ಭೋಪಾಲ್: ಚಾಕೊಲೇಟ್ ವಿಚಾರವಾಗಿ ತಾಯಿ ಗದರಿಸಿದ್ದಕ್ಕೆ ಮನನೊಂದ 12 ವರ್ಷದ ಬಾಲಕಿಯೊಬ್ಬಳು ನಾಲ್ಕು ವರ್ಷದ ಪುಟ್ಟ ಬಾಲಕನನ್ನು ನೀರಿನ ಟ್ಯಾಂಕ್‌ಗೆ ತಳ್ಳಿ, ಅದರ ಮೇಲೆ ಕಲ್ಲಿನ ಹಲಗೆಯನ್ನು ಮುಚ್ಚಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ನಡೆದಿದೆ.
ಅಕ್ಟೋಬರ್ 26ರಂದು ಈ ಘಟನೆ ನಡೆದಿದ್ದು, ಬಾಲಕಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ ಎಂದು ಶುಕ್ರವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಾಲಕಿ ತನ್ನ ಮನೆಯ ಮೇಲ್ಛಾವಣಿಗೆ ನಾಲ್ಕು ವರ್ಷದ ಬಾಲಕನನ್ನು ಕರೆದೊಯ್ದು, ಅಲ್ಲಿದ್ದ ನೀರಿನ ಟ್ಯಾಂಕ್‌ಗೆ ತಳ್ಳಿದ್ದಾಳೆ.
ಬಳಿಕ ಟ್ಯಾಂಕ್ ಮೇಲೆ ಕಲ್ಲಿನ ಹಲಗೆಯನ್ನು ಮುಚ್ಚಿದ್ದಾಳೆ. ಬಾಲಕನ ಮೃತದೇಹ ಸುಮಾರು ಮೂರು ಗಂಟೆಗಳ ಕಾಲ ಟ್ಯಾಂಕ್‌ನಲ್ಲೇ ಇತ್ತು. ನಂತರ ಬಾಲಕಿಯ ತಂದೆ ಮೇಲ್ಛಾವಣಿಯ ಟ್ಯಾಂಕ್‌ನಲ್ಲಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.
ಆದರೆ, ಮಗಳೇ ಈ ಕೃತ್ಯ ಎಸಗಿದ್ದಾಳೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಮೃತ ಬಾಲಕನ ಕುಟುಂಬವು ಬಾಲಕಿಯ ಮನೆಯ ಪಕ್ಕದಲ್ಲಿದ್ದ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು.
ಈ ಮನೆ ಬಾಲಕಿಯ ಚಿಕ್ಕಪ್ಪನಿಗೆ ಸೇರಿದ್ದಾಗಿತ್ತು. ಬಾಲಕ ಕಾಣೆಯಾಗಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಕೂಡಲೇ ಹುಡುಕಾಟ ಆರಂಭಿಸಿದ ಪೊಲೀಸರು, ನೆರೆಹೊರೆಯವರಿಗೆ ಮಾಹಿತಿ ನೀಡಿ ಮನೆಗಳ ಮೇಲ್ಛಾವಣಿ ಹಾಗೂ ಸುತ್ತಮುತ್ತಲಿನ ನೀರಿನ ತೊಟ್ಟಿಗಳಲ್ಲಿ ಪರಿಶೀಲಿಸುವಂತೆ ಸೂಚಿಸಿದ್ದರು.
ಹುಡುಕಾಟದ ವೇಳೆ ಪೊಲೀಸರು ನೆರೆಹೊರೆಯ ಮಕ್ಕಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಾಲಕಿಯ ತಂದೆ ತಮ್ಮ ಮನೆಯ ಮೇಲ್ಛಾವಣಿಯ ನೀರಿನ ಟ್ಯಾಂಕ್‌ನಲ್ಲಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.
ಈ ಸಂದರ್ಭದಲ್ಲಿ 12 ವರ್ಷದ ಬಾಲಕಿ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಚಾಕೊಲೇಟ್ ವಿಚಾರಕ್ಕೆ ಗಲಾಟೆ
ಪೊಲೀಸರ ತನಿಖೆಯ ಪ್ರಕಾರ, ಬಾಲಕಿ ಬಾಲಕನಿಂದ ಚಾಕೊಲೇಟ್ ತೆಗೆದುಕೊಂಡಿದ್ದಳು. ಇದನ್ನು ಕಂಡ ಬಾಲಕನ ತಾಯಿ ಬಾಲಕಿಯನ್ನು ಗದರಿಸಿದ್ದರು. ಇದರಿಂದ ಮನನೊಂದ ಬಾಲಕಿ ಹಲವು ದಿನಗಳ ಕಾಲ ಅಸಮಾಧಾನಗೊಂಡಿದ್ದಳು. ಇದೇ ದ್ವೇಷದಿಂದ ಬಾಲಕನನ್ನು ನೀರಿನ ಟ್ಯಾಂಕ್‌ಗೆ ತಳ್ಳಿ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಸಂದರ್ಭಗಳಿಗೆ ಸಂಬಂಧಿಸಿದ ಅಂಶಗಳು ದೃಢಪಟ್ಟ ಬಳಿಕ ಅಕ್ಟೋಬರ್ 28ರಂದು ಬಾಲ ನ್ಯಾಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಬಾಲಕಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಸರ್ಕಾರಿ ಬಾಲಕಿಯರ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ. ಬಾಲ ನ್ಯಾಯ ಕಾಯ್ದೆಯ ನಿಯಮಗಳ ಅನ್ವಯ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ.