ನವದೆಹಲಿ: ಶಿಕ್ಷಣವು ಕೇವಲ ಸವಲತ್ತಲ್ಲ, ಬದಲಾಗಿ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕಾಗಿದೆ. ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ವ್ಯವಸ್ಥೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಬಾರದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ಗೆ ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ನಿಯೋಗವೊಂದನ್ನು ಅವರು ಭೇಟಿಯಾಗಿದ್ದಾರೆ.
'ಆಶ್ರಮ ಶಾಲೆ'ಗಳ ಸ್ಥಿತಿಗತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಈ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಶಿಕ್ಷಣವು ಸವಲತ್ತಲ್ಲ, ಇದು ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಎಂದು ಹೇಳಿದ್ದಾರೆ.
ನಾಸಿಕ್ ಭೇಟಿಯ ವೇಳೆ ಬುಡಕಟ್ಟು ವಿದ್ಯಾರ್ಥಿಗಳ ನಿಯೋಗವನ್ನು ಭೇಟಿ ಮಾಡಿದ್ದು, ಅವರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ತಾಳ್ಮೆಯಿಂದ ಆಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಗೂ ತಮ್ಮ ಅಧ್ಯಯನಕ್ಕೆ ಸುರಕ್ಷಿತ ಮತ್ತು ಪೂರಕವಾದ ವಾತಾವರಣವನ್ನು ಹೊಂದುವ ಹಕ್ಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ವ್ಯವಸ್ಥೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಬಾರದು, ಅವರಿಗೆ ವ್ಯವಸ್ಥೆಯ ಬೆಂಬಲ ಮತ್ತು ಸಾಧ್ಯವಿರುವ ಎಲ್ಲ ರೀತಿಯ ನೆರವಿನ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.