ನವದೆಹಲಿ: ರೂ. 2,000 ಕ್ಕಿಂತ ಹೆಚ್ಚಿನ ನಿರ್ದಿಷ್ಟ ಯುಪಿಐ (UPI) ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಈ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ನ್ಯಾಯಾಲಯ, ಇದು ಕಾನೂನು ಚೌಕಟ್ಟಿಗಿಂತ ಹೆಚ್ಚಾಗಿ ತಾಂತ್ರಿಕ ಮತ್ತು ಆರ್ಥಿಕ ನೀತಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಜೊತೆಗೆ, ಈ ವ್ಯವಸ್ಥೆಯ ಕುರಿತು ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಎನ್‌ಪಿಸಿಐ (NPCI) ಗೆ ನೋಟಿಸ್ ಜಾರಿ ಮಾಡಿದೆ. ಇದರಿಂದಾಗಿ ಅಕ್ಟೋಬರ್ 15, 2026 ರಿಂದ ಜಾರಿಗೆ ಬರಲಿರುವ ಹೊಸ ನಿಯಮಕ್ಕೆ ಯಾವುದೇ ತಡೆಯಿಲ್ಲದಂತಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು ಪ್ರತಿವಾದಿಗಳು ನಾಲ್ಕು ವಾರಗಳೊಳಗೆ ಉತ್ತರಿಸುವಂತೆ ನಿರ್ದೇಶನ ನೀಡಿದೆ.
ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಹೊಸ ಎಂಆರ್‌ಡಿ ವ್ಯವಸ್ಥೆಯನ್ನು ಅಮಾನತುಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದರೂ, ಶುಲ್ಕ ವಿಧಿಸುವುದಕ್ಕೆ ಮಧ್ಯಂತರ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದೆ.
ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್, ಯುಪಿಐ ವ್ಯವಸ್ಥೆಯಲ್ಲಿನ ಶೇ.96ರಷ್ಟು ವಹಿವಾಟುಗಳು ಈ ಶುಲ್ಕದಿಂದ ಹೊರತಾಗಿಯೇ ಉಳಿಯಲಿವೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಇದು ಕಾನೂನು ವಿಚಾರಕ್ಕಿಂತ ತಾಂತ್ರಿಕ ವಿಚಾರವೇ ಹೆಚ್ಚು ಎಂದು ಅಭಿಪ್ರಾಯಪಟ್ಟಿತು.
ವಕೀಲ ಅಂಜನ್ ದತ್ತ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಹೆಚ್ಚಿನ ಮೊತ್ತದ ನಿರ್ದಿಷ್ಟ ಯುಪಿಐ ವ್ಯಾಪಾರಿ ವಹಿವಾಟುಗಳ ಮೇಲೆ ಎಂಆರ್‌ಡಿ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಹೊಸ ವ್ಯವಸ್ಥೆಯಡಿ, ಅಕ್ಟೋಬರ್ 15ರಿಂದ ರೂ.2,000ಕ್ಕಿಂತ ಹೆಚ್ಚಿನ ಅರ್ಹ ವ್ಯಕ್ತಿಯಿಂದ ವ್ಯಾಪಾರಿಗೆ ಯುಪಿಐ ಪಾವತಿಗಳ ಮೇಲೆ ಶೇ.0.4ರಷ್ಟು ಎಂಆರ್‌ಡಿ ವಿಧಿಸಲಾಗುತ್ತದೆ. ರೂ.75,000 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಈ ಶುಲ್ಕ ಗರಿಷ್ಠ ರೂ.300ಕ್ಕೆ ಸೀಮಿತವಾಗಿರುತ್ತದೆ.
ರೈಲ್ವೆ, ದೂರಸಂಪರ್ಕ, ವಿಮೆ, ಇಂಧನ ಮತ್ತು ಕೃಷಿ ಒಳಸುರಿಗಳಂತಹ ಅಗತ್ಯ ಹಾಗೂ ಕಡಿಮೆ ಲಾಭಾಂಶದ ವಲಯಗಳಲ್ಲಿ ರೂ.2,000ಕ್ಕಿಂತ ಹೆಚ್ಚಿನ ಪ್ರತಿ ವಹಿವಾಟಿಗೆ ₹5ರಷ್ಟು ನಿಗದಿತ ಎಂಆರ್‌ಡಿ ವಿಧಿಸಲಾಗುತ್ತದೆ.
ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಪತ್ರಗಳಲ್ಲಿ ಹೂಡಿಕೆ ಮಾಡುವ ಪಾವತಿಗಳು ಹಾಗೂ ಷೇರು ದಲ್ಲಾಳಿಗಳು ಮತ್ತು ಡೀಲರ್‌ಗಳ ಮೂಲಕ ನಡೆಯುವ ವಹಿವಾಟುಗಳಿಗೆ ಶೇ.0.02ರಷ್ಟು ಎಂಆರ್‌ಡಿ ವಿಧಿಸಲಾಗುತ್ತದೆ. ಇದಕ್ಕೂ ಗರಿಷ್ಠ ರೂ.300 ಮಿತಿ ನಿಗದಿಪಡಿಸಲಾಗಿದೆ.
ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಯುಪಿಐ ವಹಿವಾಟುಗಳು ವಹಿವಾಟಿನ ಮೊತ್ತ ಎಷ್ಟೇ ಇದ್ದರೂ ಉಚಿತವಾಗಿಯೇ ಮುಂದುವರಿಯಲಿವೆ. ಹೊಸ ಎಂಆರ್‌ಡಿ ವ್ಯವಸ್ಥೆಯು ದೈನಂದಿನ ಸಣ್ಣ ಮೊತ್ತದ ಪಾವತಿಗಳನ್ನು ಶುಲ್ಕದ ವ್ಯಾಪ್ತಿಯಿಂದ ಹೊರಗಿಡುವ ರೀತಿಯಲ್ಲಿ ರೂಪಿಸಲಾಗಿದೆ.