ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ- ಮಮತಾ ಬ್ಯಾನರ್ಜಿ online desk
ದೇಶ

ಬಂಗಾಳ Bypoll: ಕ್ಷಣಕ್ಕೊಂದು ತಿರುವು; ನಾಮಪತ್ರ ಹಿಂತೆಗೆತ ಘೋಷಿಸಿದ್ದ ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ ಯು-ಟರ್ನ್!

ರಾಜ್ಯ ಆಡಳಿತ ಪಕ್ಷದ ಕಾರ್ಯಕರ್ತರನ್ನು ಕಿರುಕುಳಕ್ಕೊಳಪಡಿಸುತ್ತಿದೆ ಎಂದು ಆರೋಪಿಸಿ, ಶನಿವಾರ ಬೆಳಿಗ್ಗೆ ಚೌಧರಿ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹೈಡ್ರಾಮಾಗೆ ಕೊನೆಯೇ ಇಲ್ಲದಂತಾಗಿದೆ. ರೆಜಿನಗರ್ ಉಪಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ, ಮಮತಾ ಬ್ಯಾನರ್ಜಿ ಅವರ ಬಣದ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ ತಮ್ಮ ನಿರ್ಧಾರವನ್ನು ಬದಲಾಯಿಸಿ, ತಾವು ಸ್ಪರ್ಧೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.

ರಾಜ್ಯ ಆಡಳಿತ ಪಕ್ಷದ ಕಾರ್ಯಕರ್ತರನ್ನು ಕಿರುಕುಳಕ್ಕೊಳಪಡಿಸುತ್ತಿದೆ ಎಂದು ಆರೋಪಿಸಿ, ಶನಿವಾರ ಬೆಳಿಗ್ಗೆ ಚೌಧರಿ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.

"ಸದ್ಯಕ್ಕೆ ಪಕ್ಷಕ್ಕೆ ಯಾವುದೇ ಅಧಿಕೃತ ಚಿಹ್ನೆ ಇಲ್ಲ. ಪಕ್ಷದ ಕಾರ್ಯಕರ್ತರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಮತ್ತು ಅವರಲ್ಲಿ ಹೆಚ್ಚಿನವರು ಕೆಲಸದ ನಿಮಿತ್ತ ಆ ಪ್ರದೇಶವನ್ನು ತೊರೆದಿದ್ದಾರೆ. ನಾನು ಯಾರೊಂದಿಗೆ ಚುನಾವಣೆ ಎದುರಿಸಲಿ? ಆಡಳಿತದ ಒತ್ತಡದಿಂದಾಗಿ, ತಾವು ಚುನಾವಣಾ ಕಣದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಅದಕ್ಕಾಗಿಯೇ ನಾನು ನನ್ನ ನಾಮಪತ್ರವನ್ನು ಹಿಂಪಡೆಯಲು ನಿರ್ಧರಿಸಿದ್ದೆ," ಎಂದು ಅವರು ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

ಆದರೆ ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ಬದಲಾಯಿತು. ಮಮತಾ ಬ್ಯಾನರ್ಜಿ ಅವರ ಬಣದ (ಇದೀಗ 'ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' ಅಥವಾ MAITC ಎಂದು ಕರೆಯಲ್ಪಡುತ್ತಿದೆ) ಹಿರಿಯ ನಾಯಕರನ್ನು ಭೇಟಿಯಾದ ನಂತರ, ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಚೌಧರಿ ಹೇಳಿದರು.

ಮಮತಾ ಬ್ಯಾನರ್ಜಿ ಅವರ ಒತ್ತಾಯದ ಮೇರೆಗೆ ತಾವು ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡಿರುವುದಾಗಿ ಅವರು ತಿಳಿಸಿದರು. "ಮಮತಾ ಬ್ಯಾನರ್ಜಿ ಅವರ ಸೂಚನೆಯ ಮೇರೆಗೆ ನಾನು ನನ್ನ ಉಮೇದುವಾರಿಕೆಯನ್ನು ಹಿಂಪಡೆಯುವ ನಿರ್ಧಾರವನ್ನು ಬದಲಾಯಿಸುತ್ತಿದ್ದೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಮಮತಾ ಬ್ಯಾನರ್ಜಿ ನನ್ನೊಂದಿಗೆ ಮಾತನಾಡಿದ ನಂತರ ನಾನು ನನ್ನ ನಿರ್ಧಾರವನ್ನು ಮರುಪರಿಶೀಲಿಸಿದೆ," ಎಂದು ಅವರು ಹೇಳಿದರು.

ನಂದಿಗ್ರಾಮ ಮತ್ತು ರೆಜಿನಗರ್ ಎರಡೂ ಕ್ಷೇತ್ರಗಳಲ್ಲಿ ಅಕ್ಟೋಬರ್ 6 ರಂದು ಉಪಚುನಾವಣೆ ನಡೆಯಲಿದೆ.

ಇದಕ್ಕೂ ಮುನ್ನ ಶುಕ್ರವಾರ, ಮಮತಾ ಬ್ಯಾನರ್ಜಿ ಅವರ ಬಣದ ನಂದಿಗ್ರಾಮ ಕ್ಷೇತ್ರದ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ಅವರು ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ನಂತರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರು. ಶುಕ್ರವಾರ ಸಂಚಿತಾ ಪ್ರಧಾನ್ ನಂದಿಗ್ರಾಮ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.

