ನವದೆಹಲಿ: ಪ್ರತಿಭಟನೆಗಳು ಮತ್ತು ಧರಣಿಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ರಾಜಕೀಯ ನಾಯಕರು ಜನಕಲ್ಯಾಣದತ್ತ ಗಮನ ಹರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ದೆಹಲಿಯ ಹೊರವಲಯದಲ್ಲಿ 8,941 ಕೋಟಿ ರೂ ವೆಚ್ಚದ ದೆಹಲಿ ಜಲ ಮಂಡಳಿಯ (ಡಿಜೆಬಿ) 33 ಯೋಜನೆಗಳಿಗೆ ಚಾಲನೆ ನೀಡುವ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತಗಳ್ಳತನ ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಆರೋಪ ಮಾಡುತ್ತಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ (AAP) ವಿರುದ್ಧ ವಾಗ್ದಾಳಿ ನಡೆಸಿದರು. ಜನಾದೇಶವನ್ನು ಪ್ರಶ್ನಿಸಲು ಈ ಪಕ್ಷಗಳು ರಾಜಕೀಯ ತಂತ್ರಗಾರಿಕೆ ಮತ್ತು ಗುಂಪುಗಳ ಬಲಪ್ರದರ್ಶನವನ್ನು ಬಳಸುತ್ತಿವೆ ಎಂದು ಆರೋಪಿಸಿದರು.
ಆಡಳಿತದತ್ತ ಗಮನ ಹರಿಸದಿದ್ದರೆ, ಉಳಿದಿರುವ ರಾಜಕೀಯ ನೆಲೆಯನ್ನೂ ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.
ರಾಜಕೀಯ ತಂತ್ರಗಾರಿಕೆ ಮತ್ತು ಗುಂಪುಗಳ ಬಲಪ್ರದರ್ಶನದ ಮೂಲಕ ಜನರ ಜನಾದೇಶವನ್ನು ಧಿಕ್ಕರಿಸಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಗೆಲ್ಲಬೇಕೆಂದರೆ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಿ. ಈ ಪ್ರತಿಭಟನೆಗಳು ಮತ್ತು ಧರಣಿಗಳಿಂದ ಏನನ್ನೂ ಸಾಧಿಸಲಾಗದು. ನೀವು ಅಧಿಕಾರದಲ್ಲಿರುವ ಕಡೆ ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ. ಇಲ್ಲದಿದ್ದರೆ, ಉಳಿದಿರುವ ಪ್ರದೇಶಗಳಲ್ಲೂ ನಿಮ್ಮ ಅಸ್ತಿತ್ವ ಅಳಿಸಿಹೋಗಲಿದೆ ಎಂದು ಶಾ ಹೇಳಿದರು.
ಬಿಜೆಪಿ ಗೆದ್ದಾಗಲೆಲ್ಲ ಪ್ರತಿಪಕ್ಷಗಳು ಚುನಾವಣಾ ಫಲಿತಾಂಶವನ್ನು ಪ್ರಶ್ನಿಸುತ್ತವೆ ಎಂದು ಆರೋಪಿಸಿದ ಅವರು, ಚುನಾವಣೆಯಲ್ಲಿನ ಸೋಲನ್ನು ಮುಚ್ಚಿಹಾಕಲು ‘ಮತಗಳ್ಳತನ’ದ ಆರೋಪವನ್ನು ನೆಪವಾಗಿ ಬಳಸಲಾಗುತ್ತಿದೆ ಎಂದು ಹೇಳಿದರು.
ದೆಹಲಿಯಲ್ಲಿ ಹೊಸ ಆಟ ಆರಂಭವಾಗಿದೆ. ಬಿಜೆಪಿಯ ಸರ್ಕಾರಗಳು ಆಯ್ಕೆಯಾಗುತ್ತಿದ್ದಂತೆ, ಅವರು ಮತಗಳ್ಳತನದ ಆರೋಪ ಮಾಡುತ್ತಿದ್ದಾರೆ. ಜನರ ಮತಗಳಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ, ಮತಗಳನ್ನು ಕದ್ದು ಅಧಿಕಾರಕ್ಕೇರಿದೆ ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ, ಮತಗಳ್ಳತನದ ಆರೋಪ ಮಾಡುವ ಮೂಲಕ ಒಳನುಸುಳುಕೋರರ ಮತಗಳನ್ನು ಉಳಿಸಲು ನೀವು ಬಯಸುತ್ತಿದ್ದೀರಿ ಎಂದು ಆರೋಪಿಸಿದರು.
2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನವೇ ಹಲವು ದಶಕಗಳಿಂದ ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಚುನಾವಣಾ ಸೋಲುಗಳನ್ನು ಅನುಭವಿಸಿತ್ತು. ಕೇರಳ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರತಿಪಕ್ಷಗಳು ಗೆಲುವು ಸಾಧಿಸಿರುವುದನ್ನೂ ಪ್ರಸ್ತಾಪಿಸಿದ ಅವರು, ಆ ಪಕ್ಷಗಳು ಗೆದ್ದಾಗಲೂ ಇದೇ ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಮತ್ತು ಇದೇ ಚುನಾವಣಾ ಆಯೋಗ ಅಸ್ತಿತ್ವದಲ್ಲಿದ್ದವು ಎಂದು ಹೇಳಿದರು.
