ರಾಜಕೀಯ

ಯಡಿಯೂರಪ್ಪಗೆ ರಾಜ್ಯಾಧ್ಯಕ್ಷ ಹುದ್ದೆ: ಕಾರ್ಯಕಾರಿಣಿಯಲ್ಲಿ ಬಿಎಸ್ ವೈ ಆಪ್ತರ ಲಾಬಿ

Vishwanath S

ಬೆಂಗಳೂರು: ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇಂದು ಆರಂಭಗೊಂಡಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡುವಂತೆ ಪಕ್ಷದ ಕೆಲವು ಪ್ರಮುಖ ಮುಖಂಡರು ಲಾಬಿ ನಡೆಸುತ್ತಿದ್ದಾರೆ.

ರಾಜ್ಯಸಭಾ ಸದಸ್ಯ, ಬಿಜೆಪಿ ಹಿರಿಯ ಮುಖಂಡ ಪ್ರಭಾಕರ್ ಕೋರೆ ತಮ್ಮ ನೇತೃತ್ವದಲ್ಲಿ 20 ಮಂದಿ ಶಾಸಕರುಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಅಲ್ಲದೆ 2018ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಒತ್ತಾಯಿಸಿರುವುದಾಗಿ ಹೇಳಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಕೆಲವು ಸದಸ್ಯರು ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಧ್ವನಿ ಎತ್ತಲಿದ್ದಾರೆ ಎಂದು ಕೋರೆ ಶುಕ್ರವಾರ ತಿಳಿಸಿದ್ದಾರೆ. ಯಡಿಯೂರಪ್ಪ ವಿಷಯ ಕುರಿತಂತೆ ಈಗಾಗಲೇ ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಚರ್ಚಿಸಿರುವುದಾಗಿ ಹೇಳಿದರು.

ನರೇಂದ್ರ ಮೋದಿ ಕ್ಯಾಬಿನೆಟ್ ನಲ್ಲಿ ಸ್ಥಾನ ಬೇಡ ಎಂದು ನಿರಾಕರಿಸಿದ ನಂತರ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಒಟ್ಟು 11 ಮಂದಿ ಉಪಾಧ್ಯಕ್ಷರುಗಳಲ್ಲಿ ಯಡಿಯೂರಪ್ಪ ಕೂಡಾ ಒಬ್ಬರಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸಕ್ರಿಯರಾಗದ ಯಡಿಯೂರಪ್ಪ, ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ಅವರನ್ನು ಭೇಟಿಯಾಗಿ ತನಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿ ಪಕ್ಷವನ್ನು ಬಲಪಡಿಸುವ ಅವಕಾಶ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು. 2018ರ ಚುನಾವಣೆಯಲ್ಲಿ ನಾನು ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ್ದರು ಎಂದು ವರದಿ ವಿವರಿಸಿದೆ.

SCROLL FOR NEXT