ಬೆಂಗಳೂರು: ಪಕ್ಷ ಸಂಘಟನೆ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನಡೆಸಿದ ಗುಂಪು ಸಭೆಯಲ್ಲಿ 80 ಕ್ಕೂ ಹೆಚ್ಚು ಶಾಸಕರು ಸರ್ಕಾರದ ವಿರುದ್ಧ ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಸರ್ಕಾರ ಟೇಕಾಫ್ ಆಗಿಲ್ಲ ಎಂಬ ವಾತಾವರಣ ಇನ್ನೂ ರಾಜ್ಯದಲ್ಲಿ ಮನೆ ಮಾಡಿದ್ದು, ಕೆಲವು ಸಚಿವರ ಬೇಜವಾಬ್ದಾರಿ ಕಾರ್ಯವೈಖರಿಯೇ ಇದಕ್ಕೆ ಕಾರಣ ಎಂದು ನೇರವಾಗಿಯೇ ಆರೋಪಿಸಿದ್ದಾರೆ. ಅಸಮರ್ಥ ಸಚಿವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆಯೂ ಬೇಡಿಕೆ ಸಲ್ಲಿಸಿದ್ದಾರೆ.ಹೆಚ್ಚು -ಕಡಿಮೆ ಮುಕ್ಕಾಲು ಭಾಗದಷ್ಟು ಕಾಂಗ್ರೆಸ್ ಶಾಸಕರಿಗೆ ಸಚಿವರ ವರ್ತನೆ ಬಗ್ಗೆ ಅಸಮಾಧಾನವಿದೆ. ಇವರನ್ನು ಸಂಪುಟದಿಂದ ಕೈ ಬಿಟ್ಟು ಸರ್ಕಾರಕ್ಕೆ ಚುರುಕು ಮುಟ್ಟಿಸದೇ ಇದ್ದರೆ ಪಂಚಾಯಿತ್ ಚುನಾವಣೆಯಲ್ಲಿಯೂ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಹೀಗಾಗಿ ಬಜೆಟ್ ಅಧಿವೇಶನದ ಬಳಿಕ 8ರಿಂದ 10 ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, ಸಮರ್ಥರಿಗೆ ಅವಕಾಶ ನೀಡುವಂತೆ ಕಾಂಗ್ರೆಸ್ ವರಿಷ್ಠ ಮಂಡಳಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಲು ಮುಂದಾಗಿದೆ.ಶಾಸಕರು ನೀಡಿದ ಅಭಿಪ್ರಾಯ ದಿಗ್ವಿಜಯ್ ರನ್ನೇ ಅಚ್ಚರಿಗೆ ನೂಕಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ವಿರುದ್ಧ ಆರೋಪ ವ್ಯಕ್ತಪಡಿಸುವ ರೀತಿಯಲ್ಲಿಯೇ ಗುಂಪು ಸಭೆಯಲ್ಲೂ ಶಾಸಕರು ಕಿಡಿಕಾರಿದ್ದಾರೆ. ಇಂಥ ಅಸಮರ್ಥರಿಂದಲೇ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಎಂಬ ಸ್ಥಿತಿ ನಿರ್ಮಾ ವಾಗಿದೆ ಎಂಬ ಆರೋಪಕ್ಕೆ ಸಿಂಗ್ ಕೂಡಾ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಮಾನದಂಡ: ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ಆಧಾರದ ಮೇಲೆ ಸಚಿವರನ್ನು ಕೈ ಬಿಟ್ಟರೆ ಅವರು ಪ್ರತಿನಿಧಿಸುವ ಸಮುದಾಯದ ಕೋಪ ಎದುರಿಸಬೇಕಾಗುತ್ತದೆ. ಇದು ಸದ್ಯದಲ್ಲೇ ಎದುರಾಗುವ ಪಂಚಾಯಿತಿ ಚುನಾವಣೆ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ.
ಹೀಗಾಗಿ ಪ್ರತಿಯೊಬ್ಬ ಸಚಿವರ ಕಾರ್ಯ ವೈಖರಿಯ ಬಗ್ಗೆ ಆಂತರಿಕ ಮೌಲ್ಯಮಾಪನ ನಡೆಸಿ, ಅನರ್ಹರಿಗೆ ಕೊಕ್‍ಗೆ ತೀರ್ಮಾನಿಸಲಾಗಿದೆ.ಮೌ ಲ್ಯಮಾಪನದ ಪ್ರಸ್ತಾಪ ಮಾಡುತ್ತಿದ್ದಂತೆ ಸಚಿವರಲ್ಲಿ ಆತಂಕ ಆರಂಭವಾಗಿದೆ. ಜಾತಿ ಹಾಗೂ ವರಿಷ್ಠರ ಬೆಂಬಲದ ಬಲವನ್ನು ಆಧರಿಸಿ ಸಂಪುಟದಲ್ಲೇ ಉಳಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಅವಕಾಶ ನೀಡದೇ ಸಚಿವರ ಮೌಲ್ಯ ಮಾಪನ ವರದಿ ನೀಡುವಂತೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರಗೆ ಸೂಚಿಸಿದ್ದು, ಈ ಎಲ್ಲ ಪ್ರಕ್ರಿಯೆ ಮುಗಿದು ಸಂಪುಟ ಪುನಾರಚನೆಗೆ ಏಪ್ರಿಲ್ ಅಂತ್ಯದವರೆಗೆ ಕಾಯಬೇಕು. ಪುನಾರಚನೆಯಾದರೆ ಮಂಗಳೂರು ಭಾಗಕ್ಕೆ ನೀಡಿದ್ದ 4 ಸ್ಥಾನದ ಪೈಕಿ 2, ಮೈಸೂರು ಭಾಗದ ಒಂದು, ಬೆಂಗಳೂರು ನಗರದ ಒಂದು ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿದ ಒಬ್ಬರು ಸಚಿವ ಸ್ಥಾನ ಕಳೆದುಕೊಳ್ಳಲಿದ್ದು, ಜಾತಿ ಹಾಗೂ ಜಿಲ್ಲೆ ಆಧಾರದ ಮೇಲೆ ಹೊಸ ಸಚಿವರ ಸೇರ್ಪಡೆಯಾಗಲಿದೆ ಎಂದು ತಿಳಿದು ಬಂದಿದೆ.
ಆಪರೇಷನ್ ಕಾಂಗ್ರೆಸ್ ಮಾಡಲ್ಲ
ಬೆಳಗಾವಿ: ರಾಜ್ಯದಲ್ಲಿ ಆಪರೇಷನ್ ಕಾಂಗ್ರೆಸ್ ಮಾಡಲ್ಲ. ಕಾಂಗ್ರೆಸ್ ಪಕ್ಷದ ತತ್ವ, ಸಿದಾಟಛಿಂತ ಒಪ್ಪಿಕೊಂಡು ಬರುವವರನ್ನು ಸ್ವಾಗತಿಸುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್, ಜೆಡಿಎಸ್‍ನಮೂವರು ಶಾಸಕರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂಬ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಯಾರಾದರೂ ಬರುವುದಾದರೆ ಮೊದಲು ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಬರಬೇಕು ಎಂದರು.