ನೀವು ಸೋತಾಗಲೆಲ್ಲ ಚುನಾವಣಾ ಆಯೋಗವನ್ನು ಟೀಕಿಸುತ್ತೀರಿ. ನ್ಯಾಯಾಲಯಗಳು ನಿಮ್ಮ ಪರವಾಗಿ ತೀರ್ಪು ನೀಡಿದಾಗ ಅವು ಒಳ್ಳೆಯವು; ಇಲ್ಲದಿದ್ದರೆ ಕೆಟ್ಟವಾಗುತ್ತವೆ ಎಂದು ಟೀಕಿಸಿದರು.
ಬಿಜೆಪಿ ಮುಂದಿನ 30 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ, ಪ್ರತಿಪಕ್ಷಗಳ ನಕಾರಾತ್ಮಕ ರಾಜಕಾರಣವು ಅವು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲಿದೆ. ಕಾಂಗ್ರೆಸ್ ಮತ್ತು ಎಎಪಿ ತಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಡಳಿತ ಸುಧಾರಣೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ 30 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ ಎಂದು ನಾನು ಹೇಳಿದಾಗಲೆಲ್ಲ ಅವರು ಮತ್ತೆ ಮತಗಳ್ಳತನದ ಆರೋಪ ಮಾಡುತ್ತಾರೆ. ಅಮಿತ್ ಶಾ ಇಲ್ಲಿಯೇ ಹುಟ್ಟಿದ್ದಾನೆ, ಇಲ್ಲಿಯೇ ವಾಸಿಸುತ್ತಾನೆ ಮತ್ತು ಇಲ್ಲಿಯೇ ಸಾಯುತ್ತಾನೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಪ್ರತಿ ಆರು ತಿಂಗಳಿಗೊಮ್ಮೆ ವಿದೇಶಗಳಿಗೆ ಭೇಟಿ ನೀಡುವ ಅಗತ್ಯ ನನಗಿಲ್ಲ. ನಿಮ್ಮ ನಕಾರಾತ್ಮಕ ರಾಜಕಾರಣದ ಕಾರಣದಿಂದ ಮುಂದಿನ 30 ವರ್ಷಗಳ ಕಾಲ ನೀವು ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಿದ್ದೇನೆ ಎಂದರು.
ದೆಹಲಿಯ ಪರಿಸರ ಸಮಸ್ಯೆಗಳ ಕುರಿತು ಮಾತನಾಡಿದ ಅಮಿತ್ ಶಾ, ಯಮುನಾ ನದಿಗೆ ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯ ಸೇರುವುದಕ್ಕೆ ಹಿಂದಿನ ಕಾಂಗ್ರೆಸ್ ಮತ್ತು ಎಎಪಿ ಸರ್ಕಾರಗಳೇ ಕಾರಣ ಎಂದು ಆರೋಪಿಸಿದರು.
ಯಮುನಾ ನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಕಾಲಮಿತಿಯೊಳಗಿನ ಯೋಜನೆಯಡಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ,
2029ರ ಮೇ ತಿಂಗಳಲ್ಲಿ ಸ್ವಚ್ಛ ಯಮುನೆಯೊಂದಿಗೆ ನಾವು ಜನರ ಮುಂದೆ ಬರುತ್ತೇವೆ. ಪ್ರತಿಯೊಂದು ಮನೆಗೂ ಒಳಚರಂಡಿ ಸಂಪರ್ಕ ಕಲ್ಪಿಸುವುದು ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವುದನ್ನು ಖಚಿತಪಡಿಸುವ ಉದ್ದೇಶದಿಂದ ಮೂರು ವರ್ಷಗಳ ಕಾರ್ಯಯೋಜನೆ ರೂಪಿಸಲಾಗಿದೆ. ಇದೀಗ ಚಾಲನೆ ನೀಡಲಾಗಿರುವ ಯೋಜನೆಗಳು ಈ ಗುರಿ ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ತಿಳಿಸಿದರು.
ದೆಹಲಿಯ ಕಸದ ಗುಡ್ಡಗಳ ವಿಚಾರದಲ್ಲೂ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಎರಡು ಕೋಟಿಗೂ ಹೆಚ್ಚು ಟನ್ಗಳಷ್ಟು ತ್ಯಾಜ್ಯವನ್ನು ತೆರವುಗೊಳಿಸಲಾಗಿದ್ದು, 100 ಎಕರೆ ಭೂಮಿಯನ್ನು ಮುಕ್ತಗೊಳಿಸಲಾಗಿದೆ ಎಂದು ಹೇಳಿದರು. ಮುಂದಿನ ಎರಡು ವರ್ಷಗಳಲ್ಲಿ ಈ ಪ್ರದೇಶಗಳನ್ನು ಉದ್ಯಾನವನಗಳಾಗಿ ಪರಿವರ್ತಿಸಲಾಗುವುದು ಎಂದರು.
ಪಂಜಾಬ್ನ ಎಎಪಿ ಸರ್ಕಾರವನ್ನೂ ಟೀಕಿಸಿದ ಅಮಿತ್ ಶಾ, ರಾಜ್ಯದಲ್ಲಿ ಮಾದಕವಸ್ತುಗಳ ದುರ್ಬಳಕೆಯನ್ನು ನಿಯಂತ್ರಿಸುವಲ್ಲಿ ಅದು ವಿಫಲವಾಗಿದೆ. 2029ರ ವೇಳೆಗೆ ಪಂಜಾಬ್ನಲ್ಲಿ ಎನ್ಡಿಎ ಸರ್ಕಾರ ರಚನೆಯಾಗಲಿದ್ದು, ಮಾದಕವಸ್ತುಗಳ ಅಕ್ರಮ ವ್ಯಾಪಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಹೇಳಿದರು.