ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ಅತ್ಯಂತ ಸೋಮಾರಿ ರಾಜಕಾರಣಿ" ಎಂದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಗುರುವಾರ ಟೀಕಿಸಿದ್ದು, ರಾಜಕೀಯದ ಬಗ್ಗೆ ರಾಹುಲ್ ಗಾಂಧಿಗೆ ಇರುವ ಬದ್ಧತೆಯನ್ನು ಪ್ರಶ್ನಿಸಿದ್ದಾರೆ.
ದೇಶದ ಅಭಿವೃದ್ಧಿಗಾಗಿ ರಾಹುಲ್ ಗಾಂಧಿ ಬಳಿ ಯಾವುದೇ ಸ್ವಂತ ಆಲೋಚನೆಗಳಿಲ್ಲ. ರಾಜಕೀಯ ಸಮಸ್ಯೆಗಳನ್ನು ಹಾಗೆಯೇ ಬಿಟ್ಟು ರಜೆ ಕಾಲ ಕಳೆಯಲು ಹೋಗ್ತಾರೆ ಎಂದಿದ್ದಾರೆ.
"ರಾಹುಲ್ ಗಾಂಧಿ ಒಬ್ಬ ಅತ್ಯಂತ ಸೋಮಾರಿ ರಾಜಕಾರಣಿ. ದೇಶಕ್ಕಾಗಿ ಅವರ ಬಳಿ ಯಾವುದೇ ಸ್ವಂತ ಆಲೋಚನೆಗಳಿಲ್ಲ. ಅವರು ತಮ್ಮ ಜೀವನದಲ್ಲಿ ಎಂದಿಗೂ ಏನನ್ನೂ ಸಾಧಿಸಿಲ್ಲ. ಅವರು ರಜೆಗೆ ಹೋಗುತ್ತಾರೋ ಇಲ್ಲವೋ ಎಂಬುದು ಮುಖ್ಯವಲ್ಲ, ಆದರೆ, ಭಾರತವನ್ನು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸುವ ಬಗ್ಗೆ ಮಾತನಾಡುವಾಗ, ತಮ್ಮ ರಾಜಕೀಯದ ಬಗ್ಗೆ ಎಷ್ಟು ಪ್ರಾಮಾಣಿಕರಾಗಿದ್ದಾರೆ ಎಂಬುದು ಮುಖ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
"ಜನರು ಕೇಳುತ್ತಿರುವ ಪ್ರಶ್ನೆ ಏನೆಂದರೆ - ನೀವು ಸದಾ ಸುಳ್ಳು ಹೇಳುತ್ತೀರಿ, ಸದಾ ರಜೆ ಕಾಲ ಕಳೆಯುತ್ತೀರಿ ಮತ್ತು ನೀವು ಸೃಷ್ಟಿಸಿದ ಅರಾಜಕತೆ ಹಾಗೂ ಗೊಂದಲಗಳಿಂದಾಗಿ ಜನರು ಬೀದಿಪಾಲಾಗಿದ್ದಾರೆ - ಹೀಗಿರುವಾಗ ನಿಮ್ಮಲ್ಲಿ ಪ್ರಾಮಾಣಿಕತೆ ಎಷ್ಟಿದೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿದೇಶಿ ಮೂಲದ ಸಂಸ್ಥೆಗಳಾದ 'ಪ್ರೋಗ್ರೆಸಿವ್ ಇಂಟರ್‌ನ್ಯಾಶನಲ್' (Progressive International) ಮತ್ತು 'ಇಂಡಿಯನ್ ಅಲೈಯನ್ಸ್ ಪ್ಯಾರಿಸ್' (Indian Alliance Paris) ಜೊತೆಗಿರುವ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಸಂಸ್ಥೆಗಳು ಭಾರತದಲ್ಲಿ ಪ್ರತಿಭಟನೆಗಳನ್ನು ತೀವ್ರಗೊಳಿಸುತ್ತಿವೆ ಎಂದು ಆರೋಪಿಸಿರುವ ಅವರು, ದೇಶದಲ್ಲಿ "ಅರಾಜಕತೆ ಮತ್ತು ಗೊಂದಲ" ಸೃಷ್ಟಿಸಲು ಇದೊಂದು ದೊಡ್ಡ ಷಡ್ಯಂತ್ರವಾಗಿದೆ ಎಂದು ದೂರಿದ್ದಾರೆ.