ನವದೆಹಲಿ: ಹೆಣ್ಣುಮಕ್ಕಳ ಶಿಕ್ಷಣದ ಮೇಲಿನ ತಾಲೀಬಾನ್ ನಿಷೇಧವನ್ನು ಸಮರ್ಥಿಸಿಕೊಂಡಿರುವ ವಿವಾದಾತ್ಮಕ ಇಸ್ಲಾಮಿಕ್ ಪ್ರಚಾರಕ ಝಾಕೀರ್ ನಾಯ್ಕ್ ಅವರ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಹೆಣ್ಣುಮಕ್ಕಳ ಪ್ರೌಢ ಮತ್ತು ಉನ್ನತ ಶಿಕ್ಷಣವನ್ನು ತಾಲಿಬಾನ್ ನಿಷೇಧಿಸಿಲ್ಲ, ಬದಲಿಗೆ ಭದ್ರತಾ ಕಾರಣಗಳು ಹಾಗೂ ಮಹಿಳಾ ಶಿಕ್ಷಕರ ಕೊರತೆಯಿಂದಾಗಿ ಮುಂದೂಡಿದೆ ಎಂದು ಜಾಕಿರ್ ನಾಯಕ್ ಹೇಳಿದ್ದು, ಈ ಕುರಿತ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ಜಾಕಿರ್ ನಾಯಕ್ ಅವರ ಹೇಳಿಕೆಗಳಿಗೆ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಹಾಗೂ ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾಯಕ್ ಅವರ ವಾದಗಳನ್ನು ಪ್ರಶ್ನಿಸಿರುವ ಅವರು, ತಾಲಿಬಾನ್‌ನ ಶಿಕ್ಷಣ ನಿರ್ಬಂಧಗಳನ್ನು ಸಮರ್ಥಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ವಿಡಿಯೊದಲ್ಲಿ ಮಾತನಾಡಿರುವ ನಾಯಕ್, ಮಾಧ್ಯಮಗಳಲ್ಲಿ ಬರುವ ಎಲ್ಲ ಸುದ್ದಿಗಳೂ ಸತ್ಯವಾಗಿರುವುದಿಲ್ಲ. ನಾನು ತಾಲಿಬಾನ್ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದೇನೆ. ಸರಿಯಾದ ಶಿಕ್ಷಕರು ಸಿಗುವವರೆಗೆ ಶಿಕ್ಷಣವನ್ನು ಮುಂದೂಡಿದರೆ ಅದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವಿಷಯವನ್ನು ತಾಲಿಬಾನ್ ಪ್ರತಿನಿಧಿಗಳೊಂದಿಗೆ ವೈಯಕ್ತಿಕವಾಗಿ ಚರ್ಚಿಸಿರುವುದಾಗಿ ಹೇಳಿದ್ದಾರೆ. “ನಾನು ಅವರೊಂದಿಗೆ ಖುದ್ದಾಗಿ ಮಾತನಾಡಿದ್ದೇನೆ. ಮಾಧ್ಯಮಗಳಲ್ಲಿ ಬರುವ ಎಲ್ಲವೂ ಸತ್ಯವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತಾಲಿಬಾನ್ ಆಡಳಿತವು ಹೆಣ್ಣುಮಕ್ಕಳಿಗೆ ಆರನೇ ತರಗತಿಯವರೆಗೆ ಶಿಕ್ಷಣ ಪಡೆಯಲು ಅವಕಾಶ ನೀಡಿದೆ. ಆದರೆ, ಸುರಕ್ಷಿತ ವಾತಾವರಣ ಇಲ್ಲದ ಕಾರಣ ಮುಂದಿನ ಹಂತದ ಶಿಕ್ಷಣವನ್ನು ತಡೆಹಿಡಿದಿದೆ. ಉನ್ನತ ಶಿಕ್ಷಣದ ವಿಚಾರದಲ್ಲಿ ಪರಿಸರ ಸುರಕ್ಷಿತವಾಗಿಲ್ಲ. ಭದ್ರತೆ ಖಚಿತವಾಗುವವರೆಗೆ ಅವರು ಕಾಯುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಪ್ರೌಢಶಿಕ್ಷಣ ನೀಡಲು ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಮಹಿಳಾ ಶಿಕ್ಷಕರಿಲ್ಲ ಎಂದೂ ಅವರು ವಾದಿಸಿದ್ದಾರೆ.
