ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ 
ದೇಶ

ಅಮೆರಿಕಾ ಸರ್ವಾಧಿಕಾರತ್ವ-ಆರ್ಥಿಕ ನಿರ್ಬಂಧಗಳಿಗೆ ಅಂತ್ಯ ಹಾಡಲು 'BRICS' ಒಕ್ಕೂಟ ಸ್ಥಾಪನೆ: Iran

ಅಮೆರಿಕ ತನ್ನ ಇಚ್ಛೆಯಂತೆ ಯಾವುದೇ ದೇಶದ ಮೇಲೆ ಆರ್ಥಿಕ ನಿರ್ಬಂಧ ಹೇರಲು ಸಾಧ್ಯವಾಗುವ ಪರಿಸ್ಥಿತಿಯನ್ನು ಬದಲಿಸುವುದು ಬ್ರಿಕ್ಸ್‌ನ ಪ್ರಮುಖ ಉದ್ದೇಶವಾಗಿದೆ. ಅಮೆರಿಕದ ‘ಸರ್ವಾಧಿಕಾರ’ವನ್ನು ಮುರಿಯುವ ನೇರ ಸವಾಲಾಗಿ ಬ್ರಿಕ್ಸ್ ಕಾರ್ಯನಿರ್ವಹಿಸಬೇಕು.

ನವದೆಹಲಿ: ಅಮೆರಿಕಾದ ಸರ್ವಾಧಿಕಾರತ್ವ"ವನ್ನು (Totalitarianism) ಮುರಿಯಲು ಹಾಗೂ ಏಕಪಕ್ಷೀಯ ಆರ್ಥಿಕ ನಿರ್ಬಂಧಗಳನ್ನು ಎದುರಿಸುವ "ಪ್ರಮುಖ ಉದ್ದೇಶದಿಂದಲೇ 'ಬ್ರಿಕ್ಸ್' (BRICS) ಒಕ್ಕೂಟವನ್ನು ರಚಿಸಲಾಗಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಜಾಗತಿಕ ವೇದಿಕೆಯಲ್ಲಿ ಅಮೆರಿಕದ ಏಕಪಕ್ಷೀಯ ಪ್ರಭಾವವನ್ನು ತಗ್ಗಿಸಲು ಬ್ರಿಕ್ಸ್ ಒಂದು ಬಲವಾದ ಪರ್ಯಾಯ ಶಕ್ತಿಯಾಗಿದೆ ಎಂದು ಬಣ್ಣಿಸಿದರು.

ಅಮೆರಿಕ ತನ್ನ ಇಚ್ಛೆಯಂತೆ ಯಾವುದೇ ದೇಶದ ಮೇಲೆ ಆರ್ಥಿಕ ನಿರ್ಬಂಧ ಹೇರಲು ಸಾಧ್ಯವಾಗುವ ಪರಿಸ್ಥಿತಿಯನ್ನು ಬದಲಿಸುವುದು ಬ್ರಿಕ್ಸ್‌ನ ಪ್ರಮುಖ ಉದ್ದೇಶವಾಗಿದೆ. ಅಮೆರಿಕದ ‘ಸರ್ವಾಧಿಕಾರ’ವನ್ನು ಮುರಿಯುವ ನೇರ ಸವಾಲಾಗಿ ಬ್ರಿಕ್ಸ್ ಕಾರ್ಯನಿರ್ವಹಿಸಬೇಕು ಎಂದು ಪ್ರತಿಪಾದಿಸಿದರು.

ಅಮೆರಿಕ ಆರಂಭಿಸಿರುವ ಪ್ರವೃತ್ತಿಯ ಹಿನ್ನೆಲೆಯಲ್ಲಿ, ಅದು ತನ್ನ ಇಚ್ಛೆಯಂತೆ ಯಾವುದೇ ದೇಶದ ಮೇಲೆ ನಿರ್ಬಂಧ ಹೇರುತ್ತಿದೆ. ಮತ್ತೊಂದೆಡೆ, ಈ ರೀತಿಯ ಏಕಾಧಿಕಾರವನ್ನು ಮುರಿಯುವುದು ಬ್ರಿಕ್ಸ್‌ನ ಉದ್ದೇಶ. ಅದಕ್ಕಾಗಿಯೇ ಬ್ರಿಕ್ಸ್ ರಚನೆಯಾಯಿತು. ವೈಯಕ್ತಿಕ ದೇಶಗಳು ವಿಧಿಸುವ ನಿರ್ಬಂಧಗಳಿಂದ ಸ್ವತಂತ್ರವಾಗಿ ಪರ್ಯಾಯ ವ್ಯಾಪಾರ ಮತ್ತು ಸಹಕಾರ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಲು ಬ್ರಿಕ್ಸ್ ತನ್ನ ಸದಸ್ಯ ರಾಷ್ಟ್ರಗಳಿಗೆ ಅವಕಾಶ ಕಲ್ಪಿಸಬೇಕು.

