ಮುಂಬೈ: ಮಹಾರಾಷ್ಟ್ರದ ಯವತ್ಮಾಳ್ ಜಿಲ್ಲೆಯಲ್ಲಿ ನಡೆದ ಜಾತ್ರೆಯೊಂದರಲ್ಲಿ ಜೈಂಟ್ ವೀಲ್ ಬೇರಿಂಗ್‌ಗೆ ಮಹಿಳೆಯ ಕೂದಲು ಸಿಲುಕಿಕೊಂಡ ಪರಿಣಾಮ ಆಕೆಯ ನೆತ್ತಿಯ ಚರ್ಮದ ಬಹುಭಾಗ ಕಿತ್ತುಬಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಯವತ್ಮಾಳ್ ಜಿಲ್ಲೆಯ ಮಹಾಗಾಂವ್ ತಾಲ್ಲೂಕಿನಲ್ಲಿ ಶುಕ್ರವಾರ ‘ತಾನ್ಹಾ ಪೋಲಾ’ ಹಬ್ಬದ ಅಂಗವಾಗಿ ಆಯೋಜಿಸಿದ್ದ ಜಾತ್ರೆಯಲ್ಲಿ ಈ ಘಟನೆ ನಡೆದಿದೆ.
ವಾರ್ಷಿಕ ಸಂಪ್ರದಾಯದಂತೆ ನಡೆದಿದ್ದ ಒಂದು ದಿನದ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ಪುಣೇಶ್ವರ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯಲು ಆಗಮಿಸಿದ್ದರು.
ಫುಲ್ಸಾವಂಗಿ ಗ್ರಾಮದ ನಿವಾಸಿ, 25 ವರ್ಷದ ಬಾಲಿ ಮಾರುತಿ ತಾಲಿಕೋಟೆ ಗಾಯಗೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಜಾತ್ರೆಗೆ ಆಗಮಿಸಿದ್ದ ಅವರು ದೈತ್ಯಚಕ್ರದಲ್ಲಿ ಕುಳಿತು ಸವಾರಿ ಮಾಡುತ್ತಿದ್ದರು.
ಕೂದಲು ಸಿಲುಕಿ ನೆತ್ತಿಯ ಚರ್ಮವೇ ಕಿತ್ತು ಬಂತು!
ಜೈಂಟ್ ವೀಲ್ ವೇಗವಾಗಿ ತಿರುಗಲು ಆರಂಭಿಸಿದಾಗ, ಆಕೆಯ ಕೂದಲು ಆಸನದ ಹಿಂಭಾಗದಲ್ಲಿದ್ದ ತಿರುಗುವ ಬೇರಿಂಗ್‌ಗೆ ಸಿಲುಕಿಕೊಂಡಿದೆ. ದೈತ್ಯಚಕ್ರ ವೇಗವಾಗಿ ತಿರುಗುತ್ತಿದ್ದಂತೆ ಕೂದಲಿಗೆ ಭಾರಿ ಒತ್ತಡ ಬಿದ್ದು, ಏಕಾಏಕಿ ಜೋರಾಗಿ ಎಳೆದ ಪರಿಣಾಮ ನೆತ್ತಿಯ ಚರ್ಮದ ದೊಡ್ಡ ಭಾಗ ಕಿತ್ತುಬಂದಿದೆ.
ನೋವಿನಿಂದ ಮಹಿಳೆ ಕಿರುಚಿಕೊಂಡಿದ್ದಾರೆ. ಆಕೆಯ ಕಿರುಚಾಟ ಕೇಳಿ ಸ್ಥಳದಲ್ಲಿದ್ದ ಜಾತ್ರೆಗೆ ಬಂದವರು ಬೆಚ್ಚಿಬಿದ್ದಿದ್ದಾರೆ. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಕಂಡು ಜಾತ್ರೆಯಲ್ಲಿ ಕೆಲಕಾಲ ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ವೇಳೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಸಹಾಯಕ ಪೊಲೀಸ್ ನಿರೀಕ್ಷಕ ಸುನಿಲ್ ಅಂಬುರೆ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ಸುಹಾಸ್ ಕಾಯಟೆ ಸ್ಥಳೀಯರ ನೆರವಿನೊಂದಿಗೆ ವೇಗವಾಗಿ ತಿರುಗುತ್ತಿದ್ದ ಜೈಂಟ್ ವೀಲ್ ಅನ್ನು ನಿಲ್ಲಿಸಿದ್ದಾರೆ.
ಬಳಿಕ ಮಹಿಳೆಯನ್ನು ಸುರಕ್ಷಿತವಾಗಿ ದೈತ್ಯಚಕ್ರದಿಂದ ಕೆಳಗಿಳಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ತ್ವರಿತ ಕ್ರಮದಿಂದ ಮತ್ತಷ್ಟು ದೊಡ್ಡ ಅನಾಹುತ ತಪ್ಪಿದೆ. ಈ ಘಟನೆ ಜಾತ್ರೆಗಳಲ್ಲಿ ಅಳವಡಿಸಲಾಗುವ ಮನರಂಜನಾ ಸವಾರಿಗಳ ಸುರಕ್ಷತಾ ಮಾನದಂಡಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.