ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಭಾನುವಾರ ಮುಂಜಾನೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಇಲ್ಲಿನ ಪ್ರಸಿದ್ಧ ಶೀತಲಾ ಮಾತಾ ದೇವಸ್ಥಾನದ ಬಳಿ ನಿಯಂತ್ರಣ ತಪ್ಪಿದ ಲಾರಿಯೊಂದು ಭಕ್ತರ ಗುಂಪಿನ ಮೇಲೆ ಹರಿದ ಪರಿಣಾಮ ಕನಿಷ್ಠ 13 ಮಂದಿ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಪೊಲೀಸ್ ತಡೆಗೋಡೆಯನ್ನು ಮುರಿದು ಮುನ್ನುಗ್ಗಿದ ಲಾರಿ ದೇವಸ್ಥಾನದ ಪ್ರವೇಶದ್ವಾರ ಮತ್ತು ಹೊರಗೋಡೆಗೆ ಡಿಕ್ಕಿ ಹೊಡೆದು ಹಾನಿಗೊಳಿಸಿದೆ.
ಗ್ವಾಲಿಯರ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ಅವರು ಮಾತನಾಡಿ, ಶನಿವಾರ ತಡರಾತ್ರಿ ಸುಮಾರು 1.30ಕ್ಕೆ ಈ ಘಟನೆ ಸಂಭವಿಸಿದೆ. ಛಿನೋರ್ ಕಡೆಯಿಂದ ಭತ್ತ ತುಂಬಿಕೊಂಡು ಬರುತ್ತಿದ್ದ ಲಾರಿ, ಭಾರೀ ವಾಹನಗಳ ಸಂಚಾರ ನಿರ್ಬಂಧವಿದ್ದ ಕಡಿದಾದ ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ.
ಲಾರಿ ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿದು ರಸ್ತೆಯಲ್ಲಿದ್ದ ಭಕ್ತರ ಮೇಲೆ ಹರಿದಿದ್ದು, ಬಳಿಕ ದೇವಸ್ಥಾನದ ಹೊರಗೋಡೆ ಮತ್ತು ಪ್ರವೇಶದ್ವಾರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.
ಶೀತಲಾ ಮಾತಾ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಿದ್ದರು. ಛಿನೋರ್ ಕಡೆಯಿಂದ ಬರುವ ರಸ್ತೆಯಲ್ಲಿ ಕಡಿದಾದ ಇಳಿಜಾರು ಇರುವುದರಿಂದ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ರಾತ್ರಿ ಸುಮಾರು 1.30ಕ್ಕೆ ಭತ್ತ ತುಂಬಿದ್ದ ಲಾರಿಯನ್ನು ಅಲ್ಲಿ ತಡೆಯಲಾಗಿತ್ತು. ಆದರೆ, ಅದು ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿದು ಮುಂದೆ ಸಾಗಿದ್ದು, ಏಕಾಏಕಿ ನಿಯಂತ್ರಣ ತಪ್ಪಿ ಕೆಳಕ್ಕೆ ಇಳಿದು ದೇವಸ್ಥಾನದ ಹೊರಗೋಡೆ ಮತ್ತು ಪ್ರವೇಶದ್ವಾರಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆಯಲ್ಲಿದ್ದ ಭಕ್ತರು ಲಾರಿಯಡಿ ಸಿಲುಕಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಪಘಾತದ ಬಳಿಕ ಒಟ್ಟು 40 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಐದರಿಂದ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಗ್ವಾಲಿಯರ್ ಜಿಲ್ಲಾಧಿಕಾರಿ ರುಚಿಕಾ ಚೌಹಾಣ್ ಕೂಡ ಘಟನೆಯ ವಿವರ ನೀಡಿದ್ದು, ಅಪಘಾತದ ಮಾಹಿತಿ ಲಭಿಸಿದ ತಕ್ಷಣ ಆಂಬುಲೆನ್ಸ್ಗಳು ಮತ್ತು ಇತರ ವಾಹನಗಳನ್ನು ಪರಿಹಾರ ಕಾರ್ಯಾಚರಣೆಗೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
ನವರಾತ್ರಿ ಹಿನ್ನೆಲೆಯಲ್ಲಿ ಆ ರಸ್ತೆಯಲ್ಲಿ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಬ್ಯಾರಿಕೇಡ್ ಮತ್ತು ಪೊಲೀಸ್ ತಪಾಸಣಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆದರೂ ಲಾರಿ ಅಲ್ಲಿಗೆ ಹೇಗೆ ಪ್ರವೇಶಿಸಿತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಲಾರಿಯ ಯಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಿ, ವಾಹನದಲ್ಲಿ ಏನಾದರೂ ತಾಂತ್ರಿಕ ದೋಷ ಉಂಟಾಗಿತ್ತೇ ಮತ್ತು ಅದು ಎಡಭಾಗಕ್ಕೆ ನಿಯಂತ್ರಣ ತಪ್ಪಿ ಚಲಿಸಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ವೈದ್ಯಕೀಯ ತಂಡ ನಿರಂತರವಾಗಿ ಸಿಟಿ ಸ್ಕ್ಯಾನ್ ಮತ್ತು ಎಕ್ಸ್ರೇ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದೂ ಹೇಳಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಸಹೋದರನಾಗಿರುವ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ರಾತ್ರಿ ಸುಮಾರು 1 ಗಂಟೆಗೆ ಘಟನೆ ಸಂಭವಿಸಿತು. ಲಾರಿಯಲ್ಲಿ ಮಿತಿಗಿಂತ ಹೆಚ್ಚಿನ ಭಾರ ತುಂಬಲಾಗಿತ್ತು. ಕೆಲವರು ಸ್ಥಳದಲ್ಲೇ ಮೃತಪಟ್ಟಿದ್ದನ್ನು ನಾನು ನೋಡಿದೆ. ಅತಿಯಾಗಿ ಭಾರ ತುಂಬಿದ್ದ ಲಾರಿ ಏಕಾಏಕಿ ಬಂದು ಅಂಗಡಿಗಳು ಮತ್ತು ಜನರ ಮೇಲೆ ಹರಿಯಿತು. ನನ್ನ ಸಹೋದರನಿಗೂ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ ಇನ್ನೂ ಗೊಂದಲದ ವಾತಾವರಣವಿದೆ ಎಂದು ತಿಳಿಸಿದ್ದಾರೆ.