ನವದೆಹಲಿ: ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ವಹಿವಾಟುಗಳಲ್ಲಿ ₹2,000ಕ್ಕಿಂತ ಹೆಚ್ಚಿನ UPI ಪಾವತಿಗೆ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸಲ್ಲಿಸಲಾಗಿದೆ.
ಸೂಕ್ತ ಶಾಸನಬದ್ಧ ರಕ್ಷಣೆಗಳು, ಪಾರದರ್ಶಕತೆ ಅಥವಾ ಜನರೊಂದಿಗೆ ಸಮಾಲೋಚನೆಯಿಲ್ಲದೆ ಈ ಶುಲ್ಕವನ್ನು ಜಾರಿಗೆ ತರಲಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಅಕ್ಟೋಬರ್ 15 ರಿಂದ ವ್ಯಾಪಾರಿಗಳಿಗೆ (ಮರ್ಚೆಂಟ್‌ಗಳಿಗೆ) ₹ 2,000 ರೂ.ಗಿಂತ ಹೆಚ್ಚಿನ UPI ಪಾವತಿಗಳ ಮೇಲೆ ಸರ್ಕಾರ ಶೇಕಡಾ 0.4 ರಷ್ಟು ಶುಲ್ಕವನ್ನು ವಿಧಿಸಿದೆ. ಇದರಡಿ 2,000 ರೂ.ಗಿಂತ ಹೆಚ್ಚಿನ ಮೌಲ್ಯದ 'ವ್ಯಕ್ತಿಯಿಂದ ವ್ಯಾಪಾರಿಗೆ' ನಡೆಯುವ ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು MDR ವಿಧಿಸಲಾಗುತ್ತದೆ.
ಆದಾಗ್ಯೂ, 2,000 ರೂ.ವರೆಗಿನ UPI ವಹಿವಾಟುಗಳ ಮೇಲೆ ಯಾವುದೇ MDR ವಿಧಿಸಲಾಗುವುದಿಲ್ಲ.
ಸೆಪ್ಟೆಂಬರ್ 14 ರಂದು ಹೊರಡಿಸಲಾದ ಕೇಂದ್ರ ಸರ್ಕಾರದ ಅಧಿಸೂಚನೆ ಮತ್ತು ಸೆಪ್ಟೆಂಬರ್ 15 ರಂದು ಘೋಷಿಸಲಾದ MDR ನಿಯಮವನ್ನು (ಇದು ಅಕ್ಟೋಬರ್ 15 ರಿಂದ ಜಾರಿಗೆ ಬರುತ್ತದೆ) ಪ್ರಶ್ನಿಸಿ ವಕೀಲ ಅಂಜನ್ ದತ್ತಾ ಎಂಬುವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಹೊಸ ಯುಪಿಐ ಶುಲ್ಕ ಅನ್ವಯ ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ 2,000 ರೂ.ಗಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು MDR ವಿಧಿಸಲಾಗುತ್ತದೆ. ಆದರೆ 75,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ 300 ರೂ.ಗೆ ನಿಗದಿಪಡಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.