ಇದೇ ವೇಳೆ, ಮಹಿಳೆಯರು ಷರಿಯಾ, ಅರೇಬಿಕ್ ಮತ್ತು ಕುರಾನ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆಯಬಹುದು ಎಂದು ಹೇಳಿದ್ದಾರೆ. ಅವರಿಗೆ ಉನ್ನತ ಶಿಕ್ಷಣವೇ ಇಲ್ಲ ಎಂದು ಹೇಳುವುದು ತಪ್ಪು. ಅದು ತಪ್ಪು ಮಾಹಿತಿ” ಎಂದು ಪ್ರತಿಪಾದಿಸಿದ್ದಾರೆ.
ನಾಯಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಲಾಲಾ ಯೂಸಫ್‌ಜಾಯ್ ಅವರ ತಂದೆ ಹಾಗೂ ಬ್ರಿಟನ್ ಮೂಲದ ಪಾಕಿಸ್ತಾನಿ ಸಾಮಾಜಿಕ ಕಾರ್ಯಕರ್ತ ಜಿಯಾವುದ್ದೀನ್ ಯೂಸಫ್‌ಜಾಯ್, ಈ ಸಮರ್ಥನೆ “ತೀವ್ರ ಕಳವಳಕಾರಿ ಮತ್ತು ನಿರಾಶಾದಾಯಕ” ಎಂದು ಹೇಳಿದ್ದಾರೆ.
ಭಾರತೀಯ ಇಸ್ಲಾಮಿಕ್ ವಿದ್ವಾಂಸ ಎ. ಫೈಝುರ್ ರಹಮಾನ್ ಅವರು, ನಾಯಕ್‌ಗೆ ಆಗ್ನೇಯ ಏಷ್ಯಾದ ಮಲೇಷ್ಯಾದಲ್ಲಿ ನೆಲೆಸಲು ಅವಕಾಶ ನೀಡಿರುವುದಕ್ಕೆ ಆ ದೇಶದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಪ್ರಶ್ನಿಸಿದ್ದಾರೆ.
2016ರಲ್ಲಿ ಭಾರತ ತೊರೆದಿದ್ದ ಜಾಕಿರ್ ನಾಯಕ್, ಢಾಕಾದ ಕೆಫೆ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನೊಬ್ಬನಿಗೆ ತಮ್ಮ ಭಾಷಣಗಳು ಪ್ರೇರಣೆ ನೀಡಿದ್ದವು ಎಂಬ ಆರೋಪ ಎದುರಿಸಿದ್ದರು.
ಬಳಿಕ ಧಾರ್ಮಿಕ ದ್ವೇಷ ಹರಡುವುದು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು ಹಾಗೂ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದವು. ಈ ಆರೋಪಗಳನ್ನು ಜಾಕೀರ್ ನಿರಾಕರಿಸಿದ್ದಾರೆ.
2017ರಲ್ಲಿ ಮಲೇಷ್ಯಾದಲ್ಲಿ ಆಶ್ರಯ ಪಡೆದ ಅವರು, ಅಲ್ಲಿನ ಶಾಶ್ವತ ನಿವಾಸದ ಸ್ಥಾನಮಾನ ಪಡೆದಿದ್ದಾರೆ. ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಯತ್ನಗಳು ಈವರೆಗೆ ಯಶಸ್ವಿಯಾಗಿಲ್ಲ.
ಜಾಕಿರ್ ನಾಯಕ್ ಅವರ ಹೇಳಿಕೆಗಳು ವಿಶ್ವಸಂಸ್ಥೆಯ ಸಂಸ್ಥೆಗಳು ಬಿಡುಗಡೆ ಮಾಡಿರುವ ವರದಿಗಳಿಗೆ ವಿರುದ್ಧವಾಗಿವೆ. 2021ರ ಸೆಪ್ಟೆಂಬರ್‌ನಿಂದ ಆರನೇ ತರಗತಿಯ ನಂತರ ಹೆಣ್ಣುಮಕ್ಕಳಿಗೆ ಔಪಚಾರಿಕ ಶಿಕ್ಷಣವನ್ನು ನಿರ್ಬಂಧಿಸಲಾಗಿದೆ. 2022ರ ಡಿಸೆಂಬರ್‌ನಿಂದ ಮಹಿಳೆಯರಿಗೆ ವಿಶ್ವವಿದ್ಯಾಲಯಗಳ ಪ್ರವೇಶವನ್ನೂ ತಡೆಯಲಾಗಿದೆ. ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಪ್ರೌಢ ಹಾಗೂ ಉನ್ನತ ಶಿಕ್ಷಣವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಿರುವ ವಿಶ್ವದ ಏಕೈಕ ದೇಶ ಅಫ್ಘಾನಿಸ್ತಾನ ಎಂದು ಯುನಿಸೆಫ್ ತಿಳಿಸಿದೆ.