ಒಂದು ದೇಶ ತನ್ನ ಇಚ್ಛೆಯಂತೆ ಮತ್ತೊಂದು ದೇಶದ ಮೇಲೆ ನಿರ್ಬಂಧ ಹೇರಬಹುದೇ ಎಂಬುದನ್ನು ಲೆಕ್ಕಿಸದೆ, ಅದರಿಂದ ಸ್ವತಂತ್ರವಾಗಿ ವ್ಯಾಪಾರ, ಸಹಕಾರ ಮತ್ತು ಪರಸ್ಪರ ಸಂಬಂಧಗಳ ಸ್ವರೂಪವನ್ನು ಬದಲಿಸುವುದು ನಮ್ಮ ಉದ್ದೇಶ.

ಏಕಪಕ್ಷೀಯತೆಯನ್ನು ಎದುರಿಸಲು ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಒಗ್ಗೂಡಿ ಕೆಲಸ ಮಾಡಬೇಕು. “ನಾವು ಪರಸ್ಪರ ಸಹಾಯ ಮಾಡಲು ಮತ್ತು ಬೆಂಬಲಿಸಲು ಇಲ್ಲಿಗೆ ಬಂದಿದ್ದೇವೆ. ಈ ಮೂಲಕ ಏಕಪಕ್ಷೀಯತೆಯನ್ನು ಎದುರಿಸಬೇಕು. ಅಮೆರಿಕದ ಏಕಪಕ್ಷೀಯತೆಯನ್ನು ಹಳಿತಪ್ಪಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲೇ ಪೆಜೆಶ್ಕಿಯನ್ ಈ ಹೇಳಿಕೆ ನೀಡಿದ್ದಾರೆ.

ಶನಿವಾರ ಅಂಗೀಕರಿಸಲಾದ ಬ್ರಿಕ್ಸ್ ನವದೆಹಲಿ ಘೋಷಣೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಲಾಗಿದ್ದು, ಗರಿಷ್ಠ ಸಂಯಮ ವಹಿಸುವಂತೆ ಹಾಗೂ ವಿವಾದಗಳನ್ನು ಬಹುಪಕ್ಷೀಯ ವಿಧಾನಗಳ ಮೂಲಕ ಪರಿಹರಿಸುವಂತೆ ಕರೆ ನೀಡಲಾಗಿದೆ.

ನಡೆಯುತ್ತಿರುವ ಸಂಘರ್ಷದ ಕುರಿತು ಮಾತನಾಡಿದ ಪೆಜೆಶ್ಕಿಯನ್, ಯುದ್ಧವನ್ನು ಇರಾನ್ ಆರಂಭಿಸಿದೆ ಎಂಬ ಆರೋಪವನ್ನು ತೀವ್ರವಾಗಿ ತಳ್ಳಿಹಾಕಿದ್ದಾರೆ.

ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಕಾನೂನು ಅಥವಾ ಮಾನವೀಯ ಆಧಾರವಿಲ್ಲದೆ ಅಮೆರಿಕ ಇರಾನ್ ಮೇಲೆ ದಾಳಿ ಆರಂಭಿಸಿತು ಎಂದು ಅವರು ಆರೋಪಿಸಿದ್ದಾರೆ.

ನಾವು ಯುದ್ಧವನ್ನು ಆರಂಭಿಸಿಲ್ಲ. ಅವರೇ (ಅಮೆರಿಕ) ಯುದ್ಧ ಆರಂಭಿಸಿದರು. ದಾಳಿಗಳ ವೇಳೆ ಇರಾನ್‌ನ ರಾಜಕೀಯ ಮತ್ತು ಸೇನಾ ನಾಯಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿತ್ತು.

ಅವರು ನಮ್ಮ ನಾಯಕನನ್ನು ಹತ್ಯೆ ಮಾಡಿದರು. ನಮ್ಮ ಸೇನಾ ಕಮಾಂಡರ್‌ಗಳನ್ನು ಹತ್ಯೆ ಮಾಡಿದರು. ಒಂದೇ ದಿನ ಶಾಲೆಯಲ್ಲಿದ್ದ ಅಮಾಯಕ ವಿದ್ಯಾರ್ಥಿಗಳನ್ನು ಹತ್ಯೆ ಮಾಡಿದರು. ನಮ್ಮ ವಿಜ್ಞಾನಿಗಳನ್ನು ಹತ್ಯೆ ಮಾಡಿದರು ಮತ್ತು ನಮ್ಮ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ನಡೆಸಿದರು.

