ಕೂಚ್ ಬೆಹಾರ್ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ANI
ದೇಶ

ದೀದಿಗೆ ದಸರಾ ಶಾಕ್! ಬಿಜೆಪಿಗೆ ಜಿಗಿಯಲು ರೆಡಿಯಾದ್ರಾ ಟಿಎಂಸಿಯ 17 ಬಂಡಾಯ ಸಂಸದರು?

West Bengal Politics: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ಸಂಚಲನ: ಬಿಜೆಪಿ ಸೇರ್ಪಡೆಯಾಗಲು ರೆಡಿಯಾದ್ರಾ ಟಿಎಂಸಿಯ 17 ಭಿನ್ನಮತೀಯ ಸಂಸದರು? ಆ ಕುರಿತ ವರದಿ ಇಲ್ಲಿದೆ:

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ದಿನಕ್ಕೊಂದು ಹೊಸ ತಿರುವು ಕಾಣಸಿಗುತ್ತಿದೆ. ಅದರಂತೆ, ದುರ್ಗಾಪೂಜೆಯ ವೇಳೆಯಲ್ಲಿ  ತೃಣಮೂಲ ಕಾಂಗ್ರೆಸ್ ತೊರೆದು ಪ್ರತ್ಯೇಕ ಗುಂಪು ಕಟ್ಟಿಕೊಂಡು, ಇದೀಗ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಸೇರಿರುವ ಪಕ್ಷದ 20 ಸಂಸದರ ಪೈಕಿ 17 ಮಂದಿ ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ ಸೇರಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಬಂಡಾಯ ನಾಯಕ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ಅವರು ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬಿಜೆಪಿಗೆ ಟಿಎಂಸಿಯ 17 ಸಂಸದರು!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷ ಸೋತ ನಂತರ ಪಕ್ಷದಲ್ಲಿ ಭಾರಿ ಬಂಡಾಯವೆದ್ದಿತ್ತು. ಇದರ ಪರಿಣಾಮ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಟಿಎಂಸಿಯ 20 ಲೋಕಸಭಾ ಸಂಸದರು ಬಂಡಾಯವೆದ್ದು, ಜೂನ್ 14 ರಂದು ಸಣ್ಣ ಪ್ರಾದೇಶಿಕ ಪಕ್ಷವಾದ ಎನ್‌ಸಿಪಿಐ ನೊಂದಿಗೆ ವಿಲೀನಗೊಂಡು ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ಘೋಷಿಸಿದ್ದರು. ಆದ್ರೆ, ಈ 20 ಸಂಸದರಲ್ಲಿ 17 ಮಂದಿ ಮಾತ್ರ ನೇರವಾಗಿ ಬಿಜೆಪಿಗೆ ಸೇರಲಿದ್ದಾರೆ ಎನ್ನಲಾಗಿದ್ದು, ಉಳಿದ ಮೂವರು ಮುಸ್ಲಿಂ ಸಮುದಾಯದ ಸಂಸದರಾದ ಯೂಸುಫ್ ಪಠಾಣ್, ಅಬು ತಾಹೇರ್ ಖಾನ್ ಮತ್ತು ಖಲೀಲೂರ್ ರೆಹಮಾನ್ ಅವರು ತಮ್ಮ ಕ್ಷೇತ್ರಗಳ ರಾಜಕೀಯ ಪರಿಸ್ಥಿತಿಯ ಕಾರಣದಿಂದಾಗಿ ನೇರವಾಗಿ ಬಿಜೆಪಿ ಸೇರುತ್ತಿಲ್ಲ. ಆದರೆ, ಅವರು ಎನ್‌ಡಿಎ ಒಕ್ಕೂಟಕ್ಕೆ ಹೊರಗಿನಿಂದ ಬೆಂಬಲ ನೀಡಲಿದ್ದಾರೆ ಮತ್ತು ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗುತ್ತದೆ ಎಂದು ಬಸುನಿಯಾ ತಿಳಿಸಿದ್ದಾರೆ.

ಹಾಗಾದ್ರೆ, ಪಕ್ಷಾಂತರ ನಿರೋಧಕ ಕಾಯ್ದೆಯಿಂದ ರಕ್ಷಣೆ ಹೇಗೆ?