2021ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ತಾಲಿಬಾನ್ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ ಆಧಾರಿತ ಪ್ರತ್ಯೇಕತೆ ಜಾರಿಗೆ ತಂದಿತು. ಹೆಣ್ಣುಮಕ್ಕಳಿಗೆ ಮಹಿಳಾ ಶಿಕ್ಷಕರೇ ಪಾಠ ಮಾಡಬೇಕೆಂಬ ನಿಯಮ ವಿಧಿಸಿತು. 2022ರ ಮಾರ್ಚ್‌ನಲ್ಲಿ ಹೆಣ್ಣುಮಕ್ಕಳ ಪ್ರೌಢಶಾಲೆಗಳನ್ನು ಪುನರಾರಂಭಿಸುವ ನಿರ್ಧಾರದಿಂದ ಹಿಂದೆ ಸರಿಯಿತು. 2022ರ ಡಿಸೆಂಬರ್‌ನಲ್ಲಿ ಮಹಿಳೆಯರಿಗೆ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನಿರಾಕರಿಸಲಾಯಿತು. 2024ರ ಡಿಸೆಂಬರ್‌ನಲ್ಲಿ ನರ್ಸಿಂಗ್ ಮತ್ತು ಮಿಡ್‌ವೈಫರಿ ಸೇರಿದಂತೆ ವೈದ್ಯಕೀಯ ತರಬೇತಿ ಸಂಸ್ಥೆಗಳಿಗೆ ಮಹಿಳೆಯರು ಪ್ರವೇಶ ಪಡೆಯುವುದನ್ನೂ ನಿಷೇಧಿಸಲಾಯಿತು ಎಂದು ಅಫ್ಘಾನಿಸ್ತಾನ ಪುನರ್‌ನಿರ್ಮಾಣಕ್ಕಾಗಿ ಅಮೆರಿಕದ ವಿಶೇಷ ಮಹಾ ನಿರೀಕ್ಷಕರ ಕಚೇರಿ (SIGAR) ಹಾಗೂ ಅಫ್ಘಾನಿಸ್ತಾನದ ವಿಶ್ವಸಂಸ್ಥೆ ಸಹಾಯ ಮಿಷನ್ ವರದಿಗಳು ತಿಳಿಸಿವೆ.
ಅಫ್ಘಾನಿಸ್ತಾನದಿಂದಲೂ ತೀವ್ರ ಟೀಕೆ
ಈ ನಡುವೆ ಜಾಕಿರ್ ನಾಯಕ್ ಅವರ ಹೇಳಿಕೆಗಳಿಗೆ ಅಫ್ಘಾನಿಸ್ತಾನದ ಹಲವು ಗಣ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಲ್ಜಿಯಂನಲ್ಲಿ ನೆಲೆಸಿರುವ ಅಫ್ಘಾನಿಸ್ತಾನದ ಮಾಜಿ ಭದ್ರತಾ ಪಡೆ ಸಿಬ್ಬಂದಿ ಅಜೀಂ ಶಿನ್ವಾರಿ, ಮಹಿಳಾ ಶಿಕ್ಷಕರ ಕೊರತೆಯ ಬಗ್ಗೆ ನಾಯಕ್ ನೀಡಿರುವ ಸಮರ್ಥನೆಯನ್ನು ಪ್ರಶ್ನಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶವನ್ನೇ ನೀಡದಿದ್ದರೆ, ಅಫ್ಘಾನಿಸ್ತಾನಕ್ಕೆ ಅಗತ್ಯವಿರುವ ಅರ್ಹ ಮಹಿಳಾ ಶಿಕ್ಷಕರು ಹೇಗೆ ಸಿದ್ಧರಾಗುತ್ತಾರೆ?” ಎಂದು ಅವರು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಇಸ್ಲಾಮಿಕ್ ಅಧ್ಯಯನದಲ್ಲಿ ಅಫ್ಘಾನ್ ಮಹಿಳೆಯರು ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಪಡೆಯುತ್ತಿದ್ದಾರೆ ಎಂಬ ನಾಯಕ್ ಅವರ ಹೇಳಿಕೆಗೆ ಸಾಕ್ಷ್ಯವೇನು ಎಂದೂ ಕೇಳಿದ್ದಾರೆ. ಈ ಹಿಂದೆ ಸೌದಿ ಅರೇಬಿಯಾದಲ್ಲಿ ನಾಯಕ್ ಮತ್ತು ತಾಲಿಬಾನ್‌ನ ಗುಪ್ತಚರ ಮಹಾನಿರ್ದೇಶನಾಲಯದ ಪ್ರತಿನಿಧಿಗಳ ನಡುವೆ ನಡೆದಿತ್ತು ಎನ್ನಲಾದ ಸಭೆಯ ಬಗ್ಗೆ ತಾವು ವರದಿ ಮಾಡಿದ್ದನ್ನು ಅವರು ಸ್ಮರಿಸಿದ್ದಾರೆ.
