ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ): ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದ ನಗ್ಲಾ ಶ್ರೀ ಪದಮ್ ಗ್ರಾಮದಲ್ಲಿ ಮೂವರು ಪುಟ್ಟ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಾವುಗಳಿಗೆ ಆಹಾರ ವಿಷಪೂರಿತವಾಗಿರುವುದು ಪ್ರಾಥಮಿಕ ಕಾರಣ ಇರಬಹುದು ಎಂದು ಪೊಲೀಸರು ಮತ್ತು ವೈದ್ಯಕೀಯ ಅಧಿಕಾರಿಗಳು ಶಂಕಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ರಬುಪುರ ಪ್ರದೇಶದ ನಗ್ಲಾ ಶ್ರೀ ಪದಮ್ ಗ್ರಾಮದ ನಿವಾಸಿ ಮಹೇಶ್ (37) ಹಾಗೂ ಲಲಿತಾ (35) ಇಬ್ಬರು ತಮ್ಮ ಮಕ್ಕಳಾದ ಲಡ್ಡು (11), ಮಿಷ್ಟಿ (7) ಮತ್ತು ಸಾಕ್ಷಾತ್ (3) ಅವರೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ. ಶನಿವಾರ ಬೆಳಗ್ಗೆ ಬಹಳ ಸಮಯದವರೆಗೆ ಮನೆಯ ಬಾಗಿಲು ತೆರೆಯದಿದ್ದಾಗ, ಸಂಶಯಗೊಂಡು ನೆರೆಹೊರೆಯವರು ಪರಿಶೀಲಿಸಿದಾಗ ಐವರೂ ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಅದರಲ್ಲೂ, ಶುಕ್ರವಾರ ರಾತ್ರಿ ರಾತ್ರಿ ಸುಮಾರು 10:00 ಗಂಟೆಗೆ, ಮಲಗುವ ಮುನ್ನ ಇಡೀ ಕುಟುಂಬ ಮ್ಯಾಗಿ ನೂಡಲ್ಸ್ ಜೊತೆಗೆ ಟೀ ಸೇವಿಸಿತ್ತು ಎಂದು ನೆರೆಹೊರೆಯವರು ಹಾಗೂ ಮಹೇಶ್ ಅವರ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ, ಪ್ರಾಥಮಿಕವಾಗಿ ಇದು ಆಹಾರ ವಿಷಾಹಾರವಾದ ಪ್ರಕರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಸಾವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ.
ಮುಂದುವರೆದು, ಸಾವಿಗೆ ನಿಖರವಾದ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಸದ್ಯ ಪೊಲೀಸರು ಸಾವಿನ ನಿಖರ ವೈದ್ಯಕೀಯ ಕಾರಣವನ್ನು ಪತ್ತೆಹಚ್ಚಲು ಐದೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ, ವಿಧಿವಿಜ್ಞಾನ ತಂಡವು ಮನೆಯಲ್ಲಿದ್ದ ಆಹಾರದ ಅವಶೇಷಗಳು ಮತ್ತು ಮ್ಯಾಗಿ, ಚಹಾ ತಯಾರಿಸಲು ಬಳಸಿದ ಸಾಮಗ್ರಿಗಳನ್ನು ಪ್ರಯೋಗಾಲಯದ ತಪಾಸಣೆಗೆ ವಶಪಡಿಸಿಕೊಂಡಿದೆ. ಹಾಗಾಗಿ, ರಾಸಾಯನಿಕ ಮತ್ತು ವಿಧಿವಿಜ್ಞಾನ ವರದಿಗಳು ಬಂದ ನಂತರವಷ್ಟೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೌತಮ್ ಬುದ್ಧ ನಗರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದರ ನಡುವೆ, ಜೇವರ್ ಶಾಸಕ ಧೀರೇಂದ್ರ ಸಿಂಗ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.