ಕಾನೂನಿನ ಪ್ರಕಾರ, ಒಂದು ಪಕ್ಷದ ಮೂರನೇ ಎರಡರಷ್ಟು (2/3) ಭಾಗದಷ್ಟು ಶಾಸಕರು ಅಥವಾ ಸಂಸದರು ಒಟ್ಟಿಗೆ ಬೇರೆ ಪಕ್ಷ ಸೇರಿದರೆ ಅವರ ಸದಸ್ಯತ್ವ ರದ್ದಾಗುವುದಿಲ್ಲ. ಪ್ರಸ್ತುತ ಎನ್‌ಸಿಪಿಐನ 20 ಸಂಸದರ ಪೈಕಿ ಕಾನೂನು ರಕ್ಷಣೆಗೆ ಕನಿಷ್ಠ 14 ಸಂಸದರ ಬೆಂಬಲ ಬೇಕು. ಆದರೆ ಈಗ 17 ಸಂಸದರು ಒಟ್ಟಿಗೆ ಬಿಜೆಪಿ ಸೇರುತ್ತಿರುವುದರಿಂದ ಅವರ ಮೇಲೆ ಪಕ್ಷಾಂತರ ನಿರೋಧಕ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಬಸುನಿಯಾ ವಾದಿಸಿದ್ದಾರೆ.

ಮತ್ತೊಂದೆಡೆ, ಬಸುನಿಯಾ ಅವರ ಈ ಹೇಳಿಕೆಯನ್ನು ಇನ್ನಿಬ್ಬರು ಬಂಡಾಯ ಸಂಸದರಾದ ಶತಾಬ್ದಿ ರಾಯ್ ಮತ್ತು ಅಬು ತಾಹರ್ ಖಾನ್ ಅವರು ನಿರಾಕರಿಸಿದ್ದು, ಇದು ಅವರ ವೈಯಕ್ತಿಕ ಹೇಳಿಕೆಯಷ್ಟೇ ಎಂದು ಹೇಳಿದ್ದಾರೆ. ಇತ್ತ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರೂ ಸಹ ತಕ್ಷಣಕ್ಕೆ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು, "ಯಾರೋ ಸೇರಲು ಬಯಸಿದ ತಕ್ಷಣ ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.

ಏತನ್ಮಧ್ಯೆ, ಈ 20 ಸಂಸದರ ಗುಂಪಿನ ಕಾನೂನು ಮಾನ್ಯತೆಯ ಹೋರಾಟ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ. ಲೋಕಸಭೆಯ ದಾಖಲೆಗಳಲ್ಲಿ ಇಂದಿಗೂ ಇವರನ್ನು ಟಿಎಂಸಿ ಸದಸ್ಯರೆಂದೇ ಉಲ್ಲೇಖಿಸಲಾಗಿದೆ. ಇವರನ್ನು ಅನರ್ಹಗೊಳಿಸುವಂತೆ ಕೋರಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಅವರು ಈ ಸಂಸದರಿಗೆ ನೋಟಿಸ್ ನೀಡಿದ್ದು, ಉತ್ತರಿಸಲು ಸೆಪ್ಟೆಂಬರ್ 22, 2026 ರವರೆಗೆ ಕಾಲಾವಕಾಶ ನೀಡಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ದಿಶಾ ಸಾಲಿಯನ್ ಸಾವು ಪ್ರಕರಣದಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಹೆಸರು; ಎಫ್‌ಐಆರ್ ದಾಖಲಿಸಿದ CBI!

ಬಿಜೆಪಿ ಆಗ್ರಹಿಸಿದಂತೆ ಇನ್ಸ್​ಪೆಕ್ಟರ್​ ಧನಂಜಯ್​ನನ್ನು ಅಮಾನತು ಮಾಡೋಕ್ಕಾಗಲ್ಲ: ಪ್ರಿಯಾಂಕ್ ಖರ್ಗೆ

BBK 13: ನಿನ್ನನ್ನು ಎತ್ತಿ ಕುಕ್ಕಿ ಬಿಡ್ತೀನಿ.. ಸೌಂದರ್ಯಗೆ ಮಂಜು ಆವಾಜ್; 'Biggboss' ಮನೆಯಲ್ಲಿ ಕೈ ಮೀರಿದ ಪರಿಸ್ಥಿತಿ!

'ಅಮೆರಿಕ ಅಧ್ಯಕ್ಷರೂ ಕೂಡ ಕಾಪಿ ಮಾಡುತ್ತಿದ್ದಾರೆ': ಗ್ಯಾರಂಟಿ ಯೋಜನೆಗಳ ಬಗ್ಗೆ ಡಿಕೆ ಶಿವಕುಮಾರ್, Video