ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಧಿಕೃತ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಸಂಪೂರ್ಣವಾಗಿ ಹಾಡುವ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಮಿತ್ರ ಪಕ್ಷ ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿರುವಾಗಲೇ, ಎನ್‌ಸಿ ಸಂಸದ ಆಘಾ ರುಹುಲ್ಲಾ ಮೆಹದಿ ಅವರು ತಮ್ಮದೇ ಪಕ್ಷದ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದಾರೆ.
ತಮ್ಮ ಪಕ್ಷವು ಪ್ರಮುಖ ವಿಷಯಗಳನ್ನು ಕೈಬಿಟ್ಟು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹಾದಿಯನ್ನು ಅನುಸರಿಸುತ್ತಿದೆ ಎಂದು ಆಡಳಿತರೂಢ ಎನ್ ಸಿ ಸಂಸದ ಆರೋಪಿಸಿದ್ದಾರೆ.
ಈ ಕುರಿತು 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ರುಹುಲ್ಲಾ, 2019ರ ಆಗಸ್ಟ್ 5ರ ನಂತರ ಜಾರಿಗೆ ತಂದ ಬದಲಾವಣೆಗಳನ್ನು ನಾನು ವಿರೋಧಿಸಿದ್ದರೂ, ಈಗ ತಮ್ಮ ಪಕ್ಷ ತಮ್ಮೊಂದಿಗೆ ನಿಲ್ಲುತ್ತಿಲ್ಲ ಎಂದು ಹೇಳಿದ್ದಾರೆ.
"2019ರ ಆಗಸ್ಟ್ 5ರಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಮ್ಮ ಮೇಲೆ ಹೇರಿದ ಪ್ರಜಾಪ್ರಭುತ್ವ-ವಿರೋಧಿ ಬದಲಾವಣೆಗಳ ವಿರುದ್ಧ ನಾನು ಹೋರಾಡಿದೆ. ಆದರೆ ಹಿಂತಿರುಗಿ ನೋಡಿದಾಗ, ನನ್ನ ಪಕ್ಷ ಆ ಹೋರಾಟವನ್ನು ಕೈಬಿಟ್ಟಿರುವುದನ್ನು ಕಂಡೆ," ಎಂದು ಎನ್‌ಸಿ ಸಂಸದರು ತಿಳಿಸಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಕೂಡ ನಾನು ವಿರೋಧಿಸಿದೆ. ಆದರೆ ಇದಕ್ಕೂ ಪಕ್ಷದಿಂದ ಯಾವುದೇ ಬೆಂಬಲ ಸಿಗಲಿಲ್ಲ ಎಂದು ರುಹುಲ್ಲಾ ಆರೋಪಿಸಿದ್ದಾರೆ.
"ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧವೂ ನಾನು ಹೋರಾಡಿದೆ; ಆಗಲೂ ಹಿಂತಿರುಗಿ ನೋಡಿದಾಗ ನನ್ನ ಪಕ್ಷ ಆ ಹೋರಾಟವನ್ನು ಕೈಬಿಟ್ಟಿರುವುದು ಕಂಡುಬಂತು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಇದರ ವಿರುದ್ಧ ನಿರ್ಣಯ ಮಂಡಿಸುವ ಧೈರ್ಯವನ್ನೂ ಅವರು ತೋರಲಿಲ್ಲ. ಆದರೆ ಪಂಜಾಬ್ ಮತ್ತು ದಕ್ಷಿಣದ ಕೆಲವು ರಾಜ್ಯಗಳು ನಿರ್ಣಯ ಅಂಗೀಕರಿಸಿದವು" ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 'ವಂದೇ ಮಾತರಂ' ಗೀತೆಯನ್ನು ಸಂಪೂರ್ಣವಾಗಿ ಹಾಡುವ ವಿಷಯದಲ್ಲೂ ತಮ್ಮ ಪಕ್ಷವನ್ನು ಕಟುವಾಗಿ ಟೀಕಿಸಿದ ರುಹುಲ್ಲಾ, "ವಂದೇ ಮಾತರಂನ ಸಾಲುಗಳನ್ನು ಕಡ್ಡಾಯವಾಗಿ ಹಾಡಿಸುವ ಕ್ರಮವನ್ನು ನಾನು ವಿರೋಧಿಸುತ್ತೇನೆ. ಏಕೆಂದರೆ ಅದನ್ನು ಹೇರುವುದು ಸಂವಿಧಾನಬಾಹಿರವಾಗಿದೆ. ಆದರೆ ಹಿಂತಿರುಗಿ ನೋಡಿದಾಗ, ನನ್ನ ಪಕ್ಷ ಆ ಹೋರಾಟವನ್ನು ಕೈಬಿಟ್ಟಿರುವುದು ಮಾತ್ರವಲ್ಲದೆ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಶರಣಾಗಿ ಅವರ ಹಾದಿಯನ್ನೇ ಅನುಸರಿಸುತ್ತಿರುವುದು ಕಂಡುಬರುತ್ತಿದೆ," ಎಂದು ಆರೋಪಿಸಿದ್ದಾರೆ.