ಕರೀಂನಗರ: ತೆಲಂಗಾಣದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದೆ.
ಹೌದು.. ತೆಲಂಗಾಣದ ಕರೀಂನಗರದಲ್ಲಿ ಬುಧವಾರ ಭಾರೀ ರಸ್ತೆ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TGSRTC) ಬಸ್‌ವೊಂದು ನಿಯಂತ್ರಣ ತಪ್ಪಿ ಕೃಷಿ ಬಾವಿಯತ್ತ ನುಗ್ಗಿದ ಘಟನೆ ಜಿಲ್ಲೆಯ ಚಿಗುರುಮಾಮಿಡಿ ಮಂಡಲದ ಸುಂದರಗಿರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಬಸ್ ಕರೀಂನಗರದಿಂದ ಹುಸ್ನಾಬಾದ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಪಘಾತದ ವೇಳೆ ಬಸ್‌ನ ಮುಂಭಾಗದ ಒಂದು ಚಕ್ರ ಬಾವಿಯೊಳಗೆ ನುಗ್ಗಿದ್ದು, ಬಸ್ ಬಾವಿಗೆ ಉರುಳುವ ಹಂತಕ್ಕೆ ತಲುಪಿತ್ತು. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಬಸ್ ಬಾವಿಯೊಳಗೆ ಬೀಳುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಭಯಭೀತರಾಗಿ ಕಿರುಚಾಡಿ ನೆರವಿಗಾಗಿ ಕೂಗಿದ್ದಾರೆ.
ಅದೃಷ್ಟವಶಾತ್ ಬಸ್ ಬಾವಿ ತಡೆಗೋಡೆಗೆ ಡಿಕ್ಕಿಯಾಗಿ ಅಲ್ಲಿಯೇ ನಿಂತಿದೆ. ಬಸ್ ಸಂಪೂರ್ಣವಾಗಿ ಬಾವಿಗೆ ಉರುಳದೆ ನಿಂತಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.