ರಿಜಿಸ್ಟ್ರಾರ್ ಶೀಘ್ರ ನೇಮಕ
ಮುಂದಿನ ಒಂದು ವಾರದಲ್ಲಿ ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಯನ್ನು ಭರ್ತಿ ಮಾಡುವುದಾಗಿ ಸರ್ಕಾರ ಹೈಕೋರ್ಟ್‍ಗೆ ಮೌಖಿಕವಾಗಿ ಹೇಳಿಕೆ ನೀಡಿದೆ...
ಬೆಂಗಳೂರು: ಮುಂದಿನ ಒಂದು ವಾರದಲ್ಲಿ ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಯನ್ನು ಭರ್ತಿ ಮಾಡುವುದಾಗಿ ಸರ್ಕಾರ ಹೈಕೋರ್ಟ್‍ಗೆ ಮೌಖಿಕವಾಗಿ ಹೇಳಿಕೆ ನೀಡಿದೆ. ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಧಿಕಾರಿ ಡಾ. ಪಿ.ಸಿ.ಜಾಫರ್ ಅವರನ್ನು ನೇಮಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾ. ಬಿ.ಮನೋಹರ್ ಅವರಿದ್ದ ನ್ಯಾಯಪೀಠಕ್ಕೆ ಸರಕಾರ ಈ ಹೇಳಿಕೆ ನೀಡಿದೆ.
ವಿಚಾರಣೆ ವೇಳೆ ಹಾಜರಿದ್ದ ಸರ್ಕಾರಿ ವಕೀಲರು, ಲೋಕಾಯುಕ್ತ ಸಂಸ್ಥೆಗೆರಿಜಿಸ್ಟ್ರಾರ್ ನೇಮಕ ಸಂಬಂಧ ಅಡ್ವೋಕೇಟ್ ಜನರಲ್ ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ.ಮುಂದಿನ ಒಂದು ವಾರದಲ್ಲಿ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ಹಿಂದೆ ನಡೆದ ವಿಚಾರಣೆ ವೇಳೆ, ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆ ಭ್ರಷ್ಟಾಚಾರ ತನಿಖೆಗೆ ಸಂಬಂಧಿಸಿದ್ದಾಗಿದ್ದು ಹೆಚ್ಚು ಖಾಲಿ ಬಿಡುವುದು ಸೂಕ್ತವಲ್ಲ ಎಂದು ಹೈಕೋರ್ಟ್ ಹೇಳಿತ್ತು.
ಪ್ರಕರಣವೇನು?
ಲೋಕಾಯುಕ್ತ ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಧಿಕಾರಿ ಜಾಫರ್ ಅವರನ್ನು ಆ. 6ರಂದು ಸರ್ಕಾರ ನೇಮಕಗೊಳಿಸಿಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಕೀಲಆನಂದ ಮೂರ್ತಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ದೂರುಗಳುಬಹುತೇಕ ಐಎಎಸ್, ಐಪಿಎಸ್ ಮತ್ತು ರಾಜಕಾರಣಿ ಗಳದ್ದೇ ಆಗಿವೆ. ಲೋಕಾಯುಕ್ತದಂತಹ ಸಂಸ್ಥೆಯಲ್ಲಿ ಸಾರ್ವಜನಿಕ ಅಧಿಕಾರಿಯನ್ನು ನೇಮಕ ಮಾಡಬೇಕಾದಲ್ಲಿ ಅವರ ಪ್ರಾಮಾಣಿಕತೆಯೂ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಇದನ್ನು ಇದನ್ನು ಗಮನದಲ್ಲಿಡದೆ ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ತನ್ನ ನಿಯಂತ್ರಣದಲ್ಲಿರಬೇಕು ಎಂಬ ಪ್ರಯತ್ನಕ್ಕೆ ಕೈ ಹಾಕುವ ಮೂಲಕ ಈ ಅಧಿಕಾರಿಯನ್ನು ನೇಮಿಸಿದೆ. ಸಂಸ್ಥೆಯ ಗೌರವವನ್ನು ಉಳಿಸುವ ಸಲುವಾಗಿ ಜಾಫರ್ ಅವರನ್ನು ನೇಮಿಸಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.