ನವದೆಹಲಿ: ಹಲ್ದ್ವಾನಿಯ ರಾಮ್ ಲೀಲಾ ಮೈದಾನದಲ್ಲಿ ತಾವು ಉದ್ದೇಶಿಸಿ ಮಾತನಾಡಿದ ಸಾರ್ವಜನಿಕ ಸಭೆಯ ನಂತರ ನಡೆದಿದೆ ಎನ್ನಲಾದ 'ಶುದ್ಧೀಕರಣ' ಪ್ರಕ್ರಿಯೆಯ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ರಾಜ್ಯಸಭೆಯ ಸಭಾ ನಾಯಕ ಜೆಪಿ ನಡ್ಡಾ ಅವರನ್ನು ಒತ್ತಾಯಿಸಿದರು.
ನಡ್ಡಾ ಅವರಿಗೆ ಬರೆದ ಪತ್ರದಲ್ಲಿ, ರಾಜ್ಯಸಭೆಯ ಸಭಾ ನಾಯಕ ನೀಡಿದ್ದ ಭರವಸೆಯನ್ನು ನೆನಪಿಸಿದರು ಹಾಗೂ ಕ್ರಮ ಕೈಗೊಳ್ಳುವಂತೆ ಉತ್ತರಾಖಂಡ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
ಈ ಘಟನೆಗೆ ಕಾರಣರೆಂದು ಆರೋಪಿಸಲಾದ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ 24 ದಿನಗಳು ಕಳೆದರೂ ಯಾವುದೇ ಎಫ್‌ಐಆರ್ (FIR) ದಾಖಲಾಗಿಲ್ಲ. ಈ ವಿಷಯವು ನನ್ನ ವೈಯಕ್ತಿಕ ವಿಚಾರವನ್ನಾಗಲಿ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷನಾಗಿರುವ ನನ್ನ ಹುದ್ದೆಯನ್ನಾಗಲಿ ಮೀರಿದಂತದ್ದು; ಇದು ಪ್ರತಿದಿನವೂ ಈ ಕ್ರೂರ ವಾಸ್ತವವನ್ನು ಎದುರಿಸುತ್ತಿರುವ ಕೋಟ್ಯಂತರ ಜನರ ಭಾವನೆಗಳೊಂದಿಗೆ ಬೆಸೆದುಕೊಂಡಿದೆ. ಇಂತಹ ತಪ್ಪು ಮಾಡುವವರಿಗೆ ತಕ್ಕ ಪಾಠ ಕಲಿಸುವುದು ಅಗತ್ಯ' ಎಂದು ಖರ್ಗೆ ಪತ್ರದಲ್ಲಿ ಬರೆದಿದ್ದಾರೆ.
ಹಲ್ದ್ವಾನಿಯಲ್ಲಿ ನಡೆದ ಸಾರ್ವಜನಿಕ ಸಭೆ ನಂತರ ರಾಮ್ ಲೀಲಾ ಮೈದಾನದಲ್ಲಿ ನಡೆದಿದೆ ಎನ್ನಲಾದ 'ಶುದ್ಧೀಕರಣ ವಿಧಿ'ಯಲ್ಲಿ ಭಾಗಿಯಾದವರ ವಿರುದ್ಧ ಎಫ್‌ಐಆರ್ ದಾಖಲಿಸುವುದನ್ನು ಖಚಿತಪಡಿಸುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನಿರ್ದೇಶನ ನೀಡಬೇಕೆಂದು ಖರ್ಗೆ ನಡ್ಡಾ ಅವರನ್ನು ಒತ್ತಾಯಿಸಿದರು.
2027ರ ಉತ್ತರಾಖಂಡ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ಆಗಸ್ಟ್ 8ರಂದು ಹಲ್ದ್ವಾನಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯ ನಂತರ ಈ ವಿವಾದ ಭುಗಿಲೆದ್ದಿತು. ನಂತರ ಬಲಪಂಥೀಯ ಗುಂಪೊಂದರ ಸದಸ್ಯರು ಅದೇ ಸ್ಥಳದಲ್ಲಿ 'ಶುದ್ಧೀಕರಣ' ವಿಧಿಯನ್ನು ನೆರವೇರಿಸಿದರು; ಇದು ಕಾಂಗ್ರೆಸ್ ನಾಯಕರ ಟೀಕೆಗೆ ಕಾರಣವಾಯಿತು.
ಈ ವಿಧಿಯು ದಲಿತ ನಾಯಕರಾಗಿರುವ ತಮ್ಮ ಗುರುತಿಗೆ ಸಂಬಂಧಿಸಿದೆ ಎಂದು ಆರೋಪಿಸಿದ ಖರ್ಗೆ, ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು ಹಾಗೂ ಪ್ರಜಾಪ್ರಭುತ್ವದಲ್ಲಿ ಇಂತಹ ಆಚರಣೆಗಳು ಸ್ವೀಕಾರಾರ್ಹವೇ ಎಂದು ಪ್ರಶ್ನಿಸಿದರು.