ಇದಾದ ಬಳಿಕ ಇರಾನ್ ನಡೆಸಿದ ಸೇನಾ ಪ್ರತಿಕ್ರಿಯೆಯನ್ನು ಆತ್ಮರಕ್ಷಣೆಯ ಕ್ರಮವೆಂದು ಟೆಹ್ರಾನ್ ಪರಿಗಣಿಸಿದೆ. ಆದ್ದರಿಂದ ಅವರು ಅನುಸರಿಸುತ್ತಿರುವ ಕ್ರಮಗಳಿಗೆ ನಾವು ವಾಸ್ತವವಾಗಿ ಆತ್ಮರಕ್ಷಣೆಯ ಮೂಲಕ ಪ್ರತಿಕ್ರಿಯಿಸಿದ್ದೇವೆ” ಎಂದು ಹೇಳಿದ್ದಾರೆ.

ಸಂಘರ್ಷವು ಇರಾನ್-ಅಮೆರಿಕ ನಡುವಿನ ನೇರ ಉದ್ವಿಗ್ನತೆಯಷ್ಟೇ ಅಲ್ಲದೆ, ಇಂಧನ ಮಾರುಕಟ್ಟೆ ಮತ್ತು ಪ್ರಾದೇಶಿಕ ಸಮುದ್ರ ಭದ್ರತೆಯ ಬಗ್ಗೆಯೂ ಆತಂಕಗಳನ್ನು ಹೆಚ್ಚಿಸಿರುವ ಸಂದರ್ಭದಲ್ಲಿ ಪೆಜೆಶ್ಕಿಯನ್ ಅವರ ಹೇಳಿಕೆಗಳು ಬಂದಿವೆ.

ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪೆಜೆಶ್ಕಿಯನ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ, ಮಧ್ಯಪ್ರಾಚ್ಯ ವಿವಾದಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹರಿಸಬೇಕು ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದ್ದಾರೆ.

ಸಮುದ್ರ ಮಾರ್ಗಗಳಲ್ಲಿ ಸಂಚಾರ ಮತ್ತು ವಾಣಿಜ್ಯಕ್ಕೆ ಸ್ವಾತಂತ್ರ್ಯ, ಜೊತೆಗೆ ನಾವಿಕರ ಸುರಕ್ಷತೆಯ ಮಹತ್ವವನ್ನೂ ಮೋದಿ ಒತ್ತಿಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇರಾನ್‌ನ ಚಾಬಹಾರ್ ಬಂದರು ಮೂಲಕ ಭಾರತದ ನಿರಂತರ ಸಂಪರ್ಕ ಮತ್ತು ಸಹಕಾರದ ಅಗತ್ಯವನ್ನು ಪೆಜೆಶ್ಕಿಯನ್ ಬಲವಾಗಿ ಪ್ರತಿಪಾದಿಸಿದ್ದಾರೆ. ಪ್ರಾದೇಶಿಕ ಸಂಪರ್ಕದ ದೃಷ್ಟಿಯಿಂದ ಚಾಬಹಾರ್ ಬಂದರು ಅತ್ಯಂತ ಕಾರ್ಯತಂತ್ರದ ಮಹತ್ವ ಹೊಂದಿದೆ ಎಂದು ಹೇಳಿದ್ದಾರೆ.

ಇರಾನ್ ಭೌಗೋಳಿಕವಾಗಿ ಅತ್ಯಂತ ಪ್ರಮುಖ ಸ್ಥಾನದಲ್ಲಿದ್ದು, ಉತ್ತರ ಮತ್ತು ದಕ್ಷಿಣ ಹಾಗೂ ಪೂರ್ವ ಮತ್ತು ಪಶ್ಚಿಮವನ್ನು ಸಂಪರ್ಕಿಸುವ ಕೊಂಡಿಯಾಗಿ ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದ್ದಾರೆ.

