ಸುನೇತ್ರಾ ಪವಾರ್ 
ದೇಶ

'ನನ್ನ ಪತಿ ಅಜಿತ್ ಪವಾರ್ ಸಾವನ್ನು ರಾಜಕೀಯಗೊಳಿಸಬೇಡಿ': ಸುಪ್ರಿಯಾ ಸುಳೆ ಟೀಕೆ ನಂತರ ಪತ್ನಿ ಸುನೇತ್ರಾ ಪವಾರ್

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಅಜಿತ್ ಪವಾರ್ ಅವರ ಸಾವಿನ ಕುರಿತು ಏಕೆ ಎಫ್‌ಐಆರ್ ದಾಖಲಾಗಿಲ್ಲ ಎಂದು ಸುಪ್ರಿಯಾ ಸುಳೆ ಪ್ರಶ್ನಿಸಿದ್ದರು.

ಮುಂಬೈ: 'ತಮ್ಮ ಪತಿ ಅಜಿತ್ ಪವಾರ್ ಅವರ ಸಾವನ್ನು ರಾಜಕೀಯಗೊಳಿಸಬಾರದು. ಅಜಿತ್ ದಾದಾ ಅವರ ನಿಧನದಿಂದ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಶೂನ್ಯದ ಆಳವನ್ನು ಅವರ ಮಕ್ಕಳು ಮತ್ತು ನನಗಿಂತ ಉತ್ತಮವಾಗಿ ಯಾರು ಅರ್ಥಮಾಡಿಕೊಳ್ಳಬಲ್ಲರು? ಆದ್ದರಿಂದ, ಅಜಿತ್ ದಾದಾ ಅವರಿಗೆ ಸಂಬಂಧಿಸಿದ ದುರಂತವನ್ನು ರಾಜಕೀಯಗೊಳಿಸಬೇಡಿ' ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಹೇಳಿದ್ದಾರೆ.

ಎನ್‌ಸಿಪಿ (ಎಸ್‌ಪಿ) ನಾಯಕಿ ಮತ್ತು ಅಜಿತ್ ಪವಾರ್ ಅವರ ಸೋದರಸಂಬಂಧಿ ಸುಪ್ರಿಯಾ ಸುಳೆ ಅವರು, ಈ ದುರಂತದ ನಂತರವೂ ಅಜಿತ್ ಪವಾರ್ ಅವರ ಬಣವು 'ಅಧಿಕಾರವನ್ನು ಅನುಭವಿಸುತ್ತಿದೆ' ಎಂದು ಆರೋಪಿಸಿದ ಮರುದಿನವೇ ಸುನೇತ್ರಾ ಪವಾರ್ ಈ ಹೇಳಿಕೆ ನೀಡಿದ್ದಾರೆ. ಅಜಿತ್ ಪವಾರ್ ನಿಧನದ ನಂತರ, ಸರ್ಕಾರ ಮತ್ತು ಪಕ್ಷದಲ್ಲಿ ಅವರ ಜವಾಬ್ದಾರಿಯನ್ನು ಸುನೇತ್ರಾ ಪವಾರ್ ವಹಿಸಿಕೊಂಡಿದ್ದಾರೆ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಅಜಿತ್ ಪವಾರ್ ಅವರ ಸಾವಿನ ಕುರಿತು ಏಕೆ ಎಫ್‌ಐಆರ್ ದಾಖಲಾಗಿಲ್ಲ ಎಂದು ಸುಪ್ರಿಯಾ ಸುಳೆ ಪ್ರಶ್ನಿಸಿದ್ದರು.

'ನಾವು ನಮ್ಮ ಕುಟುಂಬದ ಪ್ರಮುಖ ಸದಸ್ಯರೊಬ್ಬರನ್ನು ಕಳೆದುಕೊಂಡಿದ್ದೇವೆ. ಎನ್‌ಸಿಪಿ (ಅಜಿತ್ ಪವಾರ್ ಬಣ) ಸದ್ಯ ಸರ್ಕಾರದ ಭಾಗವಾಗಿದೆ... ಅವರ 40 ಶಾಸಕರು ಅಥವಾ 8-9 ಸಚಿವರ ಪೈಕಿ ಯಾರಾದರೂ ನನ್ನ ಸಹೋದರನ ಸಾವಿನ ಕುರಿತು ಎಫ್‌ಐಆರ್ ದಾಖಲಿಸುವಂತೆ ಅಥವಾ ಸೂಕ್ತ ತನಿಖೆ ನಡೆಸುವಂತೆ ಒಂದೇ ಒಂದು ಮಾತನ್ನಾದರೂ ಆಡಿದ್ದಾರೆಯೇ? ನಮ್ಮ ಸಹೋದರ ನಮ್ಮನ್ನಗಲಿದ್ದಾರೆ, ಆದರೆ ಅವರು ಅಧಿಕಾರದ ಸವಿಯನ್ನು ಅನುಭವಿಸುತ್ತಿದ್ದಾರೆ' ಎಂದು ಸುಳೆ ಹೇಳಿದ್ದರು.

