ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಡಿಯಲ್ಲಿ ಸಿದ್ಧಪಡಿಸಲಾದ ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ತೆಗೆದುಹಾಕಲಾಗಿದ್ದು, ಅವರ ದಾಖಲೆಯಲ್ಲಿ 'ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ' ಎಂದು ಗುರುತಿಸಲಾಗಿದೆ. 2022ರಲ್ಲಿ ಪಂಜಾಬ್‌ನಿಂದ ಎಎಪಿ (AAP) ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿರುವ ಚಡ್ಡಾ, ಎಎಪಿ ಪಕ್ಷವು 'ಕೋಪದಿಂದ ಕುದಿಯುತ್ತಿರುವುದರಿಂದ' ಈ ಕ್ರಮವನ್ನು 'ರಾಜಕೀಯ ದ್ವೇಷದ' ಕೃತ್ಯ ಎಂದು ಆರೋಪಿಸಿದ್ದಾರೆ.
ಆಗಸ್ಟ್ 13 ರಂದು ಪ್ರಕಟವಾದ ASDD (ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು ಮತ್ತು ನಕಲಿ ಮತದಾರರು) ಪಟ್ಟಿಯಲ್ಲಿ ಚಡ್ಡಾ ಅವರ ಹೆಸರು ಕಂಡುಬಂದಿದ್ದು, ಅವರ ಹೆಸರಿನ ಮುಂದೆ 'ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ' ಎಂಬ ಕಾರಣವನ್ನು ನಮೂದಿಸಲಾಗಿದೆ. ಕರಡು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾದ 20.66 ಲಕ್ಷ ಮತದಾರರಲ್ಲಿ (ಇದು ಪಂಜಾಬ್‌ನ SIR-ಪೂರ್ವ ಮತದಾರರ ಪೈಕಿ ಸುಮಾರು ಶೇ 9.7 ರಷ್ಟಿದೆ) ಇವರೂ ಒಬ್ಬರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಚಡ್ಡಾ, ತಮ್ಮ ಮತದಾರರ ಗುರುತಿನ ಚೀಟಿಯು ಮೊಹಾಲಿಯಲ್ಲಿ ನೋಂದಾಯಿತವಾಗಿದೆ. ತಮ್ಮನ್ನು ಏಕೆ 'ಸ್ಥಳಾಂತರಗೊಂಡವರು' ಎಂದು ವರ್ಗೀಕರಿಸಲಾಗಿದೆ ಎಂದು ಪ್ರಶ್ನಿಸಿದರು. ಮತದಾರರ ಪಟ್ಟಿಗಳು ಇನ್ನೂ ಕರಡು ಹಂತದಲ್ಲಿವೆ ಮತ್ತು ಎಸ್‌ಐಆರ್ (SIR) ಮಾರ್ಗಸೂಚಿಗಳ ಅಡಿಯಲ್ಲಿ ಲಭ್ಯವಿರುವ ಪರಿಹಾರೋಪಾಯಗಳನ್ನು ತಾವು ಈಗಾಗಲೇ ಬಳಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
'ಇದು ಕೇವಲ ಕಚೇರಿ ಕೆಲಸದ ಲೋಪದಂತೆ ತೋರುತ್ತಿಲ್ಲ. ಇದು ರಾಜಕೀಯ ದ್ವೇಷದ ಸ್ಪಷ್ಟ ಪ್ರಕರಣವಾಗಿದೆ. ಪಕ್ಷವನ್ನು ತೊರೆದವರ ವಿರುದ್ಧ ಆಮ್ ಆದ್ಮಿ ಪಕ್ಷದ (AAP) ಸರ್ಕಾರವು ರಾಜ್ಯದ ಆಡಳಿತ ಯಂತ್ರವನ್ನು ಬಳಸುತ್ತಿದೆ. ಭ್ರಷ್ಟ ಆಮ್ ಆದ್ಮಿ ಪಕ್ಷವನ್ನು ತೊರೆದಾಗಿನಿಂದಲೂ ಅದರ ನಾಯಕತ್ವವು ತೀವ್ರ ಕೋಪಗೊಂಡಿದೆ' ಎಂದು ಚಡ್ಡಾ ಸಾಮಾಜಿಕ ಜಾಲತಾಣದಲ್ಲಿನ ವಿವರವಾದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
37 ವರ್ಷದ ಚಡ್ಡಾ ಏಪ್ರಿಲ್‌ನಲ್ಲಿ ಇತರ ಆರು ರಾಜ್ಯಸಭಾ ಸದಸ್ಯರೊಂದಿಗೆ ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ತಮ್ಮ ನಿರ್ಧಾರವನ್ನು ವಿವರಿಸಿದ ಚಡ್ಡಾ, ಎಎಪಿ 'ತನ್ನ ತತ್ವಗಳು, ಮೌಲ್ಯಗಳು ಮತ್ತು ನೈತಿಕತೆಯಿಂದ ಸಂಪೂರ್ಣವಾಗಿ ವಿಮುಖವಾಗಿದೆ' ಎಂದು ಹೇಳಿದರು; ಇದಕ್ಕೆ ಪ್ರತಿಯಾಗಿ ಎಎಪಿ, ಅವರು 'ಅವಕಾಶವಾದಿ' ಎಂದು ಆರೋಪಿಸುವುದಲ್ಲದೆ, ಪ್ರಮುಖ ರಾಜಕೀಯ ಹೋರಾಟಗಳು ಮತ್ತು ಪ್ರತಿಭಟನೆಗಳಲ್ಲಿ ಅವರ ಗೈರುಹಾಜರಿಯನ್ನು ಪ್ರಶ್ನಿಸಿತು.
