ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ 
ದೇಶ

"ಮೋದಿ ಕಾ ಬಾಪ್ ಭಿ ಜಾಯೇಗಾ" ಹೇಳಿಕೆ: ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ BJPತೀವ್ರ ಆಕ್ರೋಶ, ದೇಶಾದ್ಯಂತ ಸಮರಕ್ಕೆ ಮುಂದು..!

ದೇಶಾದ್ಯಂತದ ಬಿಜೆಪಿ ರಾಜ್ಯ ಘಟಕಗಳು ತಮ್ಮ ಕಚೇರಿಗಳ ಮುಂದೆ ಪ್ರತಿಭಟನೆ ಆಯೋಜಿಸಲಿದ್ದು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.

ನವದೆಹಲಿ: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಿವಂಗತ ತಂದೆಯವರ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದಾರೆನ್ನಲಾದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಸೋಮವಾರ ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.

ದೇಶದ ಎಲ್ಲಾ ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಕೇಸರಿ ಪಡೆ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದೆ.

ದೇಶದ ವಿವಿಧ ರಾಜ್ಯಗಳಲ್ಲಿರುವ ಪಕ್ಷದ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವಂತೆ ಬಿಜೆಪಿ ರಾಜ್ಯ ಘಟಕಗಳಿಗೆ ಸೂಚನೆ ನೀಡಿದೆ.

ಖರ್ಗೆ ಅವರ ಹೇಳಿಕೆಯನ್ನು ‘ಅವಮಾನಕರ, ಅಸಭ್ಯ ಮತ್ತು ಆಕ್ಷೇಪಾರ್ಹ’ ಎಂದು ಬಣ್ಣಿಸಿರುವ ಬಿಜೆಪಿ, ಇದು ಪ್ರಧಾನಿಯ ಕುಟುಂಬದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಹೇಳಿದೆ.

ದೇಶಾದ್ಯಂತದ ಬಿಜೆಪಿ ರಾಜ್ಯ ಘಟಕಗಳು ತಮ್ಮ ಕಚೇರಿಗಳ ಮುಂದೆ ಪ್ರತಿಭಟನೆ ಆಯೋಜಿಸಲಿದ್ದು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ರಾಜಕೀಯ ಚರ್ಚೆಯಲ್ಲಿ ಸ್ವೀಕಾರಾರ್ಹವಲ್ಲದ ರೀತಿಯ ವೈಯಕ್ತಿಕ ಟೀಕೆಗಳಿಗೆ ವಿರೋಧ ವ್ಯಕ್ತಪಡಿಸುವುದು ಪ್ರತಿಭಟನೆಯ ಉದ್ದೇಶವಾಗಿದೆ ಎಂದು ಪಕ್ಷ ತಿಳಿಸಿದೆ.

ರಾಜಕೀಯ ಎದುರಾಳಿಗಳನ್ನು ಟೀಕಿಸುವಾಗ ಅವರ ಆಡಳಿತ ಮತ್ತು ನೀತಿಗಳ ಬಗ್ಗೆ ಮಾತನಾಡಬೇಕೇ ಹೊರತು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಬಾರದು. ಅದರಲ್ಲೂ ಮೃತಪಟ್ಟ ಕುಟುಂಬ ಸದಸ್ಯರ ಬಗ್ಗೆ ಹೇಳಿಕೆ ನೀಡಿರುವುದಕ್ಕೆ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಖರ್ಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿಯ ಹಿರಿಯ ನಾಯಕರು ಒತ್ತಾಯಿಸಿದ್ದು, ರಾಜಕೀಯ ಭಿನ್ನಾಭಿಪ್ರಾಯಗಳು ವೈಯಕ್ತಿಕ ದಾಳಿಗಳಿಗೆ ಕಾರಣವಾಗಬಾರದು ಎಂದು ಹೇಳಿದ್ದಾರೆ.

ಇಂತಹ ಹೇಳಿಕೆಗಳಿಗೆ ಪಕ್ಷದ ವಿರೋಧವನ್ನು ಪ್ರತಿಭಟನೆಗಳ ಮೂಲಕ ಸ್ಪಷ್ಟಪಡಿಸಲಾಗುವುದು ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.

ಏನಿದು ಘಟನೆ?

ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡುತ್ತಿದ್ದಾಗ, ಸಭೆಯಲ್ಲಿದ್ದ ಯುವಕನೊಬ್ಬ "ಮೋದಿ ನಹೀ ಜಾಯೇಗಾ" (ಮೋದಿ ಅಧಿಕಾರದಿಂದ ಹೋಗುವುದಿಲ್ಲ) ಎಂದು ಘೋಷಣೆ ಕೂಗಿದ್ದ.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಖರ್ಗೆ, "ಮೋದಿ ಕಾ ಬಾಪ್ ಭಿ ಜಾಯೇಗಾ" (ಮೋದಿಯಷ್ಟೇ ಅಲ್ಲ, ಅವರ ತಂದೆಯೂ ಹೋಗಬೇಕಾಗುತ್ತದೆ) ಎಂದು ತಿರುಗೇಟು ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜಕೀಯ ರಣಾಂಗಣ ಕಾವೇರಿದೆ.

