷದ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳು ಬಂಧನಕ್ಕೊಳಗಾಗಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಗೆ ಪ್ರತಿಯಾಗಿ ದೆಹಲಿಯಾದ್ಯಂತ ಮೆಟ್ರೋ ನಿಲ್ದಾಣಗಳ ಮುಚ್ಚುವಿಕೆ ಮತ್ತು ರೈಲ್ವೆ ಸೇವೆಗಳ ನಿರ್ಬಂಧ ಸೇರಿದಂತೆ ವ್ಯಾಪಕ ಭದ್ರತಾ ಕ್ರಮಗಳನ್ನು ಸರ್ಕಾರ ಏಕೆ ಜಾರಿಗೊಳಿಸಿದೆ ಎಂದು ಅವರು ಪ್ರಶ್ನಿಸಿದರು. ಈ ಮೂಲಕ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಸರ್ಕಾರವು ಇಡೀ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ದಿಪ್ಕೆ, ಪ್ರತಿಭಟನೆಗಳನ್ನು ಹತ್ತಿಕ್ಕಲು ಮೆಟ್ರೋ ನಿಲ್ದಾಣಗಳನ್ನು ಮುಚ್ಚಿರುವುದು, ರೈಲು ಸೇವೆಗಳ ಮೇಲೆ ನಿರ್ಬಂಧ ಹೇರಿರುವುದು ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಭದ್ರತಾ ಪಡೆಗಳನ್ನು ಕರೆಸಿ ದೆಹಲಿಯನ್ನು ಕೋಟೆಯನ್ನಾಗಿ ಮಾಡಿರುವುದನ್ನು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಶಾಂತಿಯುತ ಪ್ರತಿಭಟನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವುದನ್ನೇ ಕಾನೂನು ಉಲ್ಲಂಘನೆ ಎಂಬಂತೆ ಅಧಿಕಾರಿಗಳು ಪರಿಗಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ದಿಪ್ಕೆ, ಸಿಇಸಿ ಅವರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅತಿಯಾದ ರಕ್ಷಣೆಯು, ಅವರು ಬಿಜೆಪಿಗೆ ಚುನಾವಣೆಗಳನ್ನು ಗೆಲ್ಲಲು ನೆರವಾಗುತ್ತಿದ್ದಾರೆಯೇ ಎಂಬ ಅನುಮಾನವನ್ನು ಹುಟ್ಟುಹಾಕುತ್ತದೆ ಎಂದು ಆರೋಪಿಸಿದ್ದಾರೆ.
ಶುಕ್ರವಾರ ಸಂಜೆ ತಿರಂಗಾ ಮೋರ್ಚಾ
ಮುಂದುವರೆದು, ಜಂತರ್ ಮಂತರ್ ಪ್ರದೇಶವನ್ನು ಇತ್ತೀಚೆಗೆ ಪ್ರತಿಭಟನಾ ಸ್ಥಳದಿಂದ ರದ್ದುಪಡಿಸಲಾಗಿತ್ತು. ಆದರೆ, ಮಂಗಳವಾರ ಬ್ಯಾರಿಕೇಡ್ಗಳನ್ನು ದಾಟಿ ಜಂತರ್ ಮಂತರ್ ಪ್ರವೇಶಿಸಿ ಘೋಷಣೆ ಕೂಗಿದ ಆರೋಪದ ಮೇಲೆ ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸಾರ್ವಜನಿಕ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯವು ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರಿಗೆ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ತಿಹಾರ್ ಜೈಲಿಗೆ ಕಳುಹಿಸಿದೆ. ಜೊತೆಗೆ, ಅಜಿಂಕ್ಯ ಶಿಂಧೆ ಅವರನ್ನು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ. ಹಾಗಾಗಿ, ಸಿಜೆಪಿ ಮುಖಂಡರ ಬಂಧನವನ್ನು ವಿರೋಧಿಸಿ, ಶುಕ್ರವಾರ ಸಂಜೆ 5 ಗಂಟೆಗೆ ದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ‘ತಿರಂಗಾ ಮೋರ್ಚಾ’ ನಡೆಸುವುದಾಗಿ ಅಭಿಜಿತ್ ದಿಪ್ಕೆ ಘೋಷಿಸಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಕರೆ ನೀಡಿದ್ದಾರೆ.
ಮಾಧ್ಯಮಗಳಿಗೆ ಬೆದರಿಕೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಎಸ್ಎ ಕಾರ್ಯಕರ್ತೆ ನೇಹಾ ಬೋರಾ, ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಪೊಲೀಸರು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು. ಪತ್ರಕರ್ತರ ಕ್ಯಾಮೆರಾಗಳನ್ನು ಕಸಿದುಕೊಳ್ಳಲಾಗಿದ್ದು, ವರದಿ ಮಾಡುವುದನ್ನು ಮುಂದುವರಿಸಿದರೆ ಕ್ಯಾಮೆರಾ ವಾಪಸ್ ನೀಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಜೊತೆಗೆ, ದೆಹಲಿ ಎಸಿಪಿ ವಿವೇಕ್ ಭಗತ್ ಅವರು ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಬೋರಾ, ಆಕೆ ದೂರು ದಾಖಲಿಸಲು ಠಾಣೆಗೆ ಹೋದಾಗ ಪೊಲೀಸರು ಆ ಪತ್ರಕರ್ತೆಯ ವಿರುದ್ಧವೇ ಕೌಂಟರ್ ಎಫ್ಐಆರ್ ದಾಖಲಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಒಂದು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸಿ, ನ್ಯಾಯ ಕೇಳುವ ಸಾರ್ವಜನಿಕರ ಮೇಲೆಯೇ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.