ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆ ಮೇಯರ್ ರಿತು ತಾವ್ಡೆ ಅವರಿಗೆ ಶುಕ್ರವಾರ ಬಂದ ಇಮೇಲ್ ಸಂದೇಶವೊಂದರಲ್ಲಿ ಅವರ ಕಚೇರಿ, ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ನಿವಾಸ ಮತ್ತು ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇಯರ್ ಅವರ ಕಚೇರಿ ಇರುವ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಪ್ರಧಾನ ಕಚೇರಿಯಲ್ಲಿ ಮಧ್ಯಾಹ್ನ 3:11ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಆ ಇಮೇಲ್‌ನಲ್ಲಿ ಎಚ್ಚರಿಸಲಾಗಿತ್ತು. ಪೊಲೀಸರು ಆವರಣವನ್ನು ಪರಿಶೀಲಿಸಿದರೂ, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿ ಹೇಳಿದರು.
ಉಪ ಮೇಯರ್ ಸಂಜಯ್ ಘಾಡಿ ಅವರಿಗೂ ಈ ಸಂದೇಶವನ್ನು ಕಳುಹಿಸಲಾಗಿದ್ದು, ಅಕ್ಟೋಬರ್ 31 ರಂದು ಶಾಲೆಯೊಂದರ ಮೇಲೆ ಗ್ರೆನೇಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.
ಅಲ್ಲದೆ, ಅಕ್ಟೋಬರ್ 31 ರಿಂದ ನವೆಂಬರ್ 27 ರ ನಡುವೆ ಜುಹುದಲ್ಲಿರುವ ಅಮಿತಾಬ್ ಬಚ್ಚನ್ ಅವರ ನಿವಾಸ 'ಜಲ್ಸಾ' ಮೇಲೆ ದಾಳಿ ನಡೆಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಖಲಿಸ್ತಾನ್' ಬಗ್ಗೆ ಉಲ್ಲೇಖಿಸಿರುವ ಈ ಇಮೇಲ್‌ನಲ್ಲಿ, ನವೆಂಬರ್ 27 ರಂದು ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ನಡೆಯಲಿರುವ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದ ವೇಳೆ ದಾಳಿ ನಡೆಸುವುದಾಗಿಯೂ ಬೆದರಿಕೆ ಹಾಕಲಾಗಿದೆ.
ಈ ಬೆದರಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಇಮೇಲ್ ಎಲ್ಲಿಂದ ಬಂದಿದೆ ಎಂದು ಪತ್ತೆಹಚ್ಚಲು ಮತ್ತು ಅದನ್ನು ಕಳುಹಿಸಿದ ವ್ಯಕ್ತಿಯನ್ನು ಗುರುತಿಸಲು ಪೊಲೀಸರು ಹಾಗೂ ಇತರ ಭದ್ರತಾ ಸಂಸ್ಥೆಗಳು ತನಿಖೆಯನ್ನು ಆರಂಭಿಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ, ಮೇಯರ್ ಕಚೇರಿ, ಸಂಗೀತ ಕಾರ್ಯಕ್ರಮ ನಡೆಯುವ ಸ್ಥಳ, ಪ್ರಮುಖ ಶಿಕ್ಷಣ ಸಂಸ್ಥೆಗಳು ಮತ್ತು ಸಂದೇಶದಲ್ಲಿ ಉಲ್ಲೇಖಿಸಲಾದ ಇತರ ಸ್ಥಳಗಳಲ್ಲಿ ಭದ್ರತೆ ಹಾಗೂ ನಿಗಾವನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.