ನವದೆಹಲಿ: ಹಬ್ಬದ ಸಂದರ್ಭದಲ್ಲಿ ಖರೀದಿ ಮಾಡುವಾಗ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಜನತೆಗೆ ಕರೆ ನೀಡಿದ್ದಾರೆ.
ಇದರಿಂದ 'ವೋಕಲ್ ಫಾರ್ ಲೋಕಲ್' (ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ) ಅಭಿಯಾನಕ್ಕೆ ಮತ್ತಷ್ಟು ಬಲ ದೊರೆಯಲಿದ್ದು, ಸ್ವಾವಲಂಬಿ ಭಾರತದ ಕನಸು ನನಸಾಗಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ವೋಕಲ್ ಫಾರ್ ಲೋಕಲ್' ಅಭಿಯಾನದ ಪರಿಣಾಮವಾಗಿ ಭಾರತದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪುತ್ತಿವೆ ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ಬೆಳೆಯುವ ಮಖಾನಾ (ತಾವರೆ ಬೀಜ) ಗ್ರೀಸ್ಗೆ ರಫ್ತಾಗುತ್ತಿದ್ದರೆ, ಕರ್ನಾಟಕದ ತೊಗರಿಬೇಳೆ ಮಾಲ್ಡೀವ್ಸ್ಗೆ ರಫ್ತಾಗುತ್ತಿದೆ. ಇದರಿಂದ ಭಾರತೀಯ ರೈತರಿಗೆ ಹೊಸ ಅಂತಾರಾಷ್ಟ್ರೀಯ ಮಾರುಕಟ್ಟೆಗಳು ತೆರೆದುಕೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ.
ಹಬ್ಬಗಳ ಸಂದರ್ಭದಲ್ಲಿ ಜನರು ತಮ್ಮ ಕುಟುಂಬದ ಸದಸ್ಯರು ಹಾಗೂ ಪ್ರೀತಿಪಾತ್ರರಿಗಾಗಿ ಅನೇಕ ವಸ್ತುಗಳನ್ನು ಖರೀದಿಸುತ್ತಾರೆ ಎಂದು ಪ್ರಸ್ತಾಪಿಸಿದ ಪ್ರಧಾನಿ, ಈ ಬಾರಿ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ಬಾರಿಯೂ ಹಬ್ಬದ ಖರೀದಿ ಸಂದರ್ಭದಲ್ಲಿ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡಿ. ನೀವು ಮಾಡುವ ಖರೀದಿಯು ಅವರ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಜನರು ನೀಡುವ ವೈಯಕ್ತಿಕ ಬೆಂಬಲವು 'ವೋಕಲ್ ಫಾರ್ ಲೋಕಲ್' ಅಭಿಯಾನವನ್ನು ಮತ್ತಷ್ಟು ಬಲಪಡಿಸಲಿದೆ. ಈ ಅಭಿಯಾನ ಎಷ್ಟು ಹೆಚ್ಚು ಬೆಳೆಯುತ್ತದೆಯೋ, ಸ್ವಾವಲಂಬಿ ಭಾರತದ ಕನಸು ಅಷ್ಟು ಬೇಗ ನನಸಾಗಲಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡಿ, ಅವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ನಾನು ವೈಯಕ್ತಿಕವಾಗಿ ನಿಮ್ಮೆಲ್ಲರಲ್ಲೂ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಉತ್ಪನ್ನಗಳ ಆಕರ್ಷಕ ಪ್ಯಾಕೇಜಿಂಗ್ಗೆ ಒತ್ತು
ಉತ್ಪನ್ನಗಳ ಉತ್ತಮ ಪ್ಯಾಕೇಜಿಂಗ್ನ ಮಹತ್ವವನ್ನೂ ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ. ಮಾರುಕಟ್ಟೆಯಲ್ಲಿ ಯಾವುದಾದರೂ ಉತ್ಪನ್ನವನ್ನು ನೋಡಿದಾಗ ಅದರ ಆಕರ್ಷಕ ಪ್ಯಾಕೇಜಿಂಗ್ ನಮ್ಮ ಗಮನ ಸೆಳೆಯುತ್ತದೆ. ಅದನ್ನು ಕೈಗೆತ್ತಿಕೊಂಡು ಉತ್ಪನ್ನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸಕ್ತಿ ಮೂಡುತ್ತದೆ. ಇದನ್ನು ಅರಿತುಕೊಂಡು ಈಗ ಉತ್ಪನ್ನಗಳ ಪ್ಯಾಕೇಜಿಂಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ತಲೆಮಾರುಗಳಿಂದ ಜನರ ಅಸ್ಮಿತೆಯ ಭಾಗವಾಗಿರುವ ದೇಶದ ಸಾಂಪ್ರದಾಯಿಕ ಕೌಶಲಗಳ ಮಹತ್ವವನ್ನೂ ಪ್ರಧಾನಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
ಪಂಜಾಬ್ನಲ್ಲಿ ಸಾಂಪ್ರದಾಯಿಕ ಕೃಷಿಗೆ ಮರುಜೀವ
ಪಂಜಾಬ್ನಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳ ಕುರಿತು ಮಾತನಾಡಿದ ಮೋದಿ, 'ಖೇತಿ ವಿರಾಸತ್ ಮಿಷನ್' ಎಂಬ ಸಂಸ್ಥೆಯು ಸಾವಯವ ಕೃಷಿಗೆ ಹೊಸ ಚೈತನ್ಯ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಈ ಸಂಸ್ಥೆಯ ಸದಸ್ಯರು ಪಂಜಾಬ್ನ ಮಾಲ್ವಾ ಪ್ರದೇಶದಲ್ಲಿ ನೈಸರ್ಗಿಕ ಹತ್ತಿ ಕೃಷಿಯನ್ನು ಉತ್ತೇಜಿಸಲು ಮುಂದಾಗಿದ್ದು, ಈ ಉಪಕ್ರಮಕ್ಕೆ 'ನವ್-ತ್ರಿಂಜನ್' ಎಂದು ಹೆಸರಿಟ್ಟಿದ್ದಾರೆ.