'ಭ್ರಷ್ಟ ಆಮ್ ಆದ್ಮಿ ಪಕ್ಷವನ್ನು ತೊರೆದಾಗಿನಿಂದಲೂ ಅದರ ನಾಯಕತ್ವವು ತೀವ್ರ ಆಕ್ರೋಶಗೊಂಡಿದೆ. ಮೌನವಾಗಿರಲು ನಿರಾಕರಿಸಿದ ನಮ್ಮ ವಿರುದ್ಧ ಪಂಜಾಬ್ ಪೊಲೀಸರು ಮತ್ತು ಪಂಜಾಬ್ ಸರ್ಕಾರದ ಆಡಳಿತ ಯಂತ್ರವನ್ನು ಅದು ಛೂ ಬಿಟ್ಟಿದೆ. ಎಎಪಿ ತೊರೆದು ಬಿಜೆಪಿಗೆ ಸೇರಿದ ಇತರ ಸಂಸದರನ್ನೂ ಪಂಜಾಬ್ ಸರ್ಕಾರ ಗುರಿಯಾಗಿಸಿದೆ. ಈ ತಪ್ಪಾದ ವರ್ಗೀಕರಣವು ಆ ರಾಜಕೀಯ ದ್ವೇಷದ ಕ್ರಮಗಳ ಸರಣಿಯಲ್ಲಿನ ಇತ್ತೀಚಿನ ನಡೆಯಾಗಿದೆ' ಎಂದು ಹೇಳಿದರು.
ಸಂಸದರು ಮತ್ತು ಶಾಸಕರಂತಹ ಜನಪ್ರತಿನಿಧಿಗಳಿಗಾಗಿ 'ಸಂರಕ್ಷಿತ ಪಟ್ಟಿ'ಯನ್ನು (protected list) ರೂಪಿಸುವ SIR ಮಾರ್ಗಸೂಚಿಗಳ ನಿಬಂಧನೆಯನ್ನು ತಮ್ಮ ವಿಷಯದಲ್ಲಿ "ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ". ಪಂಜಾಬ್‌ನ ಕರಡು ಮತದಾರರ ಪಟ್ಟಿಗಳು ಆಡಳಿತಾರೂಢ ಎಎಪಿ ಪಕ್ಷದ 'ಖಾಸಗಿ ಆಸ್ತಿ'ಯಲ್ಲ ಎಂದು ಚಡ್ಡಾ ಹೇಳಿದರು.
SIR ಸಂಬಂಧಿತ ಕ್ಲೈಮ್ಸ್ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಪ್ರಕ್ರಿಯೆಯು ಸೆಪ್ಟೆಂಬರ್ 12 ರವರೆಗೆ ಮುಂದುವರಿಯಲಿದ್ದು, ಅಂತಿಮ ಮತದಾರರ ಪಟ್ಟಿಗಳನ್ನು 2026ರ ಅಕ್ಟೋಬರ್‌ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.
ಆದಾಗ್ಯೂ, ಪಂಜಾಬ್‌ನ ಮತದಾರರ ಪಟ್ಟಿಯಿಂದ ಚಡ್ಡಾ ಅವರ ಹೆಸರನ್ನು ತೆಗೆದುಹಾಕುವುದರಿಂದ, ಪಂಜಾಬ್‌ನಿಂದ ರಾಜ್ಯಸಭಾ ಸಂಸದರಾಗಿ ಮುಂದುವರಿಯುವ ಅವರ ಅರ್ಹತೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ರಾಜ್ಯಸಭಾ ಅಭ್ಯರ್ಥಿಯು ತಾವು ಪ್ರತಿನಿಧಿಸುವ ರಾಜ್ಯದಲ್ಲಿ ಮತದಾರರಾಗಿ ನೋಂದಾಯಿತರಾಗಿರಬೇಕು ಎಂಬ ಷರತ್ತನ್ನು, 'ಜನ ಪ್ರಾತಿನಿಧ್ಯ ಕಾಯ್ದೆ'ಗೆ 2003ರಲ್ಲಿ ತಂದ ತಿದ್ದುಪಡಿಯ ಮೂಲಕ ರದ್ದುಗೊಳಿಸಲಾಗಿದೆ.