ಬಿಜೆಪಿ ಆಕ್ರೋಶ

ಈ ನಡುವೆ ಖರ್ಗೆ ಅವರ ಈ ಹೇಳಿಕೆಯನ್ನು "ಅತ್ಯಂತ ಅಸಭ್ಯ, ಅಪಮಾನಕಾರಿ ಮತ್ತು ಕೀಳುಮಟ್ಟದ್ದು ಎಂದು ಬಿಜೆಪಿ ನಾಯಕರು ಜರೆದಿದ್ದಾರೆ. ದೇಶದ ಪ್ರಧಾನಿಯವರ ಕುಟುಂಬವನ್ನು ರಾಜಕೀಯಕ್ಕೆ ಎಳೆದು ತಂದಿರುವುದರ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಖರ್ಗೆ ವಿರುದ್ಧ ಈಗಾಗಲೇ ಪೊಲೀಸ್ ದೂರನ್ನು ದಾಖಲಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸರಣಿ ಚುನಾವಣಾ ಸೋಲುಗಳಿಂದ ಕಾಂಗ್ರೆಸ್ ಎಷ್ಟು ಹತಾಶೆಯಾಗಿದೆ ಎಂಬುದಕ್ಕೆ ಖರ್ಗೆ ಅವರ ವೈಯಕ್ತಿಕ ನಿಂದನೆಯೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇತರ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷವನ್ನು "ಮಾಫಿಯಾ ಗ್ಯಾಂಗ್" ಗೆ ಹೋಲಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಕಾಂಗ್ರೆಸ್ ಸ್ಪಷ್ಟನೆ

ಈ ವಿವಾದದ ಕುರಿತು ಕಾಂಗ್ರೆಸ್ ಹಿರಿಯ ನಾಯಕತ್ವ ಮೌನ ವಹಿಸಿದ್ದರೂ, ಸ್ಥಳೀಯ ನಾಯಕರು ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಭಾಷಣ ಮಾಡುವಾಗ ಕಿಡಿಗೇಡಿಗಳು ಪದೇ ಪದೇ ಅಡ್ಡಿಪಡಿಸಿ ಉದ್ರೇಕಿಸಿದ್ದರಿಂದ ಖರ್ಗೆ ಅವರು ತಕ್ಷಣದ ಪ್ರತಿಕ್ರಿಯೆಯಾಗಿ ಆ ರೀತಿ ಮಾತನಾಡಿದ್ದಾರೆಯೇ ಹೊರತು, ಯಾರನ್ನೂ ನಿಂದಿಸುವ ಉದ್ದೇಶ ಅವರಿಗಿರಲಿಲ್ಲ ಎಂದು ಸ್ಥಳೀಯ ಸಂಘಟಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ': 'ಚುನಾವಣಾ ಸೋಲುಗಳಿಂದ ಹತಾಶೆ'- ಖರ್ಗೆ ಹೇಳಿಕೆ ವಿರುದ್ಧ ಅಮಿತ್ ಶಾ ಕಿಡಿ!

ಜಾಮಿಯಾ ಇಸ್ಲಾಮಿಯಾ ವಿವಿಯಲ್ಲಿ 14ನೇ ದಿನವೂ ಮುಂದುವರೆದ ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ; ನೂರಾರು ಮಂದಿ ಭಾಗಿ!

ನಮ್ಮ ಧಾರ್ಮಿಕ ಕಾರ್ಯಗಳಿಗೆ ಪೊಲೀಸ್ ಇಲಾಖೆಯಿಂದ ಅಡ್ಡಿ; ನಮ್ಮ ಖಾಸಗಿ ಆಸ್ತಿ ಅಂಬಾರಿ ಭದ್ರತೆಗೂ ಧಕ್ಕೆ: ರಾಜಮಾತೆ ಪ್ರಮೋದಾದೇವಿ ಅಸಮಾಧಾನ!

ವಿದೇಶಿ ಗೆಳೆಯ ಇಸಾಯ್ ಕೈಹಿಡಿದ 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ; ಹಿಂದೂ ಸಂಪ್ರದಾಯದಂತೆ ವಿವಾಹ!

ಸ್ಫೋಟಕ ಶತಕ: ಏಕದಿನ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದ ಭಾರತದ ದೀಪ್ತಿ ಶರ್ಮಾ!