ಪುಣೆ: ರಸ್ತೆ ಬದಿಯಲ್ಲಿ ನಿಂತಿದ್ದ 18 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಬಲವಂತವಾಗಿ ಅಪಹರಣ ಮಾಡಲು ಯತ್ನಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಪುಣೆಯ ಸುಖಸಾಗರನಗರದ ಸಮೀಪದ ಸಮರ್ಥ್ ಡೈರಿ ಮುಂಭಾಗದಲ್ಲಿ ಅಕ್ಟೋಬರ್ 24ರಂದು ಸಂಜೆ ಸುಮಾರು 6.30ರ ವೇಳೆ ಈ ಘಟನೆ ನಡೆದಿದೆ. ಯುವತಿ ಕಿರುಚಿಕೊಂಡಾಗ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಜಿತು ಕಿಶೋರಿಲಾಲ್ ಸರೋಜ್ ಎಂದು ಗುರುತಿಸಲಾಗಿದೆ. ಪುಣೆಯ ಕತ್ರಜ್-ಕೊಂಡ್ವಾ ರಸ್ತೆಯ ವಿದ್ಯಾನಗರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಿದ್ದೇನು?
ಯುವತಿ ತನ್ನ ಸ್ನೇಹಿತೆ ಮಾನ್ಸಿ ಗಾಯಕ್ವಾಡ್ ಅವರನ್ನು ಭೇಟಿಯಾಗಲು ಬಂದಿದ್ದು, ಅವರಿಗಾಗಿ ಕಾಯುತ್ತಿದ್ದಳು. ಈ ವೇಳೆ ಆರೋಪಿ ಆಕೆಯ ಬಳಿ ಬಂದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ಯುವತಿಯ ಎದೆ ಮುಟ್ಟಿ, ಅಂಗಿಯನ್ನು ಎಳೆದಿದ್ದಾನೆ. ಬಳಿಕ ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಹೋಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಇದರಿಂದ ಭಯಗೊಂಡ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಆ ವೇಳೆಗೆ ಸ್ಥಳಕ್ಕೆ ಬಂದಿದ್ದ ಆಕೆಯ ಸ್ನೇಹಿತೆ ಮಾನ್ಸಿ, ಆರೋಪಿಯನ್ನು ತಳ್ಳಿ ಯುವತಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾಳೆ.
ಆರಂಭದಲ್ಲಿ ಆರೋಪಿ ಯುವತಿಯನ್ನು ಮುಟ್ಟಿದಾಗ ಆಕೆ ದೂರ ಸರಿದಿದ್ದಳು. ಬಳಿಕ ಹಿಂದಿನಿಂದ ಬಂದ ಆತ ಆಕೆಯನ್ನು ಎತ್ತಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಯುವತಿ ನೆಲಕ್ಕೆ ಬಿದ್ದಿದ್ದಾಳೆ. ಆಕೆಯ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಆರೋಪಿಯನ್ನು ಹಿಡಿದಿದ್ದಾರೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಮಾನ್ಸಿಯ ಚಿಕ್ಕಮ್ಮ ಶೀತಲ್ ಗಾಯಕ್ವಾಡ್ ಹಾಗೂ ವಿಷ್ಣು ಮೋರೆ ಕೂಡ ಸ್ಥಳಕ್ಕೆ ಧಾವಿಸಿ ಯುವತಿಯ ನೆರವಿಗೆ ಬಂದಿದ್ದಾರೆ. ಈ ವೇಳೆ ಆರೋಪಿ ವಿಷ್ಣು ಮೋರೆ ಅವರ ಮೊಬೈಲ್ ಫೋನ್ ಅನ್ನು ನೆಲಕ್ಕೆ ಎಸೆದು ಹಾನಿಗೊಳಿಸಿದ್ದಾನೆ ಎಂದು ದೂರಲಾಗಿದೆ. ಯುವತಿಯ ಕಿರುಚಾಟ ಹಾಗೂ ಸ್ಥಳದಲ್ಲಿ ನಡೆಯುತ್ತಿದ್ದ ಗಲಾಟೆ ಕೇಳಿ ಸುತ್ತಮುತ್ತಲಿನ ಜನರು ಜಮಾಯಿಸಿದ್ದಾರೆ. ಬಳಿಕ ಆರೋಪಿಯನ್ನು ಹಿಡಿದ ಸ್ಥಳೀಯರು ಪೊಲೀಸರ ಆಗಮನಕ್ಕೂ ಮುನ್ನ ಥಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯ ವಿರುದ್ಧ ಪ್ರಕರಣ ದಾಖಲು
ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಸುದರ್ಶನ್ ಗಾಯಕ್ವಾಡ್ ಅವರು ಘಟನೆ ಕುರಿತು ಮಾಹಿತಿ ನೀಡಿದ್ದು, ಆರೋಪಿ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಂದು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 76 ಹಾಗೂ 324(4)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಬಟ್ಟೆ ಬಿಚ್ಚಿಸುವ ಉದ್ದೇಶದಿಂದ ಹಲ್ಲೆ ಅಥವಾ ಬಲಪ್ರಯೋಗ ಮಾಡುವುದಕ್ಕೆ ಸಂಬಂಧಿಸಿದ ಸೆಕ್ಷನ್ 76 ಹಾಗೂ ಹಾನಿ ಉಂಟುಮಾಡುವುದಕ್ಕೆ ಸಂಬಂಧಿಸಿದ ಸೆಕ್ಷನ್ 324(4)ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆರೋಪಿಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲೂ ಇದೇ ರೀತಿ ವರ್ತಿಸಿದ್ದ ಆರೋಪ
ಆರೋಪಿಯ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದು, ಜಿತು ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದಾಗಲೂ ಮಹಿಳೆಯರೊಂದಿಗೆ ಇದೇ ರೀತಿಯಲ್ಲಿ ವರ್ತಿಸಿದ್ದ ಎನ್ನಲಾಗಿದೆ.
ಆದರೆ, ಈ ಆರೋಪದ ಸತ್ಯಾಸತ್ಯತೆಯನ್ನು ದೃಢಪಡಿಸಲು ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಆರೋಪಿಯ ವಿರುದ್ಧದ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.