ನವದೆಹಲಿ: ಕಾವೇರಿ ಜಲ ನಿಯಂತ್ರಣ ಸಮಿತಿಯು (CWRC) ಇಂದು ಮಂಗಳವಾರ, ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ ಪ್ರತಿದಿನ 6,000 ಕ್ಯೂಸೆಕ್ ಕಾವೇರಿ ನೀರನ್ನು ಹರಿಸುವಂತೆ ಸೂಚಿಸಿದೆ.
ವಿನೀತ್ ಗುಪ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ ಮಳೆ ಹಾಗೂ ಬೆಳೆ ಪರಿಸ್ಥಿತಿಯನ್ನು ಸಮಿತಿ ಪರಿಶೀಲಿಸಿತು.
ನಾಳೆ ಬೆಳಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ 6,000 ಕ್ಯೂಸೆಕ್ ನೀರಿನ ಹರಿವು ಖಚಿತವಾಗುವಂತೆ ಕರ್ನಾಟಕ ತನ್ನ ಜಲಾಶಯಗಳಿಂದ ನೀರು ಬಿಡುಗಡೆ ಮಾಡಬೇಕು ಎಂದು ಸೂಚಿಸಿದೆ.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಕೈಗೊಂಡ ನಿರ್ಧಾರವನ್ನು ಅನುಮೋದಿಸಿ, ಆಗಸ್ಟ್ 25ರಿಂದ ಇಂದಿನವರೆಗೆ ಪ್ರತಿದಿನ 9,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಿತ್ತು.
ಆದರೆ, ಸೆಪ್ಟೆಂಬರ್ 4ರಂದು ಕರ್ನಾಟಕವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಿ, ನೀರು ಬಿಡುಗಡೆ ಪ್ರಮಾಣವನ್ನು 9,000 ಕ್ಯೂಸೆಕ್‌ನಿಂದ 2,000 ಕ್ಯೂಸೆಕ್‌ಗೆ ಇಳಿಸುವಂತೆ ಕೋರಿತ್ತು.