ರಿಲಯನ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ತಮ್ಮ ಮನೆಯಲ್ಲಿ ಹಸುಗಳ ಆರೈಕೆ ಮಾಡುವ ತಮ್ಮ ವೈಯಕ್ತಿಕ ದಿನಚರಿಯ ಜೊತೆಗೆ, ಬೃಹತ್ ಪ್ರಮಾಣದಲ್ಲಿ ಹಸುಗಳ ಸಂರಕ್ಷಣೆಗೆ ಕೈಗೊಂಡಿರುವ ಕಾರ್ಯಗಳ ಬಗ್ಗೆಯೂ ವಿವರಿಸಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಹರಿದಾಡುತ್ತಿದೆ.
ಸುಮಾರು 9 ಲಕ್ಷ ಹಸುಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಪೈಕಿ 7 ಲಕ್ಷ ಹಸುಗಳು ಹಾಲು ನೀಡದ ಹಸುಗಳಾಗಿದ್ದು, ಇನ್ನು ಕೆಲವು ರಕ್ಷಿಸಲ್ಪಟ್ಟ ಹಸುಗಳಾಗಿವೆ.
ಎಂಟು ರಾಜ್ಯಗಳಲ್ಲಿ 100 ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಕಸಾಯಿಖಾನೆಗಳಿಗೆ ಸಾಗಿಸಲಾಗುವ ಪ್ರಾಣಿಗಳನ್ನು ರಕ್ಷಿಸುವ ಕಾರ್ಯದಲ್ಲಿ ಅವು ತೊಡಗಿವೆ ಎಂದು ಹೇಳಿದ್ದಾರೆ.
ಈ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿ ಪಡೆದಿರುವುದಾಗಿ ತಿಳಿಸಿರುವ ಅವರು, ಗುಜರಾತ್ ನ ಜಾಮ್‌ನಗರದಲ್ಲಿರುವ ತಮ್ಮ ‘ವಂತರಾ’ ಪ್ರಾಣಿ ಸಂರಕ್ಷಣಾ ಕೇಂದ್ರದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಕುಟುಂಬದ ವತಿಯಿಂದ ದೇವಸ್ಥಾನಗಳಿಗೆ ನೀಡಿರುವ ದೇಣಿಗೆಗಳ ಕುರಿತು, ಗೋಶಾಲೆಯೊಂದಕ್ಕೆ 10 ಕೋಟಿ ರೂಪಾಯಿ ದೇಣಿಗೆ ನೀಡಿರುವುದನ್ನೂ ಉಲ್ಲೇಖಿಸಿದ್ದಾರೆ.
ಭಾರತೀಯ ಸಂಪ್ರದಾಯಗಳು ಮತ್ತು ಗೋಸಂರಕ್ಷಣೆಯ ಬಗೆಗಿನ ಅವರ ಬದ್ಧತೆಯನ್ನು ಕೆಲವರು ಶ್ಲಾಘಿಸಿದ್ದಾರೆ. ಮತ್ತೊಂದೆಡೆ, ಇಷ್ಟೊಂದು ದೊಡ್ಡ ಪ್ರಮಾಣದ ಕಾರ್ಯಗಳನ್ನು ಕಾರ್ಯಸಾಧ್ಯಗೊಳಿಸುವುದರ ಬಗ್ಗೆ ಹಾಗೂ ಸಂಪನ್ಮೂಲಗಳ ಆದ್ಯತೆಯ ಹಂಚಿಕೆಯ ಕುರಿತು ಕೆಲವರು ಪ್ರಶ್ನೆಗಳನ್ನು ಎತ್ತಿದ್ದಾರೆ.