ಬೆಂಗಳೂರು: ಸಾಕು ಮೊಂಡಾಟ... ಸುಮ್ಮನೆ ಬಿಬಿಎಂಪಿ ಚುನಾವಣೆಗೆ ಕಣಕ್ಕಿಳಿಯಲು ಸಿದ್ಧರಾಗಿ. ಈ ರೀತಿ ಗುಡುಗು ಹಾಕಿ ರಾಜ್ಯ ಸರ್ಕಾರಕ್ಕೆ ರಣವೀಳ್ಯ ನೀಡಿರೋದು ಮಾಜಿ ಪ್ರಧಾನಿ ದೇವೇಗೌಡ.
ಬಿಬಿಎಂಪಿ ವಿಭಜನೆ ಮಾಡಿ ಚುನಾವಣೆ ಮುಂದೂಡುವ ಸಂಬಂಧ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಅಂಕಿತ ಹಾಕಬಾರದೆಂದು ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಿ ಒತ್ತಾಯಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಬಿಎಂಪಿ ವಿಭಜನೆ ಕುರಿತು ತಜ್ಞರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ಇನ್ನೂ ಅಂತಿಮ ವರದಿಯನ್ನೇ ಸಲ್ಲಿಸಿಲ್ಲ. ಇದೇ ವೇಳೆ ರಾಜ್ಯ ಚುನಾವಣಾ ಆಯೋಗ ಕೂಡ ಚುನಾವಣೆ ಪ್ರಕ್ರಿಯೆ ಆರಂಭಿಸಿದೆ. ಇದರೊಂದಿಗೆ ಹೈಕೋರ್ಟ್ ಕೂಡ ಛೀಮಾರಿ ಹಾಕಿದೆ. ಹೀಗಿರುವಾಗ ಸರ್ಕಾರ ಕುಂಟು ನೆಪಗಳನ್ನು ಹೇಳಿ ಚುನಾವಣೆ ಮುಂದೂಡುವುದು ಸರಿಯಲ್ಲ. ಇದು ಸರ್ಕಾರಕ್ಕೆ ಗೌರವ ತರುವುದಿಲ್ಲ. ಆದ್ದರಿಂದ ಕೂಡಲೇ ಚುನಾವಣೆಗೆ ಸಜ್ಜಾಗುವುದು ಒಳ್ಳೆಯದು ಎಂದರು.
ಈ ಹಿಂದೆ ಜೆಡಿಎಸ್ ನೇತೃತ್ವದ ಸರ್ಕಾರವಿದ್ದಾಗ ಅನೇಕ ಪುರಸಭೆ ಮತ್ತು ಹಳ್ಳಿಗಳನ್ನು ಸೇರಿಸಿ ಬಿಬಿಎಂಪಿ ಮಾಡಲಾಗಿತ್ತು. ಇದಕ್ಕಾಗಿ ನಾವು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದ್ದೆವು. ಈ ಬಗ್ಗೆ ಉಭಯ ಸದನಗಳಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಗಿತ್ತು. ಆದರೆ, ಈಗಿನ ಸರ್ಕಾರ ಏಕಾಏಕಿ ಬಿಬಿಎಂಪಿ ವಿಭಜನೆಗೆ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಮಹದೇವಪ್ಪ, ಶ್ರೀನಿವಾಸಪ್ರಸಾದ್, ದೇಶಪಾಂಡೆ ಸೇರಿದಂತೆ ಅನೇಕ ಹಿರಿಯ ಸಚಿವರಿದ್ದಾರೆ. ಆದಾಗ್ಯೂ ತಜ್ಞರ ಸಮಿತಿ ವರದಿ ಬರುವ ಮುನ್ನ ಸರ್ಕಾರ ವಿಭಜನೆಗೆ ಮುಂದಾಗಿರುವುದು ಎಷ್ಟು ಸರಿ, ಇದೇನು ಹುಡುಗಾಟವೇ ಎಂದು ಪ್ರಶ್ನಿಸಿದರು.
ಎಲ್ಲಾ ಮಹಿಳಾ ಮೀಸಲಾದರೆ ಪುರುಷರು ಎಲ್ಲಿ ಹೋಗಬೇಕು?
