ನವದೆಹಲಿ: ಭಾರತವು ಜನಸಂಖ್ಯೆ ನಿಯಂತ್ರಣವನ್ನು ಸರ್ಕಾರದ ನೀತಿಯ ಮುಖ್ಯ ಉದ್ದೇಶವಾಗಿ ಮುಂದುವರಿಸುವುದನ್ನು ಬಿಟ್ಟು, ದೇಶದ ಬದಲಾಗುತ್ತಿರುವ ಜನಸಂಖ್ಯಾ ಚಿತ್ರಣಕ್ಕೆ ತಕ್ಕಂತೆ ತನ್ನ ಕುಟುಂಬ ಯೋಜನೆ ಚೌಕಟ್ಟನ್ನು ಮರುರೂಪಿಸಬೇಕು ಎಂದು ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ (EAC-PM) ಸದಸ್ಯ ಸಂಜೀವ್ ಸನ್ಯಾಲ್ ಹೇಳಿದ್ದಾರೆ.
ಸನ್ಯಾಲ್ ಅವರು 'ದಿ ಘೋಸ್ಟ್ ಆಫ್ ಪಾಪ್ಯುಲೇಷನ್ ಪಾಸ್ಟ್: ಹೌ ಪಾಪ್ಯುಲೇಷನ್ ಕಂಟ್ರೋಲ್ ಪರ್ಸಿಸ್ಟ್ಸ್ ಇನ್ ಇಂಡಿಯಾ' ಎಂಬ ವರದಿಯನ್ನು ಹಂಚಿಕೊಂಡಿದ್ದಾರೆ. ಈ ವರದಿಯನ್ನು EAC-PM ನಿರ್ದೇಶಕಿ ಆಕಾಂಕ್ಷಾ ಅರೋರಾ ಮತ್ತು ಸಲಹೆಗಾರ ವಿರಾಟ್ ಸಿಂಗ್ ಸಹ-ಬರಹಗಾರರಾಗಿ ಸಿದ್ಧಪಡಿಸಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಸಂತಾನೋತ್ಪತ್ತಿ ದರವು (TFR) ಭರ್ತಿಯಾಗುವ/ಪುನರಾವರ್ತನೆಯಾಗುವ ಮಟ್ಟಕ್ಕಿಂತ (Replacement level) ಗಣನೀಯವಾಗಿ ಕುಸಿದಿದೆ ಎಂದು ವರದಿ ಎಚ್ಚರಿಸಿದೆ. ಇದು ಜನಸಂಖ್ಯಾ ಚಿತ್ರಣದ ಬದಲಾವಣೆಯ ಕುರಿತು ಕಳವಳವನ್ನು ಮೂಡಿಸಿದೆ.
ಭಾರತದಲ್ಲಿ ವಾರ್ಷಿಕ ಶಿಶುಗಳ ಜನನ ಸಂಖ್ಯೆ 2001ರಲ್ಲಿ ಸುಮಾರು 2.9 ಕೋಟಿಗೆ ತಲುಪಿ ಗರಿಷ್ಠವಾಗಿತ್ತು. ಆದರೆ ಪ್ರಸ್ತುತ ಅದು 2.3 ಕೋಟಿಗಿಂತ ಕಡಿಮೆಗೆ ಕುಸಿದಿದೆ ಎಂದು ಲೇಖಕರು ತಿಳಿಸಿದ್ದಾರೆ. ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿರುವುದರಿಂದ ಮತ್ತು ಸುಧಾರಿತ ಆರೋಗ್ಯ ಹಾಗೂ ಜೀವನಮಟ್ಟದಿಂದ ಜೀವಿತಾವಧಿ ಹೆಚ್ಚಿರುವುದರಿಂದ ಜನಸಂಖ್ಯೆ ಇನ್ನೂ ಬೆಳೆಯುತ್ತಿದೆ.
ಭಾರತದ ಸಂತಾನೋತ್ಪತ್ತಿ ದರವು ಭರ್ತಿಯಾಗುವ ಮಟ್ಟಕ್ಕಿಂತ ಕಡಿಮೆಯಿದ್ದು, ದೇಶದ ಕೆಲವು ಭಾಗಗಳು ಈಗ ಪೂರ್ವ ಏಷ್ಯಾ ಮತ್ತು ಯುರೋಪ್ ಮಟ್ಟದ ಕಡಿಮೆ ದರವನ್ನು ಹೊಂದಿವೆ ಎಂದು ಸನ್ಯಾಲ್ ಹೇಳಿದ್ದಾರೆ.
