ಮುಂಬೈ: ಇನ್‌ಫ್ಲುಯೆನ್ಸರ್‌ಗಳ ವಿರುದ್ಧ ಕಿಡಿಕಾರಿರುವ ನಟಿ ಸ್ವರಾ ಭಾಸ್ಕರ್, ‘ನಿಲುವು ತೆಗೆದುಕೊಂಡು ನನ್ನ ವೃತ್ತಿಜೀವನವನ್ನೇ ಹಾಳು ಮಾಡಿಕೊಂಡೆ' ಎಂದು ಹೇಳಿದ್ದಾರೆ.
ವೀರೇಂದ್ರ ಸೆಹ್ವಾಗ್ ನಿರೂಪಣೆಯ ‘ರೈಸ್ ಆ್ಯಂಡ್ ಫಾಲ್ ಸೀಸನ್ 2’ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ನಟಿ ಸ್ವರಾ ಭಾಸ್ಕರ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ರಿಯಾಲಿಟಿ ಶೋಗಳಲ್ಲಿ ವೃತ್ತಿ ರೂಪಿಸಿಕೊಳ್ಳುವ ಆಸಕ್ತಿಯಿಲ್ಲ, ಹಣಕ್ಕಾಗಿ ಎಲ್ಲರನ್ನೂ ಹೊಗಳುವ ಬದಲು ಮಹತ್ವದ ವಿಚಾರಗಳ ಪರ ನಿಂತಿದ್ದಕ್ಕೆ ತಕ್ಕ ಬೆಲೆ ತೆತ್ತಿದ್ದೇನೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಸಂಚಿಕೆಯಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ರಿಯಾಲಿಟಿ ಶೋ ತಾರೆಯರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಗಿದ್ದೇನು?
ಇನ್‌ಫ್ಲುಯೆನ್ಸರ್ ಶ್ರೇಯಾ ಕಲ್ರಾ ಅವರು ಸ್ವರಾ ಹೆಚ್ಚು ರಾಜತಾಂತ್ರಿಕವಾಗಿ ವರ್ತಿಸುವುದನ್ನು ಬಿಟ್ಟು, ತಮ್ಮ ಆಟದ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದರು. ಆರಂಭದಲ್ಲಿ ಶ್ರೇಯಾ ಅವರ ಸಲಹೆಗೆ ಧನ್ಯವಾದ ತಿಳಿಸಿದ್ದ ಸ್ವರಾ, ಬಳಿಕ ರಿಯಾಲಿಟಿ ಶೋಗಳಲ್ಲಿ ಹೇಗೆ ಆಟವಾಡಬೇಕು ಎಂದು ತಮಗೆ ಪಾಠ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.
ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಡೆದುಕೊಳ್ಳುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ ಸ್ವರಾ, ರಿಯಾಲಿಟಿ ಶೋಗಳ ಮೂಲಕ ವೃತ್ತಿಜೀವನ ರೂಪಿಸಿಕೊಳ್ಳುವ ಆಸಕ್ತಿ ತನಗಿಲ್ಲ ಎಂದಿದ್ದಾರೆ.
“ಹಣ ಕೊಡುವ ಪ್ರತಿಯೊಬ್ಬರನ್ನೂ ಹೊಗಳುವ ಬದಲು, ಮಹತ್ವದ ವಿಚಾರಗಳ ಪರವಾಗಿ ನಿಲುವು ತೆಗೆದುಕೊಂಡಿದ್ದಕ್ಕೆ ನನ್ನ ವೃತ್ತಿಜೀವನವನ್ನೇ ಹಾಳು ಮಾಡಿಕೊಂಡಿದ್ದೇನೆ. ದಯವಿಟ್ಟು ಕಂಟೆಂಟ್ ಕ್ರಿಯೇಟರ್‌ಗಳು ಅಥವಾ ರಿಯಾಲಿಟಿ ಶೋ ತಾರೆಯರಿಂದ ನನಗೆ ಪಾಠ ಬೇಕಾಗಿಲ್ಲ” ಎಂದು ಸ್ವರಾ ಹೇಳಿದ್ದಾರೆ.
“ಶ್ರೇಯಾ, ಗೌರವಪೂರ್ವಕವಾಗಿ ಹೇಳುತ್ತಿದ್ದೇನೆ, ನಾನು ಹೇಗಿದ್ದೇನೋ ಹಾಗೆಯೇ ಇರುತ್ತೇನೆ. ನನ್ನ ಜಗತ್ತು ರಿಯಾಲಿಟಿ ಶೋಗಳ ಜಗತ್ತಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ವೃತ್ತಿಜೀವನ ಕಟ್ಟಿಕೊಳ್ಳುವ ಆಸಕ್ತಿ ನನಗಿಲ್ಲ” ಎಂದು ಹೇಳಿದ್ದಾರೆ. ಶ್ರೇಯಾ ಅವರ ಸಲಹೆಗೆ ಧನ್ಯವಾದ ತಿಳಿಸಿದ ಸ್ವರಾ, ಆ ಚರ್ಚೆಯನ್ನು ಅಲ್ಲಿಗೇ ಮುಗಿಸಿದ್ದಾರೆ.
ಸ್ವರಾ ಭಾಸ್ಕರ್ ವಿರುದ್ಧ ಸ್ಪರ್ಧಿಗಳ ಅಸಮಾಧಾನ
ಆದರೆ, ಶ್ರೇಯಾ ಅಲ್ಲಿಂದ ತೆರಳಿದ ಬಳಿಕ ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ರಿಯಾಲಿಟಿ ಶೋ ತಾರೆಯರು ತಮಗೆ ನೀಡುತ್ತಿರುವ ಉಪದೇಶಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಅಂದಹಾಗೆ ಸ್ವರಾ ಭಾಸ್ಕರ್ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಬಗ್ಗೆ ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
'ಪದ್ಮಾವತ್' ಚಿತ್ರದ ಜೌಹರ್ ದೃಶ್ಯದ ಬಗ್ಗೆ ಮತ್ತೆ ವಿವಾದ
ಇತ್ತೀಚೆಗೆ ‘ಪದ್ಮಾವತ್’ ಚಿತ್ರದ ಜೌಹರ್ ದೃಶ್ಯದ ಕುರಿತು ಸ್ವರಾ ನೀಡಿದ್ದ ಹೇಳಿಕೆಗಳು ತೀವ್ರ ಟೀಕೆಗೆ ಗುರಿಯಾಗಿದ್ದವು. ಈ ವಿವಾದದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದ ಅವರು, ಸುಮಾರು 9-10 ವರ್ಷಗಳ ಹಿಂದಿನ ವಿವಾದವನ್ನು ಮತ್ತೆ ಕೆದಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.