ನಂದಿಗ್ರಾಮ ಉಪಚುನಾವಣೆಯಿಂದ ತಮ್ಮದೇ ಅಭ್ಯರ್ಥಿ ಹಿಂದೆ ಸರಿದ ನಂತರ, ಮಮತಾ ಬ್ಯಾನರ್ಜಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಆದರೆ ಆ ಅನಿರೀಕ್ಷಿತ ನಡೆಗೂ ಹಿನ್ನಡೆಯುಂಟಾಯಿತು; ಏಕೆಂದರೆ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು 2007ರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಂಜೆ ಬಂಧಿಸಲಾಯಿತು.

ಗುರುವಾರ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿತ್ತು; ಚುನಾವಣಾ ಆಯೋಗ ತೃಣಮೂಲದ ಹೆಸರು ಮತ್ತು ಚಿಹ್ನೆಯನ್ನು ತಡೆಹಿಡಿಯುವುದಾಗಿ (ಫ್ರೀಜ್ ಮಾಡುವುದಾಗಿ) ಘೋಷಿಸಿತ್ತು. ಹೀಗಾಗಿ, ಮಮತಾ ಬ್ಯಾನರ್ಜಿ ಅವರ ಬಣವಾಗಲಿ ಅಥವಾ ಋತಬ್ರತಾ ಬ್ಯಾನರ್ಜಿ ಅವರ ಗುಂಪಾಗಲಿ ಉಪಚುನಾವಣೆಗಳಲ್ಲಿ ಅವುಗಳನ್ನು ಬಳಸುವಂತಿರಲಿಲ್ಲ.

ನಂತರ ಚುನಾವಣಾ ಆಯೋಗವು ಮಧ್ಯಂತರ ವ್ಯವಸ್ಥೆಯಾಗಿ ಎರಡೂ ಬಣಗಳಿಗೆ ಹೊಸ ಹೆಸರುಗಳು ಮತ್ತು ಚಿಹ್ನೆಗಳನ್ನು ಹಂಚಿಕೆ ಮಾಡಿತು. ಮಮತಾ ಬ್ಯಾನರ್ಜಿ ಅವರ ಬಣವನ್ನು ಈಗ 'ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' ಎಂದು ಕರೆಯಲಾಗುತ್ತಿದ್ದು, ಅದಕ್ಕೆ 'ಫುಟ್‌ಬಾಲ್ ಆಟಗಾರ' ಚಿಹ್ನೆಯನ್ನು ನೀಡಲಾಗಿದೆ. ಅರೂಪ್ ರಾಯ್ ಮತ್ತು ರಿತಬ್ರತ ಬ್ಯಾನರ್ಜಿ ನೇತೃತ್ವದ ಗುಂಪಿಗೆ 'ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್' ಎಂಬ ಹೆಸರು ಮತ್ತು 'ಲಕೋಟೆ' (ಎನ್ವಲಪ್) ಚಿಹ್ನೆಯನ್ನು ನೀಡಲಾಗಿದೆ.

ಪೈಪೋಟಿ ನಡೆಸುತ್ತಿರುವ ಗುಂಪುಗಳ ನಡುವೆ ತೃಣಮೂಲ ಕಾಂಗ್ರೆಸ್‌ನ ಹೆಸರು ಮತ್ತು ಚಿಹ್ನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಸ್ತೂರಿರಂಗನ್ ವರದಿಯ ಭೌತಿಕ ಸಮೀಕ್ಷೆ ಬಗ್ಗೆ ಜನರ ಅಹವಾಲು ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ: ಸಿಎಂ; Video

ದೀದಿಗೆ ದಿನಕ್ಕೊಂದು ಶಾಕ್; ನಂದೀಗ್ರಾಮದ ಬಳಿಕ ಕೈಕೊಟ್ಟ ರೆಜಿನಗರ ಉಪಚುನಾವಣೆ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ; ನಾಮಪತ್ರ ವಾಪಸ್

ವಿದೇಶಿ ನೌಕರರ ನೇಮಕಾತಿಗೆ ಅಮೆರಿಕ ಕತ್ತರಿ: H-1B ವೀಸಾ ನಿರ್ಬಂಧ ಮತ್ತೊಂದು ವರ್ಷಕ್ಕೆ ವಿಸ್ತರಣೆ..!

UPI MDR: ಗ್ರಾಹಕರಿಗೆ ಮತ್ತೊಂದು ತಲೆ ಬಿಸಿ; ಇನ್ನು ಮುಂದೆ ಪೆಟ್ರೋಲ್ ಪಂಪ್ ಗಳಲ್ಲಿ 2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿ ಬಂದ್!

ಕನ್ನಡ ವರ್ಣಮಾಲೆ ಬರೆಯಲು ಬಾರದ ವಿದ್ಯಾರ್ಥಿಗಳ ಕಂಡು ಪ್ರದೀಪ್ ಈಶ್ವರ್ ಶಾಕ್: ಶಾಸಕರ ಸೂಚನೆಯಂತೆ 180 ಶಿಕ್ಷಕರಿಗೆ BEO ನೋಟಿಸ್!