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು, ಜನವರಿ 28 ರಂದು ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.

'ಈ ದುರಂತದ ನಂತರ ಎಲ್ಲರೂ ಒಂದು ನಿರ್ದಿಷ್ಟ ನಿರ್ಧಾರವನ್ನು ಬಯಸುತ್ತಿದ್ದಾರೆ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದೇವೆ. ಈ ವಿಷಯ ಎಲ್ಲರಿಗೂ ತಿಳಿದಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ದು, ಅದನ್ನು ಈಡೇರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ' ಎಂದು ಸುನೇತ್ರಾ ಪವಾರ್ ಹೇಳಿದರು.

ತನಿಖಾ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತಿವೆ ಮತ್ತು ಆ ಸಂಸ್ಥೆಗಳು, ಕಾನೂನು ಹಾಗೂ ಸಂವಿಧಾನದ ಮೇಲೆ ತಮಗೆ ಪೂರ್ಣ ನಂಬಿಕೆಯಿದೆ. ಆದ್ದರಿಂದ, ನಾವು ಅವರಿಗೆ ಸಾಕಷ್ಟು ಸಮಯವನ್ನು ನೀಡಬೇಕು ಎಂದು ಅವರು ಹೇಳಿದರು.

ಮಾಧ್ಯಮಗಳಲ್ಲಿ ಪದೇ ಪದೆ ಕಾಣಿಸಿಕೊಳ್ಳುವುದನ್ನು ತನಿಖೆಯ ಕುರಿತಾದ ಮಾಹಿತಿ ನೀಡುವುದಕ್ಕೆ ಸಮೀಕರಿಸಬಾರದು. ಪದೇ ಪದೆ 'ಮೀಡಿಯಾ ಟ್ರಯಲ್' ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಅಜಿತ್ ದಾದಾ ಅವರ ತಾಯಿ, ಅವರ ಮಕ್ಕಳು ಮತ್ತು ನನಗಿಂತ ಹೆಚ್ಚಾಗಿ ಇದರಿಂದ ಯಾರು ನೋವು ಅನುಭವಿಸಬಹುದು ಎಂಬುದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು ಎಂದರು.

ಇದಕ್ಕೂ ಮುನ್ನ, ಎನ್‌ಸಿಪಿ (ಎಸ್‌ಪಿ) ಶಾಸಕ ಮತ್ತು ಶರದ್ ಪವಾರ್ ಅವರ ಮೊಮ್ಮಗ ರೋಹಿತ್ ಪವಾರ್ ಅವರು, ಅಜಿತ್ ಪವಾರ್ ಅವರ ಸಾವಿಗೆ ಪಿತೂರಿಯೇ ಕಾರಣ ಎಂದು ಆರೋಪಿಸಿದ್ದರು ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರ ರಾಜೀನಾಮೆಗೆ ಆಗ್ರಹಿಸಿದ್ದರು.

ಅಜಿತ್ ಪವಾರ್ ಅವರ ಪುತ್ರ ಜಯ್ ಪವಾರ್ ಕೂಡ ವಿಮಾನ ಅಪಘಾತದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು ಹಾಗೂ ಸುನೇತ್ರಾ ಪವಾರ್ ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು, ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..!

Climate compensation ವಿವಾದ; ಭಾರತದಿಂದ ನೆರವು ಸ್ವೀಕರಿಸಿದ್ದೇವೆ, ಯಾವುದೇ ಪರಿಹಾರಕ್ಕೂ ಬೇಡಿಕೆ ಇಟ್ಟಿಲ್ಲ; ನೇಪಾಳ ಸ್ಪಷ್ಟನೆ..!

ನೇಪಾಳ ಪ್ರವಾಹ ದುರಂತ: ನಾಪತ್ತೆಯಾದವರ ಕುಟುಂಬಕ್ಕೆ ಭಾರತ ನೆರವು, DNA ಪರೀಕ್ಷೆಗೆ ಕೇಂದ್ರದಿಂದ ವ್ಯವಸ್ಥೆ..!

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ

ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನ: ಏರ್ ಶೋ ನಡೆಸಲು ಚಿಂತನೆ