ಗುವಾಹಟಿ: ಕ್ಷುಲ್ಲಕ ಕಾರಣಕ್ಕೆ ನವವಿವಾಹಿತ ಪತ್ನಿ ರಿಯಾ ತಾಲುಕ್ದಾರ್ ಅವರನ್ನು ಕೊಲೆ ಮಾಡಿ, ರುಂಡವನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಪಾಪಿ ಪತಿ ರಾಮಾನುಜ್ ಗೋಸ್ವಾಮಿ , ಈಗ ಸಾರ್ವಜನಿಕರಿಗೆ ಬುದ್ಧಿ ಮಾತುಗಳನ್ನು ಹೇಳಿದ್ದಾನೆ.
"ನಾನು ಜೈಲಿನಿಂದ ಬಂದ ಬಳಿಕ ಆಕೆಯ(ಪತ್ನಿ) ಶುಗರ್ ಡ್ಯಾಡಿಯನ್ನು ಕೊಲ್ಲುತ್ತೇನೆ" ಎಂದು ಮಂಗಳವಾರ ಗುವಾಹಟಿಯ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಪತ್ನಿ ಕೊಲೆ ಆರೋಪಿ ರಾಮಾನುಜ್ ಗೋಸ್ವಾಮಿ ಹೇಳಿಕೆ ನೀಡಿದ್ದನು.
ಅಸ್ಸಾಂನ ಗುವಾಹತಿಯಲ್ಲಿ ಮದುವೆಯಾಗಿ ಕೆಲವೇ ತಿಂಗಳಲ್ಲೇ 25 ವರ್ಷದ ಪತ್ನಿ ರಿಯಾ ತಾಲೂಕ್ದಾರ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ರಾಮಾನುಜ್ ಗೋಸ್ವಾಮಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಇದಾದ ಬಳಿಕ ಪೊಲೀಸರು ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ ಒಂದಷ್ಟು ಪತ್ರಕರ್ತರು ಆತನನ್ನು ಮತ್ತೊಮ್ಮೆ ಮಾತನಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ "ನಾನು ಮಾಡಿದ್ದು ತಪ್ಪು. ಅದನ್ನು ನಾನು ಬಹಿರಂಗವಾಗಿ ಎಲ್ಲರ ಮುಂದೆಯೇ ಒಪ್ಪಿಕೊಳ್ಳುತ್ತೇನೆ. ಜನರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು. ಆದರೆ, ನಾನು ಎಲ್ಲರ ಬಳಿ ಕೇಳುವುದಿಷ್ಟೇ. ಯಾರೂ ನಿಮ್ಮ ಜೀವನದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ ಎಂದು ಕೇಳಿಕೊಳ್ಳುತ್ತೇನೆ" ಎಂದು ಹೇಳಿದ್ದಾನೆ.
ಸೆಪ್ಟೆಂಬರ್ 6ರಂದು ಗುವಾಹಟಿಯ ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳೆದ ಎರಡು ದಿನಗಳಿಂದ ದಂಪತಿ ಕಾಣಿಸಿಕೊಂಡಿರಲಿಲ್ಲ ಹಾಗೂ ಅವರ ಮೊಬೈಲ್ ಫೋನ್‌ಗಳೂ ಸ್ವಿಚ್‌ಆಫ್ ಆಗಿದ್ದವು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಅಪಾರ್ಟ್‌ಮೆಂಟ್‌ಗೆ ತೆರಳಿ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಆಕೆಯ ತಲೆ ಕಾಣೆಯಾಗಿತ್ತು. ಕೈ ಬೆರಳುಗಳಿಗೂ ಗಂಭೀರ ಗಾಯಗಳಾಗಿದ್ದವು. ನಂತರ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದಾಗ, ಫ್ರಿಜ್‌ನಲ್ಲಿ ಪಾಲಿಥಿನ್ ಚೀಲದಲ್ಲಿ ಇಡಲಾಗಿದ್ದ ಮಹಿಳೆಯ ತಲೆಯನ್ನು ಪತ್ತೆಹಚ್ಚಿದ್ದಾರೆ.
ಮದುವೆಯಾಗಿ ಕೆಲವೇ ತಿಂಗಳಲ್ಲೇ 25 ವರ್ಷದ ಪತ್ನಿ ರಿಯಾ ತಾಲೂಕ್ದಾರ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ರಾಮಾನುಜ್ ಗೋಸ್ವಾಮಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.