ಇನ್ನೂ ಕೆಲವು ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣ ಕ್ರಮಗಳು ಸರ್ಕಾರದ ನೀತಿಗಳಲ್ಲಿ ಉಳಿದುಕೊಂಡಿವೆ. ಈ ನೀತಿಗಳು ಮತ್ತು ಪ್ರಸ್ತುತ ಜನಸಂಖ್ಯಾ ಪರಿಸ್ಥಿತಿಯ ನಡುವಿನ ವ್ಯತ್ಯಾಸವನ್ನು ಸರಿಪಡಿಸಬೇಕಾಗಿದೆ ಎಂದು ವರದಿ ಹೇಳುತ್ತದೆ. ಚೀನಾದಲ್ಲಿ ಹಾನಿಕಾರಕ ಪರಿಣಾಮಗಳು ಕಂಡರೂ ವರ್ಷಗಳ ಕಾಲ ಜನಸಂಖ್ಯೆ ನಿಯಂತ್ರಣ ಮುಂದುವರಿಸಿದ್ದನ್ನು ಉದಾಹರಿಸಿರುವ ವರದಿ, ಭಾರತ ಹಳೆಯ ನೀತಿಗಳನ್ನು ಮುಂದುವರಿಸಿದರೆ ಅಂತಹ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಆರೋಗ್ಯ, ಹೆರಿಗೆಗಳ ನಡುವಿನ ಅಂತರ ಅಥವಾ ವೈಯಕ್ತಿಕ ಆಯ್ಕೆಗಾಗಿ ಮಾಡುವ ಕುಟುಂಬ ಯೋಜನೆಯನ್ನು ವರದಿ ವಿರೋಧಿಸುವುದಿಲ್ಲ. ಆದರೆ, ಜನಸಂಖ್ಯೆ ನಿಯಂತ್ರಣವನ್ನು ಸರ್ಕಾರದ ನೀತಿಯ ಪ್ರಾಥಮಿಕ ಉದ್ದೇಶವನ್ನಾಗಿ ಮಾಡಬಾರದು ಎಂಬುದೇ ಇದರ ಮುಖ್ಯ ವಾದವಾಗಿದೆ.
ವಿವಿಧ ರಾಜ್ಯಗಳ ಸಂತಾನೋತ್ಪತ್ತಿ ದರ (TFR):
1.2: ದೆಹಲಿ
1.3: ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ
1.4: ಆಂಧ್ರಪ್ರದೇಶ, ಪಂಜಾಬ್, ಮಹಾರಾಷ್ಟ್ರ
1.5: ಕರ್ನಾಟಕ, ಹಿಮಾಚಲ ಪ್ರದೇಶ
1.6: ಗೋವಾ
ಈ ರಾಜ್ಯಗಳ ಸರಾಸರಿ ಸಂತಾನೋತ್ಪತ್ತಿ ದರ ಸುಮಾರು 1.4 ಆಗಿದ್ದು, ಇವುಗಳ ಸರಾಸರಿ ವಯಸ್ಸು 35 ವರ್ಷಗಳಷ್ಟಿದೆ. ಭಾರತದ ರಾಷ್ಟ್ರೀಯ ಸರಾಸರಿ ವಯಸ್ಸು 30 ಆಗಿದ್ದರೆ, ಈ ರಾಜ್ಯಗಳ ಸ್ಥಿತಿ ಚೀನಾ ಮತ್ತು ಅಮೆರಿಕದಂತಹ ವಯಸ್ಸಾಗುತ್ತಿರುವ ಅರ್ಥವ್ಯವಸ್ಥೆಗಳಿಗೆ ಹತ್ತಿರವಾಗಿದೆ.
ಭಾರತದಲ್ಲಿ ಜನಸಂಖ್ಯಾ ಸ್ಫೋಟದ ಭೀತಿ ಇಲ್ಲ ಮತ್ತು ಸಂತಾನೋತ್ಪತ್ತಿ ದರವು ನೈಸರ್ಗಿಕವಾಗಿ ಕುಸಿಯುತ್ತಿದೆ. ಹೀಗಾಗಿ ಜನಸಂಖ್ಯೆಯನ್ನು ಮತ್ತಷ್ಟು ನಿಯಂತ್ರಿಸುವ ಪ್ರಯತ್ನಗಳು ದೇಶವನ್ನು ವೇಗವಾಗಿ ವೃದ್ಧಾಪ್ಯದ ಸಮಾಜವನ್ನಾಗಿ ಮಾಡಬಹುದು ಎಂದು ವರದಿ ಎಚ್ಚರಿಸಿದೆ.