ಡಿ ಕೆ ಶಿವಕುಮಾರ್, ಪ್ರಮೋದ್ ಸಾವಂತ್  
ದೇಶ

'ಇಲ್ಲಿಗೆ ಬಂದು ಕನ್ನಡದಲ್ಲಿ ಮಾತಾಡಿದರೆ ಜನ ಮತ ಹಾಕೋದಿಲ್ಲ, ಗೋವಾ ಜನತೆಗೆ ಕೊಂಕಣಿ ಭಾಷೆ ಚೆನ್ನಾಗಿ ಗೊತ್ತಿದೆ': ಪ್ರಮೋದ್ ಸಾವಂತ್ ವ್ಯಂಗ್ಯ

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ಅಸ್ಮಿತೆ ಹಾಗೂ ಹಿತಾಸಕ್ತಿಗಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುವ ಉದ್ದೇಶದಿಂದ ಪ್ರತಿಪಕ್ಷ ಕಾಂಗ್ರೆಸ್ 'ಗೋಯ್ ರಾಖೋನ್ ಯಾತ್ರೆ' (ಗೋವಾ ಉಳಿಸಿ ಅಭಿಯಾನ) ಆಯೋಜಿಸಿತ್ತು.

ಪಣಜಿ: ಗೋವಾದಲ್ಲಿ ಕಾಂಗ್ರೆಸ್ ಪಕ್ಷದ ಯಾತ್ರೆಯ ವೇಳೆ ಕನ್ನಡದಲ್ಲಿ ಭಾಷಣ ಮಾಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವ್ಯಂಗ್ಯವಾಡಿದ್ದಾರೆ. ಗೋವಾದಲ್ಲಿ ಕನ್ನಡದಲ್ಲಿ ಮಾತನಾಡುವುದರಿಂದ ಮತಗಳು ಸಿಗುವುದಿಲ್ಲ. ಇಲ್ಲಿನ ಜನರಿಗೆ ಕೊಂಕಣಿ ಭಾಷೆ ಚೆನ್ನಾಗಿ ಗೊತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ಅಸ್ಮಿತೆ ಹಾಗೂ ಹಿತಾಸಕ್ತಿಗಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುವ ಉದ್ದೇಶದಿಂದ ಪ್ರತಿಪಕ್ಷ ಕಾಂಗ್ರೆಸ್ 'ಗೋಯ್ ರಾಖೋನ್ ಯಾತ್ರೆ' (ಗೋವಾ ಉಳಿಸಿ ಅಭಿಯಾನ) ಆಯೋಜಿಸಿತ್ತು.

ಈ ಯಾತ್ರೆಯ ಅಂಗವಾಗಿ ಅಕ್ಟೋಬರ್ 8ರಂದು ಗೋವಾದ ಕೊರ್ಟಾಲಿಮ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕನ್ನಡದಲ್ಲಿ ಭಾಷಣ ಮಾಡಿದ್ದರು. ಅಕ್ಟೋಬರ್ 18ರಂದು ಈ ಅಭಿಯಾನ ಮುಕ್ತಾಯಗೊಂಡಿತ್ತು.

ನಿನ್ನೆ ಶನಿವಾರ ದಕ್ಷಿಣ ಗೋವಾದ ಮರ್ಮಗಾಂವ್ ತಾಲೂಕಿನಲ್ಲಿ ಬಿಜೆಪಿಯ ಕೊರ್ಟಾಲಿಮ್ ವಿಧಾನಸಭಾ ಕ್ಷೇತ್ರದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಮೋದ್ ಸಾವಂತ್, "ಯಾರಾದರೂ ಇಲ್ಲಿಗೆ ಬಂದು 'ಯೆಂದು ಗುಂಡು' ಎಂದು ಮಾತನಾಡಿದರೆ ಅವರಿಗೆ ಮತಗಳು ಸಿಗುವುದಿಲ್ಲ. ಗೋವಾದ ಜನರಿಗೆ ಕೊಂಕಣಿ ಭಾಷೆ ಚೆನ್ನಾಗಿ ಗೊತ್ತಿದೆ" ಎಂದು ವ್ಯಂಗ್ಯವಾಡಿದ್ದಾರೆ.

ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 40 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ. ಈ ಗುರಿಯ ಭಾಗವಾಗಿ ಕೊರ್ಟಾಲಿಮ್ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಲು ಪಕ್ಷ ಪ್ರಯತ್ನಿಸುತ್ತಿದೆ ಎಂದು ಸಾವಂತ್ ತಿಳಿಸಿದ್ದಾರೆ.

2027ರ ಚುನಾವಣೆಯಲ್ಲಿ ನಾವು 30 ಸ್ಥಾನಗಳನ್ನು ಗೆಲ್ಲಲು ಬಯಸುತ್ತೇವೆ. ಆ ಗೆಲುವಿನ ಪಟ್ಟಿಯಲ್ಲಿ ಕೊರ್ಟಾಲಿಮ್ ಕ್ಷೇತ್ರವೂ ಇರಬೇಕು ಎಂಬುದು ನನ್ನ ಆಶಯ. ನಾವು ಮತ್ತೊಮ್ಮೆ ಇತಿಹಾಸವನ್ನು ಮರುಕಳಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ.