ಇದು ದಕ್ಷಿಣವನ್ನು ಉತ್ತರದೊಂದಿಗೆ, ಪಶ್ಚಿಮವನ್ನು ಪೂರ್ವದೊಂದಿಗೆ ಮತ್ತು ವಿವಿಧ ದೇಶಗಳನ್ನು ಪರಸ್ಪರ ಸಂಪರ್ಕಿಸಬಹುದು. ಪ್ರಾದೇಶಿಕ ದೇಶಗಳು ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ವೈಜ್ಞಾನಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಇದು ಅತ್ಯಂತ ಸುಲಭ ಹಾಗೂ ಕಡಿಮೆ ವೆಚ್ಚದ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ಐತಿಹಾಸಿಕ ರೇಷ್ಮೆ ಮಾರ್ಗದಲ್ಲಿ ಇರಾನ್ ಪ್ರಮುಖ ಸ್ಥಾನ ಹೊಂದಿತ್ತು ಎಂಬುದನ್ನು ಉಲ್ಲೇಖಿಸಿದ ಪೆಜೆಶ್ಕಿಯನ್, ಈ ಸಂಪರ್ಕ ಮಾರ್ಗವನ್ನು ಪುನರುಜ್ಜೀವನಗೊಳಿಸಲು ಇರಾನ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಆದರೆ, ಅಮೆರಿಕ ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳಿಂದಾಗಿ ಹಲವು ಸಂಕೀರ್ಣತೆಗಳು ಎದುರಾಗುತ್ತಿವೆ ಎಂದು ತಿಳಿಸಿದ್ದಾರೆ.

ಹಿಂದೆ ಇರಾನ್ ರೇಷ್ಮೆ ಮಾರ್ಗದ ಪ್ರಮುಖ ತಾಣವಾಗಿತ್ತು. ಈ ಮಾರ್ಗಗಳ ಮೂಲಕ ನಾಗರಿಕತೆಗಳ ನಡುವೆ ಸಂಪರ್ಕ ಅಭಿವೃದ್ಧಿಯಾಗಿತ್ತು. ಈಗ ನಾವು ಅದನ್ನು ಪುನರುಜ್ಜೀವನಗೊಳಿಸಬಹುದು ಎಂದು ಹೇಳಿದ್ದಾರೆ.

ಮಧ್ಯ ಏಷ್ಯಾಕ್ಕೆ ಪ್ರಮುಖ ಪ್ರವೇಶದ್ವಾರವಾಗಿ ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಹೂಡಿಕೆ ಮಾಡಿದೆ.

ಚಾಬಹಾರ್ ಯೋಜನೆ ಮತ್ತು ಭಾರತದ ಹೂಡಿಕೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಚರ್ಚಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೆಜೆಶ್ಕಿಯನ್, ಉಭಯ ದೇಶಗಳು ಹಲವು ಸಾಧ್ಯತೆಗಳ ಕುರಿತು ಚರ್ಚಿಸಿವೆ. ಭಾರತ ಅಲ್ಲಿ ಹೂಡಿಕೆ ಮಾಡಬಹುದು. ಈಗಾಗಲೇ ಭಾರತ ಕೆಲವು ಹೂಡಿಕೆಗಳನ್ನು ಮಾಡಿದೆ ಮತ್ತು ಕೆಲಸ ಮುಂದುವರಿದಿದೆ” ಎಂದು ಹೇಳಿದ್ದಾರೆ.

ಚಾಬಹಾರ್ ಬಂದರಿನ ಮೂಲಸೌಕರ್ಯಕ್ಕೆ ಮಾತ್ರ ಸಹಕಾರವನ್ನು ಸೀಮಿತಗೊಳಿಸುವ ಅಗತ್ಯವಿಲ್ಲ. ವ್ಯಾಪಾರ, ಪಾಲುದಾರಿಕೆ ಮತ್ತು ವಿಶಾಲವಾದ ‘ಪರಸ್ಪರ ಸಂಪರ್ಕ ಜಾಲ’ದ ಮೂಲಕವೂ ಸಹಕಾರವನ್ನು ವಿಸ್ತರಿಸಬಹುದು ಎಂದು ಇರಾನ್ ಅಧ್ಯಕ್ಷರು ಹೇಳಿದ್ದಾರೆ.