ರಾಜ್ಯ ಸರ್ಕಾರ ಬರೀ ವಿಭಜನೆ ಮಾತ್ರವಲ್ಲ, ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಚುನಾವಣೆಗೆ ವಾರ್ಡ್ ಮೀಸಲು ಪಟ್ಟಿ ಪ್ರಕಟಿಸಿದೆ. ಆದರೆ ಇದು ಸಂಪೂರ್ಣ ಅವೈಜ್ಞಾನಿಕ, ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲದಂತಾಗಿದೆ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಇತ್ತು. ಆದರೆ, ಶೇ.50ರಷ್ಟು ಮೀಸಲು ಇರುವುದು ನನಗೆ ಗೊತ್ತಿಲ್ಲ. ಆದರೆ ಸರ್ಕಾರ ಎಲ್ಲಾ ಕಡೆ ಪುರುಷರಿದ್ದೆಡೆ ಮಹಿಳೆಯರನ್ನು ಹಾಕಿ ಸ್ಪರ್ಧೆಗಿಳಿಯದಂತೆ ಮಾಡಿದೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ 8 ವಾರ್ಡ್ ಗಳಿದ್ದರೆ, 7 ವಾರ್ಡ್‍ಗಳಿಗೆ ಬರೀ ಮಹಿಳೆಯರಿಗೇ ಮೀಸಲು ನೀಡಲಾಗಿದೆ. ಹೀಗಾದರೆ ಪುರುಷ ಅಭ್ಯರ್ಥಿಗಳು ಎಲ್ಲಿ ಹೋಗುವುದು? ಇದು ಸರಿಯೇ. ನಿಜಕ್ಕೂ ಸರ್ಕಾರಕ್ಕೆ ಸದುದ್ದೇಶವಿದ್ದರೆ ಹೀಗೆ ಮಾಡುತ್ತಿತ್ತೇ ಎಂದು ದೇವೇಗೌಡ ಪ್ರಶ್ನಿಸಿದ್ದಾರೆ.
ಇಷ್ಟು ದಿನ ಏಕೆ ಸುಮ್ಮನಿದ್ದೀರಿ?
ಸರ್ಕಾರ ಬಿಬಿಎಂಪಿಯನ್ನು ವಿಭಜನೆ ಮಾಡಲೇಬೇಕಾದರೆ ಇಷ್ಟು ದಿನ ಏನು ಮಾಡುತ್ತಿತ್ತು? ಎರಡು ವರ್ಷಗಳ ಹಿಂದೆಯೇ ವಿಭಜನೆ ಪ್ರಕ್ರಿಯೆ ಆರಂಭಿಸಬೇಕಿತ್ತಲ್ಲವೇ? ಇದನ್ನು ಸದನದಲ್ಲಿ
ಚರ್ಚೆಗೆ ಬಿಡಬೇಕಿತ್ತಲ್ಲವೇ? ಈಗ ಚುನಾವಣೆ ಪ್ರಕ್ರಿಯೆ ಆರಂಭವಾಗಿರುವಾಗ ಐಎಎಸ್ ಅಧಿಕಾರಿಯಿಂದ ತನಿಖೆ ನಡೆಸುವುದು, ಅದನ್ನಾಧರಿಸಿ ಸೂಪರ್ ಸೀಡ್ ಅಥವಾ ವಿಭಜನೆ ಪ್ರಯತ್ನ ಮಾಡುವುದು ಸರಿಯಲ್ಲ. ಅದೂ ಕುಡಿಯುವ ನೀರಿಗಾಗಿ, ರಸ್ತೆ ರಿಪೇರಿಗಾಗಿ ಎಂಬ ನೆಪ ಹೇಳುತ್ತ ವಿಭಜನೆಗೆ ಮುಂದಾಗುವುದನ್ನು ಯಾರೂ ಒಪ್ಪುವುದಿಲ್ಲ. ರಾಜ್ಯಪಾಲರಿಗೆ ಸರ್ಕಾರದ ಅವೈಜ್ಞಾನಿಕ ಕ್ರಮಗಳನ್ನು ವಿವರಿಸಿದ್ದೇನೆ. ಯಾವುದೇ ಕಾರಣಕ್ಕೂ ಸುಗ್ರೀವಾಜ್ಞೆಗೆ ಅಂಕಿತ ಹಾಕಬೇಡಿ. ಬಿಬಿಎಂಪಿ ವಿಭಜನೆಗೆ ಒಪ್ಪಿಗೆ ನೀಡಬೇಡಿ. ಚುನಾವಣೆ ನಡೆಸಲು ಸೂಚಿಸಿ ಎಂದು ವಿನಂತಿಸಿದ್ದೇನೆ. ರಾಜ್ಯಪಾಲರು 18 ವರ್ಷ ಸಚಿವರಾಗಿದ್ದವರು, ತಮ್ಮ ಅನುಭವಕ್ಕೆ ತಕ್ಕಂತೆ ಕ್ರಮಕೈಗೊಳ್ಳುತ್ತಾರೆ ಎಂದರು. ಬಿಬಿಎಂಪಿ ಜೆಡಿಎಸ್ ನಾಯಕ ಪ್ರಕಾಶ್ ಹಾಜರಿದ್ದರು.