2012 ಮತ್ತು 2017ರ ವಿಧಾನಸಭಾ ಚುನಾವಣೆಗಳಲ್ಲಿ ಕೊರ್ಟಾಲಿಮ್ ಕ್ಷೇತ್ರದಲ್ಲಿ ಬಿಜೆಪಿ ಸಾಧಿಸಿದ್ದ ಗೆಲುವುಗಳನ್ನು ಸ್ಮರಿಸಿದ ಸಾವಂತ್, ಈ ಕ್ಷೇತ್ರದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಪ್ರಮುಖ ನಾಯಕ ಹಾಗೂ ಮಾಜಿ ಶಾಸಕ ದಿವಂಗತ ಮತಾನ್ಹಿ ಸಲ್ಡಾನ್ಹಾ ಅವರನ್ನು ನೆನಪಿಸಿಕೊಂಡಿದ್ದಾರೆ.

2012ರ ವಿಧಾನಸಭಾ ಚುನಾವಣೆಯಲ್ಲಿ ಮತಾನ್ಹಿ ಸಲ್ಡಾನ್ಹಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಕೊರ್ಟಾಲಿಮ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರ ನಿಧನ ನಂತರ 2017ರ ಚುನಾವಣೆಯಲ್ಲಿ ಅವರ ಪತ್ನಿ ಅಲೀನಾ ಸಲ್ಡಾನ್ಹಾ ಅದೇ ಕ್ಷೇತ್ರದಲ್ಲಿ ಬಿಜೆಪಿ ಪರ ಗೆಲುವು ಸಾಧಿಸಿ ಸ್ಥಾನವನ್ನು ಉಳಿಸಿಕೊಂಡಿದ್ದರು.

ದಕ್ಷಿಣ ಗೋವಾದ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಮತಾನ್ಹಿ ಸಲ್ಡಾನ್ಹಾ ಅವರ ಹೆಸರನ್ನು ಇಡಲಾಗಿದೆ ಎಂದು ಮುಖ್ಯಮಂತ್ರಿ ಸಾವಂತ್ ತಿಳಿಸಿದ್ದಾರೆ.

ಪ್ರಸ್ತುತ ಗೋವಾ ವಿಧಾನಸಭೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ನಿಧನರಾದ ಬಳಿಕ ಪಕ್ಷದ ಶಾಸಕರ ಸಂಖ್ಯೆ 26ಕ್ಕೆ ಇಳಿದಿದೆ. ಇಬ್ಬರು ಶಾಸಕರನ್ನು ಹೊಂದಿರುವ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (MGP) ಹಾಗೂ ಮೂವರು ಪಕ್ಷೇತರ ಶಾಸಕರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಮೂವರು ಶಾಸಕರನ್ನು ಹೊಂದಿದ್ದರೆ, ಆಮ್ ಆದ್ಮಿ ಪಕ್ಷ ಇಬ್ಬರು ಶಾಸಕರನ್ನು ಹೊಂದಿದೆ. ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ರೆವಲ್ಯೂಷನರಿ ಗೋವಾನ್ಸ್ ಪಾರ್ಟಿ ತಲಾ ಒಬ್ಬ ಶಾಸಕರನ್ನು ಹೊಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ರಾಜ್ಯಗಳಲ್ಲಿ ದಾಳಿ, 100 ಕೋಟಿ ರೂ. ಹವಾಲಾ ವಹಿವಾಟು ಬಯಲು: 'ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ' : ಅಮಿತ್ ಶಾ

ನಿಮ್ಮ ದೇಶದ ಅಸಲಿ ಆಡಳಿತಗಾರರೇ ಸೇನೆ, ಮಿಲಿಟರಿ ತಾಳಕ್ಕೆ ಕುಣಿಯುವ ನಕಲಿ ಸರ್ಕಾರ ನಿಮ್ಮದು: ವಿಶ್ವಸಂಸ್ಥೆಯಲ್ಲಿ ಪಾಕ್ ಮುಖವಾಡ ಕಳಚಿದ ಭಾರತ..!

ಹೌತಿ ದಾಳಿ ಮಧ್ಯೆಯೇ Riyadh ಏರ್‌ಪೋರ್ಟ್‌ ಓಪನ್: ಕೇವಲ 2 ಟರ್ಮಿನಲ್‌ಗಳಲ್ಲಿ ಮಾತ್ರ ಸಂಚಾರ ಆರಂಭ, ಪ್ರಯಾಣಕ್ಕೂ ಮುನ್ನ ಈ ಸೂಚನೆ ಗಮನಿಸಿ..!

ಬೆಂಗಳೂರು ಆಸ್ತಿ ಮಾಲೀಕರಿಗೆ Good News: ಅ.31ರಿಂದ ಇ-ಖಾತಾ ಮೇಳ ಪುನರಾರಂಭ..!

ಅಕ್ಟೋಬರ್ 30 ರಂದು ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಅಣಕು ಸಂಸತ್ ಅಧಿವೇಶನ, ಸಿಇಸಿ ಜ್ಞಾನೇಶ್ ಕುಮಾರ್ ಮಹಾಭಿಯೋಗ- INDIA bloc