ಅಫ್ಘಾನಿಸ್ತಾನದ ಗಡಿಪಾರು ಸಂಸತ್ತಿನ ಸದಸ್ಯೆ ಮರಿಯಮ್ ಸೊಲೈಮನ್‌ಖಿಲ್ ಕೂಡ ನಾಯಕ್ ಅವರ ಹೇಳಿಕೆಯನ್ನು ವ್ಯಂಗ್ಯವಾಡಿದ್ದಾರೆ.
ಜಾಕಿರ್ ನಾಯಕ್ ಪ್ರಕಾರ, ಅಫ್ಘಾನ್ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿಲ್ಲ. ಅವರು ಮಹಿಳಾ ಶಿಕ್ಷಕರಿಗಾಗಿ ಕಾಯುತ್ತಿದ್ದಾರೆ. ಆದರೆ, ಮಹಿಳೆಯರು ಕೆಲಸ ಮಾಡುವುದನ್ನೇ ತಾಲಿಬಾನ್ ನಿಷೇಧಿಸಿರುವಾಗ ಆ ಶಿಕ್ಷಕರು ಎಲ್ಲಿಂದ ಬರಬೇಕು? ಅದ್ಭುತ ತರ್ಕ, ಡಾಕ್ಟರ್! ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಅಫ್ಘಾನ್ ಇಂಟರ್‌ನ್ಯಾಷನಲ್ ಪಾಷ್ಟೊದ ಸಂಪಾದಕ ಮಹಬೂಬ್ ಶಾ ಮಹಬೂಬ್ ಕೂಡ ಶಿಕ್ಷಣ ನಿರ್ಬಂಧವನ್ನು ನಿಷೇಧ ಎನ್ನುವ ಬದಲು ಮುಂದೂಡಿಕೆ ಎಂದು ಬಣ್ಣಿಸಿರುವ ನಾಯಕ್ ಅವರ ವಾದವನ್ನು ಪ್ರಶ್ನಿಸಿದ್ದಾರೆ.
ಶಾಲೆಗಳೇ ಮುಚ್ಚಿರುವಾಗ ಆ ಶಿಕ್ಷಕರು ಎಲ್ಲಿಂದ ಬರಬೇಕು? ಆಕಾಶದಿಂದ ಇಳಿದು ಬರಬೇಕೇ? ಅಫ್ಘಾನ್ ಹೆಣ್ಣುಮಕ್ಕಳಿಗೆ ಬೇಕಿರುವುದು ಶಿಕ್ಷಣವೇ ಹೊರತು ನೆಪಗಳಲ್ಲ ಎಂದು ಅವರು ಟೀಕಿಸಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಅಫ್ಘಾನ್ ಮೂಲದ ಪತ್ರಕರ್ತೆ ಲೀನಾ ರೋಜ್ಬಿಹ್ ಕೂಡ ನಾಯಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಕಿರ್, ಹೆಣ್ಣುಮಕ್ಕಳ ಶಿಕ್ಷಣದ ಮೇಲಿನ ತಾಲಿಬಾನ್ ನಿಷೇಧವನ್ನು ನೀವು ನಿಜವಾಗಿಯೂ ಬೆಂಬಲಿಸುವುದಾದರೆ, ತಾಲಿಬಾನ್ ಆಡಳಿತದ ಅಡಿಯಲ್ಲೇ ಬದುಕಲು ಅಫ್ಘಾನಿಸ್ತಾನಕ್ಕೆ ತೆರಳಿ. ಇಲ್ಲಿಂದಲೇ ತಾಲಿಬಾನ್ ಅನ್ನು ಸಮರ್ಥಿಸಬೇಡಿ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.