ಇದು ಪರಿಸರಕ್ಕೆ ಎಷ್ಟು ದೊಡ್ಡ ಕೊಡುಗೆ ನೀಡುತ್ತದೆ ಎಂಬುದನ್ನು ನೀವು ಊಹಿಸಬಹುದು. ಸ್ನೇಹಿತರೇ, ಕೆಲವು ವರ್ಷಗಳ ಹಿಂದೆ ನವ್-ತ್ರಿಂಜನ್ ಸಂಸ್ಥೆಯು ನೇಯ್ಗೆ ಕೌಶಲವನ್ನು ಹೊಸ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನೇಯ್ಗೆ ಶಾಲೆಯನ್ನೂ ಆರಂಭಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಉತ್ತರಾಖಂಡದ ಹೆವಲ್ ನದಿಗೆ ಮರುಜೀವ
ಉತ್ತರಾಖಂಡದ ತೆಹ್ರಿ ಗಢ್ವಾಲ್ ಜಿಲ್ಲೆಯ ಜನರು ಒಗ್ಗೂಡಿ ಹೆವಲ್ ನದಿಗೆ ಮರುಜೀವ ನೀಡಿರುವ ಪ್ರಯತ್ನವನ್ನೂ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಕೆಲವು ಸಮಯದ ಹಿಂದೆ ಹೆವಲ್ ನದಿಯ ನೀರಿನ ಮಟ್ಟ ಕುಸಿಯಲು ಆರಂಭಿಸಿತ್ತು. ಸುತ್ತಮುತ್ತಲಿನ ನೈಸರ್ಗಿಕ ಜಲಮೂಲಗಳೂ ಬತ್ತಿಹೋಗುತ್ತಿದ್ದವು. ಈ ಸಮಸ್ಯೆಯನ್ನು ಎದುರಿಸಲು ಸ್ಥಳೀಯ ಆಡಳಿತ ಹಾಗೂ ಗ್ರಾಮಸ್ಥರು ಒಗ್ಗೂಡಿ ಹೆವಲ್ ನದಿಯನ್ನು ಉಳಿಸುವ ಅಭಿಯಾನ ಆರಂಭಿಸಿದರು.
ಈ ಅಭಿಯಾನದ ಭಾಗವಾಗಿ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಅಳವಡಿಸಲಾಯಿತು. ಅಂತರ್ಜಲ ಮರುಪೂರಣಕ್ಕೆ ಕ್ರಮ ಕೈಗೊಳ್ಳಲಾಯಿತು. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ನೆಡಲಾಯಿತು. ಇಂದು ಈ ಪ್ರಯತ್ನಗಳ ಫಲವಾಗಿ ಹೆವಲ್ ನದಿಗೆ ಹೊಸ ಜೀವ ದೊರೆತಿದೆ. ಇದರ ಜತೆಗೆ ಹತ್ತಾರು ನೈಸರ್ಗಿಕ ಜಲಮೂಲಗಳೂ ಪುನರುಜ್ಜೀವನಗೊಂಡಿವೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಇ-ಸಂಜೀವನಿ ಮೂಲಕ ಸುಮಾರು 50 ಕೋಟಿ ವೈದ್ಯಕೀಯ ಸಮಾಲೋಚನೆ
ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವೈದ್ಯಕೀಯ ಸಮಾಲೋಚನೆ ಸೇವೆಗಳನ್ನು ಒದಗಿಸುತ್ತಿರುವ 'ಇ-ಸಂಜೀವನಿ' ಯೋಜನೆಯ ಸಾಧನೆಯನ್ನೂ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
ಇದುವರೆಗೆ ಇ-ಸಂಜೀವನಿ ಮೂಲಕ ಸುಮಾರು 50 ಕೋಟಿ ದೂರವೈದ್ಯಕೀಯ ಸಮಾಲೋಚನೆಗಳು ನಡೆದಿವೆ ಎಂಬುದನ್ನು ತಿಳಿಸಲು ನನಗೆ ಅಪಾರ ಸಂತಸವಾಗುತ್ತಿದೆ. ಇದು ಬಹುದೊಡ್ಡ ಸಾಧನೆಯಾಗಿದ್ದು, ತಂತ್ರಜ್ಞಾನದ ಶಕ್ತಿ, ನಮ್ಮ ವೈದ್ಯರ ಸೇವಾ ಮನೋಭಾವ ಹಾಗೂ ನಾಗರಿಕರ ವಿಶ್ವಾಸಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಇ-ಸಂಜೀವನಿ ಸೇವೆಯು ತನ್ನ ವ್ಯಾಪಕ ಜಾಲದ ಮೂಲಕ ದೇಶದ ಅತ್ಯಂತ ದುರ್ಗಮ ಪ್ರದೇಶಗಳಿಗೂ ತಲುಪುತ್ತಿದೆ. ಈ ಸೇವೆಯ ಪ್ರಯೋಜನ ಪಡೆದ ಫಲಾನುಭವಿಗಳ ಅನುಭವಗಳು ಮನಮುಟ್ಟುವಂತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.