'ಈ ಎಲ್ಲ ಕ್ಷೇತ್ರಗಳಲ್ಲಿ ಸಹಕರಿಸಲು ನಾವು ಸಿದ್ಧ'

ಬ್ರಿಕ್ಸ್‌ನ ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಪ್ರಾಮುಖ್ಯತೆಯ ಕುರಿತು ಪೆಜೆಶ್ಕಿಯನ್ ಅವರ ಹೇಳಿಕೆಗಳು ಇರಾನ್‌ನ ದೃಷ್ಟಿಕೋನವನ್ನೂ ಪ್ರತಿಬಿಂಬಿಸಿವೆ. ವಿಸ್ತರಣೆಯ ಭಾಗವಾಗಿ ಇರಾನ್ ಇತರ ಹೊಸ ಸದಸ್ಯ ರಾಷ್ಟ್ರಗಳೊಂದಿಗೆ ಬ್ರಿಕ್ಸ್‌ಗೆ ಸೇರ್ಪಡೆಯಾಗಿದ್ದು, ಏಷ್ಯಾ, ಮಧ್ಯಪ್ರಾಚ್ಯ ಮತ್ತು ಜಾಗತಿಕ ದಕ್ಷಿಣದಲ್ಲಿ ಒಕ್ಕೂಟದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.

ಬ್ರಿಕ್ಸ್ ತನ್ನ ಆರ್ಥಿಕ ಬಲವನ್ನು ಪಾಶ್ಚಿಮಾತ್ಯ ಪ್ರಾಬಲ್ಯದ ಹಣಕಾಸು ಮತ್ತು ವ್ಯಾಪಾರ ವ್ಯವಸ್ಥೆಗಳಿಂದ ಹೆಚ್ಚಿನ ಸ್ವಾವಲಂಬನೆ ಸಾಧಿಸಲು ಬಳಸಿಕೊಳ್ಳಬಹುದು ಎಂಬುದು ಇರಾನ್ ಅಧ್ಯಕ್ಷರ ವಾದವಾಗಿದೆ.

ಬ್ರಿಕ್ಸ್ ರಾಷ್ಟ್ರಗಳ ನಡುವೆ ಆರ್ಥಿಕ ಏಕೀಕರಣವನ್ನು ಇನ್ನಷ್ಟು ಆಳಗೊಳಿಸುವುದು ಮತ್ತು ವ್ಯಾಪಾರ ಹಾಗೂ ಹಣಕಾಸು ವ್ಯವಹಾರಗಳಿಗೆ ಪರ್ಯಾಯ ವ್ಯವಸ್ಥೆಗಳ ಬಳಕೆಯನ್ನು ಹೆಚ್ಚಿಸುವಂತೆಯೂ ಅವರು ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಅಷ್ಟೇ ಅಲ್ಲ, ಭಾರತಕ್ಕೂ ಕಾದಿತ್ತು ಕಂಟಕ: 9/11 ರಕ್ತಚರಿತ್ರೆಗೂ ಮುನ್ನ INDIA ಮೇಲಿತ್ತು ಲಾಡೆನ್ ಕಣ್ಣು: 25 ವರ್ಷಗಳ ಬಳಿಕ ಕರಾಳ ರಹಸ್ಯ ಬಯಲು..!

ಅಮೆರಿಕ-ಇಸ್ರೇಲ್ ಮುಂದೆ ಎಂದಿಗೂ ತಲೆಬಾಗಲ್ಲ, ದಬ್ಬಾಳಿಕೆಗೆ ಜಗ್ಗಲ್ಲ: ನಾಗರಿಕ ರಕ್ಷಣಾ ನೆಲೆಗಳ ಮೇಲಿನ ದಾಳಿಗೆ ಇರಾನ್ ತೀವ್ರ ಆಕ್ರೋಶ..!

ಅಜಿತ್ ಕುಮಾರ್ 'ಲಂಡನ್ ರೇಸ್' ನಲ್ಲೂ ಒಟ್ಟಾಗಿ ಕಾಣಿಸಿಕೊಂಡ ಸಿಎಂ ವಿಜಯ್, ತ್ರಿಶಾ ಕೃಷ್ಣನ್! ತಲಾ, ದಳಪತಿ ಫ್ಯಾನ್ಸ್ ಫುಲ್ ಖುಷ್! Video

ED ದೂರಿನ ಹಿಂದೆ ಬಿಜೆಪಿಯ ಕೈವಾಡವಿದೆ: ಚಿನ್ನದ ಗಣಿಗಾರಿಕೆ ಕುರಿತ ಆರೋಪ ಸಾಬೀತುಪಡಿಸಲಿ- ಸತೀಶ್ ಜಾರಕಿಹೊಳಿ ಸವಾಲು!

ನಾಗೇಂದ್ರ ಆಯ್ತು, ಈಗ ಡಿಕೆಶಿ ಸಂಪುಟದ 2ನೇ ವಿಕೆಟ್ ಪತನಕ್ಕೆ ಎದುರು ನೋಡ್ತಾ ಇರುವ ಬಿಜೆಪಿ!